ನವದೆಹಲಿ : ದಿನಾಂಕ 03-04-2024ರಂದು ದೆಹಲಿಯ ಲೋಧಿ ಎಸ್ಟೇಟ್ ನಲ್ಲಿರುವ ದೆಹಲಿ ಕನ್ನಡ ಶಾಲೆಯ ಒಂದು ಕೊಠಡಿಯಲ್ಲಿ ಕನ್ನಡ ನಾಟಕದ ಪ್ರಯೋಗ ನಡೆಯಿತು. ದ.ರಾ. ಬೇಂದ್ರೆಯವರ ನಾಟಕ ‘ತಿರುಕರ ಪಿಡುಗು’. ನಾಟಕದ ಪರಿಚಯ ಮಾಡುತ್ತಾ ನಿರ್ದೇಶಕರು ಮಾಹಿತಿ ನೀಡಿದ ಪ್ರಕಾರ ದ.ರಾ. ಬೇಂದ್ರೆಯವರು ಈ ನಾಟಕವನ್ನು ರಚಿಸಿದ್ದು ಬರೋಬ್ಬರಿ ಒಂದು ನೂರು ವರುಷಗಳ ಹಿಂದೆ (1924ರಲ್ಲಿ). ಬೇಂದ್ರೆ ಅವರ 128ನೇ ಜನ್ಮ ದಿನದ ಕಾರಣಕ್ಕಾಗಿ ಈ ನಾಟಕ, ನಮ್ಮ ಬಿಜಾಪುರದ ಒಂದು ಕಾಲದ ಸಕ್ರಿಯ ರಂಗಕಾರ್ಯಕರ್ತ, ಕಳೆದ ಮೂವತ್ತು ವರುಷಗಳಿಂದ ದೆಹಲಿ ವಾಸಿ ನಿರ್ದೇಶಕ ಶಿವಾನಂದ ಇಂಗಳೇಶ್ವರ ಅವರು ದೆಹಲಿಯಲ್ಲಿನ ಕೇಂದ್ರ ಸರ್ಕಾರಿ ಕಚೇರಿಗಳು ಸರ್ಕಾರ, ದೆಹಲಿ ರಾಜ್ಯ ಸರ್ಕಾರ ಕಚೇರಿಗಳು, ದೆಹಲಿ ಮತ್ತು ಕೇಂದ್ರ ಸರ್ಕಾರಗಳ ಹಲವು ನಿಗಮ ಮತ್ತು ಮಂಡಳಿಗಳಲ್ಲಿ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ದೆಹಲಿ ಕನ್ನಡಿಗರನ್ನು ಸೇರಿಸಿ ಕಟ್ಟಿಕೊಂಡಿರುವಂತಹ ಒಂದು ಕನ್ನಡ ಭಾಷೆಯ ಸಾಂಸ್ಕೃತಿಕ ಚಟುವಟಿಕೆಗಳ ಸಂಸ್ಥೆ ‘ದಿನಕರ ಫೌಂಡೇಷನ್’. ದೆಹಲಿ ನಗರ ಕನ್ನಡ ಕಲಾವಿದರ ಸಂಘದ ಹೆಚ್ಚಿನ ಸದಸ್ಯರು ಹುಬ್ಬಳ್ಳಿ-ಧಾರವಾಡ, ಹಗರಿಬೊಮ್ಮನಹಳ್ಳಿ, ದಾವಣಗೆರೆ, ಬಿಜಾಪೂರ, ಕಲಬುರಗಿ ಮುಂತಾದ ಹಲವು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಜಿಲ್ಲೆಗಳ ಮಂದಿ, ಮಾತ್ರವಲ್ಲದೆ ಕಲೋಪಾಸಕರು. ಮತ್ತು ದ.ಕ. ಜಿಲ್ಲೆಯ ಜನ ಕೂಡ ಈ ಸಂಸ್ಥೆಯಲ್ಲಿದ್ದಾರೆ.
