ಮಂಗಳೂರು : ಆಯನ ನಾಟಕದ ಮನೆ ಮತ್ತು ರಂಗ ಅಧ್ಯಯನ ಕೇಂದ್ರ ಹಾಗೂ ಸಂತ ಆಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಮಂಗಳೂರು ಸಹಭಾಗಿತ್ವದಲ್ಲಿ ಎರಡು ನಾಟಕ ಪ್ರದರ್ಶನವು ದಿನಾಂಕ 04-03-2024 ಮತ್ತು 05-03-2024ರಂದು ಸಂಜೆ 7-00 ಗಂಟೆಗೆ ಸಂತ ಆಲೋಶಿಯಸ್ ಸಹೋದಯ ರಂಗಮಂದಿರದಲ್ಲಿ ನಡೆಯಲಿದೆ.
ದಿನಾಂಕ 04-03-2024ರಂದು ಚಂದ್ರಶೇಖರ್ ಕೆ. ನಿರ್ದೇಶನದಲ್ಲಿ ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ಹೋರಾಟದ ಹಾಡುಗಳ ಹುಟ್ಟಿನ ಕಥನ ‘ಪಂಚಮಪದ’ ಮತ್ತು ದಿನಾಂಕ 05-03-2024ರಂದು ಶ್ರೀಜಿತ್ ಸುಂದರಂ ಬೆಂಗಳೂರಿನ ಪಯಣ ಪ್ರಸ್ತುತ ಪಡಿಸುವ ಮಂಗಳಮುಖಿಯರ ನಿಜ ಕನಸು ‘ತಲ್ಕಿ’ ನಾಟಕಗಳ ಪ್ರದರ್ಶನ ನಡೆಯಲಿದೆ.
ಪಂಚಮಪದ :
ಕರ್ನಾಟಕದಲ್ಲಿ ಹೋರಾಟದ ಹಾಡುಗಳ ದೊಡ್ಡ ಪರಂಪರೆಯೇ ಇದೆ. ಆ ಹಾಡುಗಳೊಂದಿಗೆ ಇಲ್ಲಿನ ಹಲವು ಜನ ಸಮುದಾಯಗಳ ಸಂಸ್ಕೃತಿ, ಬದುಕು, ಬವಣೆ, ಚಳುವಳಿಯ ನೆನಪುಗಳು ಬೆಸೆದುಕೊಂಡಿವೆ. ಇಂತಹ ಹತ್ತಾರು ಹಾಡುಗಳ ಹುಟ್ಟಿನ ಸುತ್ತಲಿನ ಕಥನಗಳನ್ನು ನಾವು ಬಗೆಯುತ್ತಾ ಹೋದಂತೆ ಈ ನೆಲದ ಸಾಂಸ್ಕೃತಿಕ ಇತಿಹಾಸದ ಭಿನ್ನ ಮಗ್ಗುಲುಗಳು ತೆರೆದುಕೊಳ್ಳುತ್ತವೆ. ಪ್ರಸ್ತುತ ಪ್ರಯೋಗ ಹಾಡು, ನೆನಪು, ಮರೆತ ಇತಿಹಾಸವನ್ನು ವಿಶಿಷ್ಟ ನೇಯ್ಗೆಯಲ್ಲಿ ಬೆಸೆದು ಕಟ್ಟಿರುವ ಸಂಗೀತ ಪ್ರಯೋಗ. ಇದು ಹೀಗೆ ಮುಂದೆ ಆಗಲಿರುವ ಹಲವು ಪ್ರಯೋಗಗಳ ಸರಣಿಯ ಆರಂಭ ಬಿಂದು.
ಪಯಣ :
ಪಯಣ ಸಂಸ್ಥೆಯು 2009ರಲ್ಲಿ ಸ್ಥಾಪನೆಯಾಗಿದ್ದು, ಲೈಂಗಿಕತೆ ಅಲ್ಪ ಸಂಖ್ಯಾಂತ ಸಮುದಾಯಗಳ ಹಕ್ಕು ಹಾಗೂ ಆರೋಗ್ಯದ ವಿಷಯವಾಗಿ ಕರ್ನಾಟಕ ರಾಜ್ಯದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ.
