ಬೆಂಗಳೂರು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ 2023-24ನೇ ಸಾಲಿನ ‘ಗಡಿನಾಡ ಚೇತನ ರಾಜ್ಯ ಪ್ರಶಸ್ತಿ’ಗಳನ್ನು ದಿನಾಂಕ 01-03-2024ರಂದು ಪ್ರಕಟಿಸಲಾಗಿದೆ. ಕಾಸರಗೋಡಿನ ಹಿರಿಯ ಸಾಹಿತಿ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಅವರು ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಹಿರೇಮಠ ಭಾಲ್ಕಿ ಇವರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಜತೆಗೆ ಕನ್ನಡದ ಏಕೀಕರಣದ ಹೋರಾಟದ ವೀರಾಗ್ರಣಿ ಡಾ. ಜಯದೇವಿತಾಯಿ ಲಿಗಾಡೆ ಇವರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿಗೆ ಬೀದರ್‌ನ ಹಿರಿಯ ಕನ್ನಡ ಹೋರಾಟಗಾರ ಶ್ರೀ ಪಂಚಾಕ್ಷರಿ ಪುಣ್ಯಶೆಟ್ಟಿ ಹಾಗೂ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಇವರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿಗೆ ಬೆಳಗಾವಿಯ ಕನ್ನಡ ಚಿಂತಕರಾದ ಪ್ರೊ. ಬಿ.ಎಸ್. ಗವಿಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ತಿಳಿಸಿದ್ದಾರೆ.
ನಾಡು, ನುಡಿ, ಸಾಹಿತ್ಯ ಹಾಗೂ ಕನ್ನಡ ಭಾಷೆಗಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಹಾಗೂ ಹೊರ ರಾಜ್ಯದ ಗಡಿ ಕನ್ನಡ ಪ್ರದೇಶಗಳಲ್ಲಿನ ಸಂಘ ಸಂಸ್ಥೆಗಳು/ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಲು 2023-24ನೇ ಸಾಲಿನಲ್ಲಿ ಸರ್ಕಾರವು ರಚಿಸಿದ್ದ ಆಯ್ಕೆ ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಬರಗೂರು ರಾಮಚಂದ್ರಪ್ಪರವರ ಅಧ್ಯಕ್ಷತೆಯಲ್ಲಿ ಡಾ. ಸರಜೂ ಕಾಟಕರ ಹಿರಿಯ ಸಾಹಿತಿಗಳು ಬೆಳಗಾವಿ, ಡಾ. ಎಂ.ಎಸ್. ದುರ್ಗಾ ಪ್ರವೀಣ್ ಕನ್ನಡ ಪ್ರಾಧ್ಯಾಪಕರು ಆಂಧ್ರಪ್ರದೇಶ ಹಾಗೂ ಡಾ. ಆರ್. ನಾಗಪ್ಪ ಗೌಡ ಕನ್ನಡ ಪ್ರಾಧ್ಯಾಪಕರು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಪ್ರಕಾಶ್ ಮತ್ತೀಹಳ್ಳಿ ಕಾರ್ಯದರ್ಶಿ ಗಡಿ ಅಭಿವೃದ್ಧಿ ಪ್ರಾಧಿಕಾರ, ಇವರುಗಳನ್ನೊಳಗೊಂಡ ಆಯ್ಕೆ ಸಮಿತಿಯು ಪ್ರಸ್ತುತ ಸಾಲಿನಲ್ಲಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ತಲಾ ರೂ.1 ಲಕ್ಷ ಮತ್ತು ಪುರಸ್ಕಾರವನ್ನು ಒಳಗೊಂಡಿದೆ. ಪ್ರಶಸ್ತಿ ಆಯ್ಕೆ ಸಮಿತಿಯು ಈ ಮೊತ್ತವನ್ನು ರೂ.3 ಲಕ್ಷಕ್ಕೆ ಹೆಚ್ಚಿಸಲು ಪ್ರಾಧಿಕಾರಕ್ಕೆ ಸಲಹೆ ಮಾಡಿದೆ.
ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ
ಶ್ರೀ ಪಂಚಾಕ್ಷರಿ ಪುಣ್ಯಶೆಟ್ಟಿ
ಪ್ರೊ. ಬಿ.ಎಸ್. ಗವಿಮಠ