ದೆಹಲಿಯ ದೂರ ದೂರದ ಪ್ರದೇಶಗಳಲ್ಲಿ ವಾಸಿಸುವ ಈ ದೆಹಲಿ ಕನ್ನಡಿಗರು, ತಮ್ಮ ಕಚೇರಿಯ ಕೆಲಸ ಕಾರ್ಯಗಳನ್ನು ಮುಗಿಸಿ, 30-40 ಕಿಲೋಮೀಟರ್‌ಗಳ ದೂರವನ್ನು ಮೆಟ್ರೋ, ಬಸ್ ಮತ್ತು ಸ್ವಂತ ವಾಹನಗಳಲ್ಲಿ ಪ್ರಯಾಣ ಮಾಡಿ, ನಿರ್ದೇಶಕರ ಶಿಸ್ತಿನ ಕೆಂಗಣ್ಣಿಗೆ ಗುರಿಯಾಗಿ, ಬೈಗುಳ ತಿಂದು, ಅಂತಿಮವಾಗಿ ನಾವೂ ನಾಟಕ ಮಾಡಬೇಕು, ಅಭಿನಯಿಸಬೇಕು ಎನ್ನುವ ಉಮೇದಿನಲ್ಲಿ ತಿಂಗಳಿಗೂ ಹೆಚ್ಚು ದಿನ ತಾಲೀಮು ನಡೆಸಿ, ರಂಗ ಪ್ರದರ್ಶನ ನೀಡುವುದು ಸಣ್ಣ ಮಾತಲ್ಲ. ಅಪಾರ ತಾಳ್ಮೆ, ರಂಗಭೂಮಿ ಹುಚ್ಚು, ಎಲ್ಲವೂ ಮುಖ್ಯ.
ರಂಗಭೂಮಿ, ತನ್ನ ರಂಗ ಚಟುವಟಿಕೆಗಳ ಮುಖಾಂತರ ಸಾಮಾನ್ಯ ಜನರನ್ನು ತಲುಪಬೇಕು, ಎಲ್ಲರನ್ನೂ ಬೆಸೆಯುವ ಸೇತುವೆ ಆಗಬೇಕು ಎನ್ನುವುದು ಒಟ್ಟಾರೆ ರಂಗಭೂಮಿ ಆಶಯ. ನಿನ್ನೆ ದೆಹಲಿ ಕನ್ನಡ ಶಾಲೆಯ ಎಸ್.ವಿ. ಕೃಷ್ಣಮೂರ್ತಿ ರಾವ್ ಹೆಸರಿನ ಒಂದು ಪರಿವರ್ತಿತ ಆಪ್ತ ರಂಗಮಂದಿರದಲ್ಲಿ ‘ತಿರುಕರ ಪಿಡುಗು’ ನಾಟಕ ನೋಡಿದಾಗ ಈ ಮಾತು ನೂರಕ್ಕೆ ನೂರು ಖರೆ ಅನ್ನಿಸಿತು.