ಟ್ರುಥ್ ಡ್ರೀಮ್ :
ಟ್ರುಥ್ ಗ್ರೀಮ್ ಅಥವಾ ನಿಜವಾದ ಕನಸು ಎಂದರೆ ಟ್ರಾನ್ಸ್ ಸಮುದಾಯದ ಮಂಗಳಮುಖಿಯರು ಕಂಡಿರುವ ಕನಸು ನಿಜವಾಗುವ ಒಂದು ಕಲ್ಪನೆ. ಜೀವನದಲ್ಲಿ ನೋವು, ಹಿಂಸೆ, ತಾರತಮ್ಯಗಳನ್ನು ಅನುಭವಿಸಿ, ಬದುಕಿನ ದಾರಿಯನ್ನು ಸವಾಲಾಗಿ ತೆಗೆದುಕೊಂಡು ತಮ್ಮನ್ನು ತಾವೇ ಗೌರವದಿಂದ ಕಾಣುತ್ತಾ ಮುಂದೆ ಸಾಗಲು ಮಾಡುತ್ತಿರುವ ಹೋರಾಟಗಳ ನಡುವೆಯೂ, ತಮ್ಮ ಕನಸುಗಳನ್ನು ಜೀವಂತವಾಗಿರಿಸಿಕೊಂಡು, ಅದು ಯಾವತ್ತೋ ನನಸಾಗುತ್ತದೆ ಎಂಬ ಅವರ ಭರವಸೆಗೆ ರೂಪ ಕೊಡುವ ಪ್ರಯತ್ನ ಟ್ರುಥ್ ಗ್ರೀಮ್ ಪ್ರಾಜೆಕ್ಟ್. ಈ ಕನಸುಗಳು, ಬಹುತೇಕ ತಾವು ಎಳೆಯ ವಯಸ್ಸಿನಲ್ಲಿ ಇಷ್ಟ ಪಟ್ಟ ನಾಯಕಿಯರಾಗಿ ಬದಲಾಗುವ ಕನಸು. ತಮ್ಮ ಗುರುತಿಸುವಿಕೆಯನ್ನು ಅರಿತುಕೊಳ್ಳುವ ಮೊದಲನೇ ಹೆಜ್ಜೆ ಕೂಡ ಈ ಕನಸುಗಳು ಎಂಬುದು ವಿಶೇಷ. ಇದರ ಅಂಗವಾಗಿ, 55 ವರ್ಷ ದಾಟಿದ ಸಮುದಾಯದವರನ್ನು ಆಹ್ವಾನಿಸಿ, ತಮ್ಮ ಕನಸಿನ ನಾಯಕಿಯರಂತೆ ತಯಾರಾಗಿ, ಆ ಕನಸನ್ನು ಫೋಟೋ ಹಾಗೂ ಫೋಟೋ ಪ್ರದರ್ಶನದ ಮೂಲಕ ಶಾಶ್ವತಗೊಳಿಸುವ ಒಂದು ಸುಂದರ ಯತ್ನ. ಈ ಯೋಜನೆಯನ್ನು, ಪಯಣ ಸಂಸ್ಥೆಯ ನಿರ್ದೇಶಕಿ ಚಾಂದಿನಿ ಅವರು ಕಲ್ಪಿಸಿಕೊಂಡು, ಪಯಣವನ್ನು ಸ್ಥಾಪಿಸಿದ ರೆಜಿನಾಲ್ಡ್ ಅವರ ಮೊದಲನೇ ಪುಣ್ಯ ಸ್ಮರಣೆಯ ಅಂಗವಾಗಿ, 2021ರಲ್ಲಿ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಒಂದು ನೃತ್ಯ ಪ್ರದರ್ಶನ ಹಾಗೂ ಫೋಟೋ ಎಕ್ಸಿಬಿಷನ್ ಮೂಲಕ ಉದ್ಘಾಟಿಸಿದರು.
