ಡಾ. ಶ್ರೀವಿದ್ಯಾ ಮುರಳೀಧರ್ ಭರತನೃತ್ಯದಲ್ಲಿ ಖ್ಯಾತಿವೆತ್ತ ಕಲಾವಿದೆ. ಕಲೆ ಅವರಿಗೆ ಪರಂಪರಾಗತವಾಗಿ ಬಂದ ಆಸ್ತಿ.
ತಂದೆ ಶ್ರೀ ಕೆ. ರಾಮನ್ ಹಾಗೂ ಮಾತೃಶ್ರೀ ಶ್ರೀಮತಿ ಶಾರದಾ ರಾಮನ್ ಕಲೆಯಲ್ಲಿ ಅತಿಯಾದ ಆಸಕ್ತಿಯಿಂದ, ಮಗಳನ್ನು ಮೂರನೆಯ ವಯಸ್ಸಿನಲ್ಲಿಯೇ ಪಂದನಲ್ಲೂರು ಶೈಲಿಯ ಭರತ ನೃತ್ಯ ಕಲಿಕೆಗೆ ಗೆಜ್ಜೆ ಕಟ್ಟಿಸಿದರು. ಪ್ರಥಮ ಗುರು ಅಂಬಳೆ ರಾಜೇಶ್ವರಿ ಸುಬ್ಬರಾವ್ ಇವರು. ಬಳಿಕ ಗೆಜ್ಜೆಯ ಹೆಜ್ಜೆಗೆ ನಾದ ತುಂಬಿದವರು ನಾಟ್ಯಾಚಾರ್ಯ ಶ್ರೀ ಕೆ. ಮುರಳೀಧರ ರಾಯರು.
1986ರಲ್ಲಿ ಮೈಸೂರಿನ ಭಾರತೀಯ ಸಂಗೀತ ಸಭಾದವರು ನಡೆಸಿದ ರಾಜ್ಯಮಟ್ಟದ ಭರತನೃತ್ಯ ಸ್ಪರ್ಧೆಯಲ್ಲಿ ಮೊದಲಿಗರಾಗಿ, ಮಹಾರಾಜಾ ಶ್ರೀ ಶ್ರೀಕಂಠದತ್ತ ಒಡೆಯರ್ ಅವರಿಂದ ಚಿನ್ನದ ಪದಕ ಪಡೆದಾಗ ಶ್ರೀವಿದ್ಯಾ ಇನ್ನೂ ಎಂಟರ ಹರೆಯದ ಬಾಲೆ.
ಆ ಮೇಲಿನ ಎರಡು ವರ್ಷಗಳಲ್ಲಿ ಇಂಡಿಯನ್ ಫಿಲಂ ಅಂಡ್ ಟಿವಿ ಇನ್ಸ್ಟಿಟ್ಯೂಟ್ ನವರು ನಡೆಸಿದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದ ಈ ಪ್ರತಿಭಾವಂತೆ ವಿದ್ಯುಕ್ತವಾಗಿ ರಂಗ ಪ್ರವೇಶ ಮಾಡಿದ್ದು ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ 1990ರಲ್ಲಿ.
ಕರ್ನಾಟಕ ಸೆಕೆಂಡರಿ ಎಜುಕೇಷನ್ ಎಕ್ಸಾಮಿನೇಷನ್ ಬೋರ್ಡ್ ಇವರು ನಡೆಸುವ ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲಿ ರ್ಯಾಂ ಕ್ ಪಡೆದು, ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ. 1992ರಿಂದ 96ರವರೆಗೆ ಭಾರತೀಯ ಟೆಲಿಕಾಂ ಇಲಾಖೆಯವರು ಹೈದರಾಬಾದ್, ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈಗಳಲ್ಲಿ ನಡೆಸಿದ ಭರತನಾಟ್ಯ, ಮೂಹಿನಿಯಾಟ್ಟ, ಕೂಚಿಪುಡಿ, ಒಡ್ಡಿಸ್ಸಿ ಸ್ಪರ್ಧೆಗಳಲ್ಲೂ ಸಾಲಾಗಿ ಬಂಗಾರದ ಪದಕವನ್ನು ಪಡೆದರಲ್ಲದೆ, 1996ರಲ್ಲಿ ಆಂಧ್ರದ ನಾಗಾರ್ಜುನ ಸಾಗರದಲ್ಲಿ ಜರುಗಿದ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ, ಈ ಗೌರವ ಕಾದುಕೊಂಡರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಖ್ಯಾತ ಖಜರಾಹೋ ನೃತ್ಯೋತ್ಸವಕ್ಕೆ ಆಯ್ಕೆಯಾದರು.