ಆಪ್ತ ಸಭಾಂಗಣದಲ್ಲಿ ಹಾಜರಿದ್ದ ಎಪ್ಪತ್ತಕ್ಕೂ ಹೆಚ್ಚು ಪ್ರೇಕ್ಷಕರಿಗೆ, ಬೇಂದ್ರೆ ಅಜ್ಜ ಎಲ್ಲರಿಗೂ ಗೊತ್ತು. ಗೊತ್ತು ಎಂದರೆ ಕೇವಲ ಹೆಸರಿನ ಪರಿಚಯ ಅಲ್ಲ…ಬಾರೋ ಸಾಧನ ಕೇರಿಗೆ ಎನ್ನುವ ಜನಮನದ ಹಾಡನ್ನು ಯಾರ ಒತ್ತಾಯಕ್ಕೂ ಒಳಗಾಗದೆ ಸುಶ್ರಾವ್ಯ ವಾಗಿ ಹಾಡಿ, ನಂತರ ನಡೆದ ಪ್ರಯೋಗದ ಬಗ್ಗೆ ಸಂವಾದ ಮಾಡಿದವರು ಒಬ್ಬರಾದರೆ, ಬೇಂದ್ರೆ ಯಾವ ಕಾಲಕ್ಕೆ ಯಾವ ನಾಟಕಗಳನ್ನು ರಚನೆ ಮಾಡಿದರು ಎನ್ನುವ ಮಾಹಿತಿ ನೀಡಿದವರು ಮತ್ತೊಬ್ಬರು. ಈ ನಾಟಕಕ್ಕೆ ಪ್ರೇರಣೆ ಅವರದೇ ಮತ್ತೊಂದು ನಾಟಕ ಜಾತ್ರೆ ಇರಬಹುದು ಎಂದು ಮತ್ತೊಬ್ಬರು ಮಾತನಾಡಿದರೆ, ಕುರುಡು ಕಾಂಚಾಣದ ಸಾರವೇ ಈ ನಾಟಕ ಎಂದು ವ್ಯಾಖ್ಯಾನಿಸಿದವರು ಮತ್ತೊಬ್ಬರು. ನಾಟಕಗಳಲ್ಲಿ ಬರುವ ಬುಡುಬುಡಿಕೆ ದಾಸಯ್ಯ, ಜೋಗಮ್ಮ, ಗೊಲ್ಲರಾಕೆ, ದಾಸರು ಮುಂತಾದ ಜನಾಂಗದವರು ನಾವು ಸಣ್ಣವರಿದ್ದಾಗ ನಮ್ಮ ಮನೆಗಳಿಗೆ ಬಂದು ನಾವು ಕೊಟ್ಟಿದ್ದನ್ನು ಪಡೆದುಕೊಂಡು ಹೋಗುತಿದ್ದರು; ಅಂತಹವರನ್ನೆಲ್ಲಾ ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿ ಧನ್ಯತಾ ಭಾವದಿಂದ ಭಾವಾವೇಶಕ್ಕೆ ಒಳಗಾದವರು ಮತ್ತೊಬ್ಬರು.
ಬೇಡುವುದು- ನೀಡುವುದು ಇವೆರಡೂ theory of economics- ಎಂದು ಅರ್ಥಶಾಸ್ತ್ರದ ಪಾಠ ಹೇಳಿ, ಇಡೀ ನಾಟಕವನ್ನು ವಿಭಿನ್ನ ಆಯಾಮದಿಂದ ಅರ್ಥೈಸಿದವರು ಮಗದೊಬ್ಬರು. ಕೊನೆಗೆ ಇಂತಹ ನೋಡುಗರ ಮಧ್ಯೆ ಇದ್ದ ನನಗೆ ಅನ್ನಿಸಿದ್ದು, ನಿರ್ದೇಶಕರು ಯಾಕೆ ಸಂವಾದ ಕಾರ್ಯಕ್ರಮ ಇಟ್ಟರು ? ಎಂದು. ಇದು ಖಂಡಿತ ಕಾಟಾಚಾರದ ಸಂವಾದವಾಗಿರದೆ, ಅತ್ಯಂತ ಆತ್ಮೀಯ, ಗಂಭೀರ ಹಾಗೂ ಜೀವಂತ ಸಂವಾದ ಕಾರ್ಯಕ್ರಮವಾಗಿತ್ತು. ಬೇಂದ್ರೆ ಬರೆದ ನಾಟಕದ ಸತ್ವಕ್ಕಿಂತ, ಬೇಂದ್ರೆ ಬೊಕ್ಕತಲೆಗೆ ಕೈಹಾಕಿ, ಕೆರೆದು, ಅವರಿಗೆ ಅವರ ನಾಟಕವನ್ನು ಅರ್ಥೈಸುವ ಪ್ರಯತ್ನಕ್ಕೆ ಒಂದೇ ಒಂದು ಹೆಜ್ಜೆ ಹಿಂದೆ ಇದ್ದರು ಪ್ರೇಕ್ಷಕ ಮಹಾಶಯರು.