ತಲ್ಕಿ :
ಲೈಂಗಿಕತೆ ಅಲ್ಪ ಸಂಖ್ಯಾತ ಸಮುದಾಯದವರು ಅತೀ ಹೆಚ್ಚು ಪ್ರೀತಿಸುವ, ಮಾಂಸದಿಂದ ತಯಾರು ಮಾಡುವ ಆಹಾರ ಪಧಾರ್ಥದ ಹೆಸರು ತಲ್ಕಿ. ನೃತ್ಯ ಕಾರ್ಯಕ್ರಮದ ಮೂಲಕ ತೆರವುಗೊಂಡ ಟ್ರುಥ್ ಗ್ರೀಮ್ ಪ್ರಾಜೆಕ್ಟ್ ನ ಮುಂದಿನ ಭಾಗವಾಗಿ, ತಲ್ಕಿ ನಾಟಕ ರೂಪಗೊಂಡಿದೆ. 55 ವರ್ಷ ದಾಟಿದ ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸಿ,” ಒಂದು ನಾಟಕ ಕಟ್ಟಿ, ಅವರೇ ಅಭಿನಯಿಸಿ, ಈ ನಾಟಕದ ಮೂಲಕ ಅವರ ಕನಸುಗಳು ಮತ್ತೆ ಮತ್ತೆ ನಿಜವಾಗಿಸಬೇಕೆನ್ನುವ ವಿಶೇಷ ಆಶಯಕ್ಕೆ ಶ್ರೀಜಿತ್ ಸುಂದರಂ ಅವರ ನಿರ್ದೇಶನ ಕೈಜೋಡಿಸಿದೆ. ಸಮುದಾಯದ ಹಿರಿಯರನ್ನು ಒಳಗೊಂಡ ನಾಟಕವಾದ್ದರಿಂದ, ಸಮುದಾಯದ ಸುಂದರ ಸಾಂಸ್ಕೃತಿಕ ಚಿತ್ರಣವನ್ನು ಕಟ್ಟಿಕೊಡುವ ಸಾಧ್ಯತೆಯನ್ನು ಕಂಡುಹಿಡಿದು, ಇದನ್ನು ಸಫಲಗೊಳಿಸಲು ನಿರ್ದೇಶಕ ಶ್ರೀಜಿತ್ ಸುಂದರಂ ಅವರ ಸಮುದಾಯದೊಟ್ಟಿಗಿನ ಅಗಾಧ ಅನುಭವ ನೆರವಾಗಿದೆ.
ಈ ಸಾಂಸ್ಕೃತಿಕ ಚಿತ್ರಣದ ಅಂಗವಾಗಿ, ಆಹಾರ ಮಾತ್ರವಲ್ಲದೆ, ಯಾವುದೇ ಲಿಪಿಯಲ್ಲಿ ಇಲ್ಲದ ಲೈಂಗಿಕತೆ ಅಲ್ಪ ಸಂಖ್ಯಾತ ಸಮುದಾಯದವರು ಬಳಸುವ ಭಾಷೆಯು ವಿಶೇಷವಾಗಿ ಎದ್ದು ಕಾಣುತ್ತದೆ. ಸಂಸ್ಕೃತಿ ಮಾತ್ರವಲ್ಲದೆ, ಸಮಾಜದಲ್ಲಿ ತಾವು ಅನುಭವಿಸಿರುವ ತಾರತಮ್ಯಗಳು ಹಾಗೂ ಹಲವಾರು ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಸಮುದಾಯದ ಯುವ ಪೀಳಿಗೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಆತ್ಮಹತ್ಯೆ ಪ್ರಕರಣಗಳಿಂದ ನೊಂದಿರುವ ಹಿರಿಯರು, ಇದರ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಲು ತಲ್ಕಿ ನಾಟಕವು ಅನುವು ಮಾಡಿಕೊಟ್ಟಿದೆ. ಲಿಂಗ, ಲಿಂಗತ್ವ ಹಾಗೂ ಲೈಂಗಿಕತೆಯ ಬಗ್ಗೆ ಈಗಾತಾನೆ ಅರ್ಥ ಮಾಡಿಕೊಳ್ಳುತ್ತಿರುವ ಸಮುದಾಯದ ಹೊಸ ಪೀಳಿಗೆಯವರಿಗೆ, ತಮ್ಮ ದೇಹದಲ್ಲಿ ಆಗುವ ಅಪಾರ ಬದಲಾವಣೆಗಳು ಹಾಗೂ ಅದರಿಂದ ಆಗುವ ಮಾನಸಿಕ ಪರಿಣಾಮಗಳ ಬಗ್ಗೆ ಚರ್ಚೆಗಳು ಅನಿವಾರ್ಯ ಎಂಬ ನಿಲುವನ್ನು ತಾಳುವುದರ ಮೂಲಕ, ಈ ಸೂಕ್ಷ್ಮ ವಿಚಾರದ ಬಗ್ಗೆ ಚಿಂತನೆಗೆ ಹಚ್ಚಲಾಗಿದೆ.