ಆಂಗ್ಲ ಸಾಹಿತ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತರ ಪದವಿ ಹಾಗೂ ಎಂ.ಬಿ.ಎ. ಪದವಿಯನ್ನು ಸಿಂಬಯೋಸಿಸ್ ಪುಣೆಯಿಂದ ಪಡೆದರೂ, ಶ್ರೀವಿದ್ಯಾ ವೃತ್ತಿ ಬದುಕಿಗೆ ಆರಿಸಿದ್ದು ಕಲೆಯನ್ನ. 1991ರಲ್ಲಿ ಕೊಡಗಿನಲ್ಲಿ ಸೌರಭ ಸಂಗೀತ ನೃತ್ಯ ಕಲಾ ಪರಿಷತ್ (ರಿ) ಸಂಗೀತ ನೃತ್ಯ ಸಂಸ್ಥೆಯನ್ನು ಹಿರಿಯರ ಸಹಾಯದಿಂದ ಸ್ಥಾಪಿಸಿ ಕಳೆದ ಮೂರು ದಶಕಗಳಿಂದ ಪ್ರಾಚಾರ್ಯೆಯಾಗಿ ನೂರಾರು ವಿದ್ಯಾರ್ಥಿಗಳಿಗೆ ಕಲೆಯನ್ನ ಉಣಬಡಿಸುತ್ತಿದ್ದಾರೆ.
ಡಾ. ಶ್ರೀವಿದ್ಯಾರವರು ಶ್ರೀ ರಾಮಾಯಣ ದರ್ಶನಂ, ಶ್ರೀ ಕೃಷ್ಣ ಲೀಲಾ, ಗೋಕುಲ ಕೃಷ್ಣ, ಅಷ್ಟಲಕ್ಷ್ಮಿ, ಕನ್ನಡ ನಾಡಿ, ಶೇಡ್ಸ್ ಆಫ್ ಶ್ಯಾಮ,
ಪೃಥ್ವಿ ಹಾಗೆ ಕರ್ನಾಟಕ ಸಂಭ್ರಮ 50 ಎಂಬ ಇತ್ತೀಚಿಗಿನ ನೃತ್ಯ ರೂಪಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಇಂತಹ ನೃತ್ಯರೂಪಕಗಳನ್ನ ಹಂಪಿ ಉತ್ಸವ, ಕದಂಬೋತ್ಸವ, ಧರ್ಮಸ್ಥಳ ಲಕ್ಷ ದೀಪೋತ್ಸವ, ಆನೆಗುಂದಿ ಉತ್ಸವ, ಹೊಯ್ಸಳ ಉತ್ಸವ, ಗಡಿನಾಡ ಉತ್ಸವ ಹೀಗೆ ಹತ್ತು ಹಲವು ಉತ್ಸವಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ.
ಭಾರತದಾದ್ಯಂತ ಸಾವಿರಕ್ಕಿಂತಲೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಅಭಿಮಾನಿಗಳ ಮನೆಗೆದ್ದಿರುವ ಕಲಾವಿದೆ, ದೂರದರ್ಶನದ ಗ್ರೇಡೆಡ್ ಕಲಾವಿದೆ. ಡಾ. ಶ್ರೀವಿದ್ಯಾರವರು ಮಿಡಲ್ ಈಸ್ಟ್ ಮತ್ತು ಏಷ್ಯಾನೆಟ್ ಟಿವಿಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ. ದುಬೈ, ಶಾರ್ಜಾ, ಅಜ್ಮಾನ್ ಹಾಗೆ ಒಮಾನ್ ದೇಶಗಳಲ್ಲೂ ನೃತ್ಯ ಕಾರ್ಯಕ್ರಮ ನೀಡಿರುತ್ತಾರೆ. ಭರತನೃತ್ಯದ ವಿಷಯದಲ್ಲಿ 26ರ ಅತಿ ಕಿರಿಯ ವಯಸ್ಸಿನಲ್ಲಿಯೇ ಪಿ.ಹೆಚ್.ಡಿ. ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪಡೆದು, ಕರ್ನಾಟಕದಲ್ಲಿ ಪಿ.ಹೆಚ್.ಡಿ. ಪಡೆದ ಅತಿ ಕಿರಿಯ ವಯಸ್ಸಿನ ಮೊದಲಿಗಳಾಗಿದ್ದಾಳೆ.