ನಾಟಕದ ಹೆಸರೇ ಸೂಚಿಸುವ ಹಾಗೆ, ಒಬ್ಬ ಸಭ್ಯ, ತನ್ನ ಮನೆಯೊಡತಿಯ ಅತಿ ಶಿಸ್ತಿನ ಶಿಸ್ತಿಗೆ ತನಗಿಷ್ಟವಿಲ್ಲದಿದ್ದರೂ, ಮನೆಯೊಡತಿಯ ಪ್ರೀತಿ ಮತ್ತು ಹೆದರಿಕೆಗೆ ಒಳಗಾಗಿ ಅವಳ ಶಿಸ್ತನ್ನು ಪಾಲಿಸುವ ಸಭ್ಯ ಗಂಡ. ದೈನಂದಿನ ದಿನಚರಿಯನ್ನು ಅವಳು ಬರೆದಿರುವ ಹಾಗೆ ಸೂಚಿಸಿದ ಸಮಯಕ್ಕೆ ಮಾಡಿ ಮುಗಿಸುವ ಹಪಾಹಪಿಯಲ್ಲಿರುವ ಮನೆಯೊಡೆಯ. ಹಾಗೇ ಮಾಡುವಾಗ ಅವನ ಶಿಸ್ತನ್ನು ಭಂಗ ಮಾಡಲು ಬರುವ ಹಲವು ತಿರುಕರೇ ನಾಟಕದ ಜೀವಾಳ. ತಿರುಪೆ ಬೇಡಲು ಬಂದು ಮನೆ ಬಾಗಿಲಲ್ಲಿ ನಿಂತವರಿಗೆ, ಈ ಮನೆಯೊಡೆಯ ಅವರವರ ವರ್ತನೆಗಳ ಮುಖಾಂತರ ಅವರನ್ನು ಹಂಗಿಸಿ, ಹೀಯಾಳಿಸಿ, ಒಂದು ಕಾಸನ್ನೂ ಕೊಡದೆ ತಿರುಗಿ ಕಳುಹಿಸುವ ಧೀರ ಈ ಮನೆಯೊಡೆಯ. ಹೆಂಗಸರು ಬಂದಾಗ, ಅವರ ವರ್ತನೆ ಜೊತೆಗೆ ಅವರ ದೈಹಿಕ ಸೌಂದರ್ಯವನ್ನೂ ಹೀಯಾಳಿಸಿ ಅಪಮಾನಗೊಳಿಸುವ ವೀರ ನಮ್ಮ ಮನೆಯೊಡೆಯ. ಕೊನೆಗೂ ಯಾರಿಗೂ ತಿರುಪೆ ನೀಡದೆ, ಅಂದಿನ ಕಾರ್ಯಚಟುವಟಿಕೆಗಳನ್ನು ಮುಗಿಸಿ, ತಾನು ಊಟಕ್ಕೆ ಒಳಗೆ ಹೋಗುವುದರಲ್ಲಿ ನಾಟಕ ಕೊನೆಯಾಗುತ್ತದೆ.
