ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಕರ್ನಾಟಕ ಸಂಘ, ಪುತ್ತೂರು ಕನ್ನಡ ವಿಭಾಗ, ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ಸಹಯೋಗದಲ್ಲಿ ‘ನೆನಪಾಗಿ ಉಳಿದವರು’ ಕೃತಿ ಲೋಕಾರ್ಪಣಾ ಸಮಾರಂಭವು ದಿನಾಂಕ 29-02-2024ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕಿನ ಅಧ್ಯಕ್ಷ ಉಮೇಶ್ ನಾಯಕ್ ಇವರು ಮಾತನಾಡಿ “ಸಾಹಿತ್ಯಕವಾಗಿ ಬಹಳ ಸಮೃದ್ಧ ಮತ್ತು ಫಲ ಭರಿತವಾದ ಕ್ಷೇತ್ರ ಪುತ್ತೂರು. ಇದಕ್ಕೆ ಬಹಳ ಹಿಂದಿನ ಒಂದು ಸಾಕ್ಷಿ ಅಥವಾ ಎಲ್ಲರೂ ತಿಳಿದಿರುವಂತಹ ಹಾಗೂ ನೋಡಿರುವಂತಹ ಹಿರಿಯ ಸಾಹಿತಿಗಳು ಇಲ್ಲಿ ಮಾಡಿರುವಂತಹ ಕೃಷಿ ಇದಕ್ಕೆ ಪೂರಕವಾದ ಅಂಶವಾಗಿದೆ. ಅನೇಕ ಸಾಹಿತಿಗಳು ಇಲ್ಲಿಗೆ ಬಂದು ಸಾಹಿತ್ಯ ಕೃಷಿಯನ್ನು ಮಾಡಿ ಪ್ರಶಸ್ತಿಯನ್ನು ಪಡೆದು ಪುತ್ತೂರಿಗೆ ಗೌರವವನ್ನು ತಂದಿದ್ದಾರೆ” ಎಂದು ಹೇಳಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ “ಬದಲಾಗುತ್ತಿರುವ ಈ ವ್ಯವಸ್ಥೆಯಲ್ಲಿ ಹಿಂದೆ ಅನುಭವಿಸಿ ಬರೆದಂತಹ ಕವಿಗಳು ಅಥವಾ ಅನುಭವಿಸಿ ಬರೆಯದೆ ಇದ್ದಂತಹ ವ್ಯಕ್ತಿಗಳು ಅವರ ಕುರಿತಾಗಿ ಬಹುಷ: ಅನೇಕ ರೀತಿಯ ದಾಖಲೀಕರಣದ ಸಾಧ್ಯತೆ ಇದೆ ಹಾಗೂ ಅಗತ್ಯವೂ ಇದೆ. ಬದುಕುವ ಈ ಅವಧಿಯಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಿವೆ ಅದು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಕವಾಗಿಯೇ ಬದಲಾವಣೆಗಳು ಆಗುತ್ತಿವೆ” ಎಂದು ಹೇಳಿದರು.
ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಹಾಗೂ ಬೆಂಗಳೂರು ಕುವೆಂಪು ಭಾಷಾ ಭಾರತಿಯ ಮಾಜಿ ಅಧ್ಯಕ್ಷ ಡಾ. ಗಿರೀಶ್ ಭಟ್ ಅಜಕ್ಕಳ ಕೃತಿ ಲೋಕಾರ್ಪಣೆ ಮಾಡಿದರು. ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್, ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಶರ್ಮ ಪ್ರಾರ್ಥಿಸಿ, ಉಪನ್ಯಾಸಕಿ ಡಾ. ಮೈತ್ರಿ ಭಟ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.