ಅಬುದಾಭಿ ಕರ್ನಾಟಕ ಸಂಘದ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಅನ್ನು ಡಾಕ್ಟರ್ ಶ್ರೀವಿದ್ಯಾವರು ಪಡೆದಿರುತ್ತಾರೆ. ಗುರು ಶ್ರೀ ಮುರಲೀಧರ್ ರಾವ್ ಇವರ ಪ್ರೇರಣೆಯಿಂದ ಸಾಹಿತ್ಯದಲ್ಲಿ ಆಸಕ್ತಿಯನ್ನು ಪಡೆದು ‘ಭಾವರಸ ನಿರೂಪಣಂ’ ಎನ್ನುವ ಕನ್ನಡ ಪುಸ್ತಕವನ್ನು ರಚಿಸಿದ್ದಾರೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಪ್ರಕಟಿಸಿದೆ.
ಮಿನಿಸ್ಟ್ರಿ ಆಫ್ ಕಲ್ಚರ್ ಡಾ. ಶ್ರೀವಿದ್ಯಾರವರಿಗೆ ಭರತನಾಟ್ಯದ ಜೂನಿಯರ್ ಫೆಲೋಶಿಪನ್ನು ನೀಡಿ ಗೌರವಿಸಿದೆ. ಅನೇಕ ಸನ್ಮಾನ ಪ್ರಶಸ್ತಿಗಳನ್ನು ಗಳಿಸಿರುವ ಶ್ರೀವಿದ್ಯಾ ಅವರು ಕೊಲ್ಯ ಕ್ಷೇತ್ರದಿಂದ- ನಾಟ್ಯಕಲಾ ರತ್ನ, ಸುಳ್ಯ ಸಾಹಿತ್ಯ ಸಮ್ಮೇಳನದಲ್ಲಿ -ಕನ್ನಡ ಸಿರಿ, ಬೆಂಗಳೂರಿನ ಶ್ರದ್ಧಾ ಸಂಗೀತ ನೃತ್ಯ ಅಕಾಡೆಮಿ ಅವರಿಂದ- ನೃತ್ಯಶ್ರೀ, 2008ರಲ್ಲಿ ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಕೊಡಗು ಜಿಲ್ಲಾ ಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ,
ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
2016ರಲ್ಲಿ ಇವರು ಬರೆದ ‘Bharathanatyam with a new focus’ ಎನ್ನುವ ನೃತ್ಯದ ಬಗೆಗಿನ ವಿಮರ್ಶಾತ್ಮಕ ಪುಸ್ತಕವನ್ನು ಲಂಡನ್ ನೆಹರು ಸೆಂಟರ್ ನಲ್ಲಿ ಬಿಡುಗಡೆಗೊಳಿಸಲಾಯಿತು. ಹಾಗೆ ಯುನೈಟೆಡ್ ಕಿಂಗ್ಡಂನಾದ್ಯಂತ ಮ್ಯಾಂಚೆಸ್ಟರ್, ಬರ್ಮಿಂಗ್ಗ್ ಹ್ಯಾಮ್, ಲಂಡನ್ ನಗರಗಳಲ್ಲಿ ಡಾ. ಶ್ರೀ ವಿದ್ಯಾರವರು ತಮ್ಮ ಸಹೋದರಿ ವಿದುಷಿ ಶ್ರೀಧನ್ಯಾ ಇವರ ಜೊತೆ ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರಗಳನ್ನು ನಡೆಸಿ ಕೊಟ್ಟಿರುತ್ತಾರೆ. 2018ರಲ್ಲಿ ಶ್ರೀಲಂಕಾ ದೇಶದಲ್ಲಿ ತಮ್ಮ ನೃತ್ಯ ಪ್ರದರ್ಶನಕ್ಕೆ ಆಹ್ವಾನಿಸಲ್ಪಟ್ಟು ಕೊಲಂಬೋ, ಕ್ಯಾಂಡಿ ಮುಂತಾದ ನಗರಗಳಲ್ಲಿ ನೃತ್ಯ ಪ್ರಸ್ತುತಿ ನೀಡಿರುತ್ತಾರೆ.