ಇದು ಒಂದು ಏಕಾಂಕ ನಾಟಕ; Drawing room comedy; ಬಹಳ ಸರಳ ರಂಗಸಜ್ಜಿಕೆಯ, ಅರ್ಥಗರ್ಭಿತ ನಾಟಕ; ವಸ್ತ್ರವಿನ್ಯಾಸ ಮತ್ತು ಪ್ರಸಾಧನ ಹೊರತು ಪಡಿಸಿ ಮತ್ತೇನನ್ನೂ ಬೇಡದ ಒಂದು ಏಕಾಂಕ. ಅಭಿನಯವೇ ಮೂಲದ್ರವ್ಯವಾಗಿರುವ ಈ ನಾಟಕಕ್ಕೆ, ದೆಹಲಿಯ ಹೊರನಾಡ ಕನ್ನಡಿಗ ಕಲಾವಿದರು ಬಹಳ ಉತ್ತಮ ಪ್ರದರ್ಶನ ನೀಡಿದರು. ರಂಗಭೂಮಿ ಮತ್ತು ಅಭಿನಯದಲ್ಲಿ ಇವರಿಗೆ ಹೇಳಿಕೊಳ್ಳುವ ಸಾಧನೆ ಇಲ್ಲದಿದ್ದರೂ ಸಹ, ಯಾವುದೇ ಭಿಡೆ ಇಲ್ಲದೆ ಅಚ್ಚುಕಟ್ಟಾಗಿ, ಶ್ರದ್ಧೆಯಿಂದ ಅಭಿನಯಿಸಿ, ತಾವು ಮಾಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ ನಾಟಕದ ಎಲ್ಲ ಕಲಾವಿದರೂ ಅಭಿನಂದನಾರ್ಹರು. ಅದರಲ್ಲೂ ತುಂಬಾ ಚಪ್ಪಾಳೆ ಗಿಟ್ಟಿಸಿ, ಬೇರೆಯವರಿಗಿಂತ ಒಂದು ಗುಲಗಂಜಿ ತೂಕದಷ್ಟು ಉತ್ತಮ ಅಭಿನಯ ನೀಡಿದವರು ಬುಡುಬುಡಿಕೆಯವ (ಶ್ರೀಹರಿ ಶೇಖರ್), ಜೋಗಮ್ಮ (ಮಂಜುಳಾ ನಾಗರಾಜ್), ಗೊಲ್ಲರಾಕೆ (ಆಶಾಲತಾ ಎಂ.) ಮತ್ತು ಆಚಾರ್ಯರು (ನಾರಾಯಣ ಬಿ.)
ಎಲ್ಲಾ ಪಾತ್ರಗಳಿಗೂ ಜೀವಕಳೆ ತುಂಬಿದ ವಸ್ತ್ರಾಲಂಕಾರ ಮಾಡಿದ ಕಲಾವಿದರು, ಪ್ರಸಾದನ ಕಲಾವಿದರಾದ ಶಶಿಕಾಂತ ಪಾಟೀಲ, ರಂಗ ಸಜ್ಜಿಕೆ ಮಾಡಿದ ಹರಿಪ್ರಿಯಾ ಎಸ್. ಇವರುಗಳು ವಿಶೇಷ ಅಭಿನಂದನೆಗೆ ಅರ್ಹರು. ಸುಮ್ಮನೆ ಟೈಮ್ ಪಾಸ್ ಗಾಗಿ ನಾಟಕ ನೋಡಲು ಹೋದ ನನಗೆ, ಗಂಭೀರ ಪ್ರಸ್ತುತಿ ನೋಡಿದ ಘಾಡ ಅನುಭವ ನೀಡಿತು ಈ ಪ್ರಯೋಗ; ಅಷ್ಟೇ ಅಲ್ಲ, ಈ ನಾಟಕ ಪ್ರಸ್ತುತಿ ಕುರಿತು ಇಂತಹ ಒಂದು ಧೀರ್ಘ ಲೇಖನ ಬರೆಯಲು ಉತ್ಸಾಹ ತುಂಬಿದ ನಾಟಕದ ಪ್ರಯೋಗ, ಪ್ರಯೋಗದ ನಂತರ ಸಂವಾದ ಕಾರ್ಯಕ್ರಮದಲ್ಲಿ ಅಕಾಡಮಿಕ್ ಆಗಿ ಭಾಗವಹಿಸಿ, ಇಡೀ ರಂಗ ಮಂದಿರವನ್ನೇ ಗಂಭೀರ ಸ್ವರೂಪಕ್ಕೆ ಕರೆದೊಯ್ದ ಪ್ರೇಕ್ಷಕ ಮಹಾಶಯರು ನಿಜಕ್ಕೂ ಅಭಿನಂದನಾರ್ಹರು.
ಶಿವಾನಂದ ಇಂಗಳೇಶ್ವರರಿಗೆ ದೆಹಲಿಗೂ, ತಮ್ಮ ಮೂಲ ವಿಜಾಪುರಕ್ಕೂ ವ್ಯತ್ಯಾಸವೇ ಕಾಣುತ್ತಿಲ್ಲ. ಸುಮಾರು ನಲವತ್ತು ವರುಷಗಳ ಹಿಂದೆ ವಿಜಾಪುರದಾಗ ಏನು ರಂಗಶ್ರಮ ಮಾಡುತ್ತಿದ್ದರೋ, ಅದೇ ಶಿಸ್ತಿನ ಶ್ರಮವನ್ನು ಹಾಕಿ ‘ದಿನಕರ ರಂಗ ಸಂಸ್ಥೆ’ ಪ್ರಾರಂಭಿಸಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಮಹಾನ್ ನಾಟಕಗಳನ್ನು ದೆಹಲಿ ಕನ್ನಡಿಗರನ್ನೇ ಇಟ್ಟುಕೊಂಡು ದೆಹಲಿಯಲ್ಲಿ ನಿರಂತರ ಚಟುವಟಿಕೆ ನಡೆಸಿದ್ದಾರೆ. ಕೊರೊನಾ ಕುರಿತ ಮಾಹಾಮಾರಿ ಕಾಲದಲ್ಲೂ, ಕನ್ನಡ ರಂಗಭೂಮಿಯ ಬೆಳವಣಿಗೆಯನ್ನು ಪರಿಚಯಿಸುವ ಐವತ್ತಕ್ಕೂ ಹೆಚ್ಚು ಆನ್‌ಲೈನ್ ಕಾರ್ಯಕ್ರಮಗಳನ್ನು ಮಾಡಿ ಯು-ಟ್ಯೂಬ್ ನಲ್ಲಿ ಪರಿಚಯಿಸಿದ್ದಾರೆ.
ಸಕ್ರಿಯ ರಂಗಕರ್ಮಿಗೆ ಹಳ್ಳಿಯೂ ಒಂದೇ, ದಿಲ್ಲಿಯೂ ಒಂದೇ ಎನ್ನುವ ಹಾಗೆ ಬಿಡುವಿಲ್ಲದ, ದಣಿವರಿಯದ ನಿರಂತರ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರಿಗೆ, ಕರ್ನಾಟಕದ ಮತ್ತು ಕನ್ನಡ ರಂಗಭೂಮಿಯ ನಾವೆಲ್ಲರೂ ಅಭಿನಂದನೆಗಳನ್ನು ಹೇಳಲೇಬೇಕು. ಇಂತಹ ಹೊರನಾಡ ಕನ್ನಡಿಗರ ಪ್ರತಿಭೆಗಳನ್ನು ಗುರುತಿಸಿ, ಬೆಂಗಳೂರಿನಲ್ಲಿ ಪ್ರದರ್ಶನ ಏರ್ಪಾಡು ಮಾಡಿ, ಅವರ ದಣಿವನ್ನು ನೀಗಿಸಿ, ಬೆನ್ನು ತಟ್ಟಿದರೆ, ಇನ್ನಷ್ಟು ವರುಷಗಳ ಕಾಲ ಕನ್ನಡ ರಂಗಭೂಮಿ ಚಟುವಟಿಕೆಗಳನ್ನು ಮುಂದುವರೆಸಲು ಅವರಿಗೆ ಪ್ರೋತ್ಸಾಹ ಮತ್ತು ಶಕ್ತಿ ನೀಡಿದ ಹಾಗೆ ಆಗುತ್ತದೆ. ಇವೆಲ್ಲವನ್ನೂ ಆಗು ಮಾಡಲು, ಆರ್ಥಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರೋತ್ಸಾಹ ನೀಡಲು ಗಟ್ಟಿಯಾದ ಸಹಕಾರ ನೀಡುತ್ತಿರುವ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರನ್ನು ನಾವು ಕೃತಜ್ಞತಾ ಭಾವದಿಂದ ನೆನಪಿಸಿಕೊಂಡು, ಧನ್ಯವಾದಗಳನ್ನು ಅರ್ಪಿಸಲೇಬೇಕು.
ಗುಂಡಣ್ಣ ಚಿಕ್ಕಮಗಳೂರು
ಹಿರಿಯ ವಿಮರ್ಶಕರು