2022ರಲ್ಲಿ ಯುನಿವರ್ಸಿಟಿ ಗ್ರಾಂಡ್ಸ್ ಕಮಿಷನ್ ನಡೆಸುವ ನ್ಯಾಷನಲ್ ಎಂಟ್ರನ್ಸ್ ಟೆಸ್ಟಿನ ಇಂಗ್ಲೀಷ್ ಲಿಟರೇಚರ್ ಪರೀಕ್ಷೆಯನ್ನು
98% ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ. ಆಂಗ್ಲ ಭಾಷೆಯಲ್ಲಿ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಬೆರಳೆಣಿಕೆ ಸಾಹಿತ್ಯ ವಿದ್ಯಾರ್ಥಿಗಳಲ್ಲಿ ಇವರೊಬ್ಬರು ಎನ್ನುವುದು ಸ್ತುತ್ಯರ್ಹ.
2022ರಲ್ಲಿ ಪತಿ ಶ್ರೀ ಪಿ. ಮುರುಳಿಧರ್ ಕುಮಾರ್ ಇವರ ಅಕಸ್ಮಿಕ ವಿಯೋಗದೊಂದಿಗೆ ತತ್ತರಿಸಿ ಹೋದರೂ, ಕಲಾ ದೀಪ್ತಿಯನ್ನು ಬೆಳಗುತ್ತಾ, ತಮ್ಮ ಸಂಸ್ಥೆ ಸೌರಭ ಕಲಾ ಪರಿಷತ್ (ರಿ) ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚೆಲುವೆಯಾಗಿ ತನ್ನೊಳಗಿನ ಕ್ರಿಯಾತ್ಮಕ ಕಲಾಕೈಂಕರ್ಯಕ್ಕೆ ಕಂಕಣ ಬದ್ಧರಾಗಿರುತ್ತಾರೆ. ಅಭ್ಯುದಯ ಕೃಷ್ಣ ಮತ್ತು ಅಭಿರಾಮ ಮುರಲೀಧರ್ ಮಕ್ಕಳಿರ್ವರು, ಅಮ್ಮನ ಪ್ರಯತ್ನಗಳಿಗೆ ಪ್ರೇರಕರು.
ಪ. ರಾಮಕೃಷ್ಣ ಶಾಸ್ತ್ರಿ
ಬೆಳ್ತಂಗಡಿ ತಾಲೂಕಿನವರಾದ ಎಪ್ಪತ್ತೊಂದರ ಹರಯದ ಪ. ರಾಮಕೃಷ್ಣ ಶಾಸ್ತ್ರಿ ಇವರು ಹನ್ನೊಂದನೆಯ ವಯಸ್ಸಿನಿಂದಲೇ ಸಾಹಿತ್ಯ ರಚನೆ ಮಾಡಿದವರು. ಇವರ ಸುಮಾರು ಹನ್ನೆರಡು ಸಾವಿರಕ್ಕಿಂತ ಅಧಿಕ ಲೇಖನಗಳು ಹಾಗೂ ಎಲ್ಲಾ ವಿಧದ ಬರಹಗಳು ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 104 ಪುಸ್ತಕಗಳು ಪ್ರಕಟಗೊಂಡಿದ್ದು, ವಿವಿ ಮತ್ತು ಪ್ರಾಥಮಿಕ ಪಠ್ಯಗಳಲ್ಲಿ ಬರಹಗಳು ಸೇರಿವೆ. ಒಂದಿಷ್ಟು ಗೌರವ ಪ್ರಶಸ್ತಿಗಳು ತಾವಾಗಿ ಬಂದಿರುವುದು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.
2 Comments
Proud to be your student , dear maam🥰🌹
Congratulations shreevidya ma’am soooo happy for you ❤️❤️🎉💐