ಪಕ್ವ ಭಾಷೆ, ಸರಳ ಶೈಲಿ ಎತ್ತಿಕೊಂಡ ವಸ್ತು ವಿಷಯಗಳ ಕುರಿತು ಆಮೂಲಾಗ್ರ ಚಿಂತನೆ, ಅಷ್ಟೇ ನಿಖರವಾಗಿ ಮತ್ತು ಸಮಯಬಂಧಿತವಾಗಿ ಬರೆವಣಿಗೆಯನ್ನು ಮುಗಿಸುವುದು. ಇದು ಬರೆಹಗಾರನಲ್ಲಿರಬೇಕಾದ ಶಿಸ್ತು ಮತ್ತು ಧೋರಣೆ. ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್ ಕಾಸರಗೋಡು ಕೂಡ್ಲಿನಿಂದ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಹೋದವರು ಕನ್ನಡ ಪ್ರಾಧ್ಯಾಪಕಿಯಾಗಿ ಈಗ ಏಳು ವರ್ಷಗಳ ಹಿಂದೆ ನಿವೃತ್ತರಾದ ಮೇಲೆ ಮತ್ತೆ ಮಣ್ಣಿಗೆ ಮರಳಿದರು.
ಕನ್ನಡ ಭಾಷೆ, ಸಾಹಿತ್ಯದ ಮೇಲೆ ಕಾಸರಗೋಡು ಸರಕಾರಿ ಕಾಲೇಜಿನಿಂದ 1974ರಲ್ಲಿ ಎಂ.ಎ. ಪ್ರಥಮ ರ್ಯಾಂ ಕ್ ನೊಂದಿಗೆ ಹೊರಬಂದ ಪ್ರಮೀಳ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕೆಲ ವರ್ಷ ದುಡಿದಿದ್ದರು. ಬೆಂಗಳೂರಿನ ಆಚಾರ್ಯ ಕಾಲೇಜು ಕರೆದಿತ್ತು. ಇಷ್ಟರಲ್ಲೆ ‘ಗಿರಿಜಾ ಕಲ್ಯಾಣ’ ಮತ್ತು ‘ಕುಮಾರ ಸಂಭವ ತೌಲನಿಕ’ ಅಧ್ಯಯನ ಮಹಾಪ್ರಬಂಧ ಸಮರ್ಪಿಸಿ ಡಾಕ್ಟರೇಟ್ ಹೊಂದಿದವರು ಮುಂದೆ ಈ ತನಕ ಐವತ್ತಕ್ಕೂ ಮಿಕ್ಕು ಕೃತಿಗಳನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ.
ವಿವಿಧ ಪ್ರಕಾರಗಳಲ್ಲಿ ಅವರ ಕೊಡುಗೆ ವ್ಯಾಪಿಸಿದೆ. ‘ನಾಂದಿ’ ಮತ್ತು ‘ಇತರ ಕಥೆಗಳು’ ಎಂಬ ಸಣ್ಣ ಕಥಾ ಸಂಕಲನದಿಂದ ಈಚಿನ ‘ಮನ ಮಯೂರ’ ತನಕ ಎಂಟು ಕಥಾ ಸಂಕಲನಗಳು ಅವರ ಸೃಜನಶೀಲತೆಗೆ ಉದಾಹರಣೆಗಳು. ಕಥೆಗಳು ಸರಳ ಹಂದರವುಳ್ಳವುಗಳು. ಗಂಭೀರ, ಮರ್ಮಭೇದಕ ಕಥಾ ಶರೀರ ಇಲ್ಲದೆ ವಿಭಿನ್ನ ವ್ಯಕ್ತಿಗಳ ಅಂತರಂಗದ ನಿವೇದನೆ, ಕನಸುಗಳ ಪ್ರಸ್ತಾಪ, ಮಾನವೀಯ ಮೌಲ್ಯಗಳ ವಿಶ್ಲೇಷಣೆಗಳಿಂದ ಬದುಕಿನ ಚಿತ್ರಣ ಹಮ್ಮಿಕೊಳ್ಳುವ ಅವರ ಕಥಾಲೋಕ ಸೌಮ್ಯವಾಗಿದ್ದು ಪ್ರತ್ಯೇಕ ಸ್ಥಾನ ಗಳಿಸಿದೆ. ಇಷ್ಟಲ್ಲದೆ ಹಲವು ಕಾದಂಬರಿಗಳ ಮೂಲಕ ಅವರು ಓದುಗರನ್ನು ಸೆಳೆದಿದ್ದಾರೆ. ‘ಅಹಲ್ಯಾ’, ‘ರಕ್ತಚೆಲ್ಲಿದ ರಾತ್ರಿ’ ಮತ್ತು ‘ಮರೀಚಿಕೆ’ ಈ ಮೂರು ಕಾದಂಬರಿಗಳು ಅವರ ಕಥನ ಶೈಲಿಗೂ ಸೃಜನಶೀಲ ಗದ್ಯಕ್ಕೂ ಉದಾಹರಣೆ.
ಐದು ಜೀವನ ಚರಿತ್ರೆಯ ಪುಸ್ತಕಗಳು ಆ ಪ್ರಕಾರಕ್ಕೆ ಮಾದರಿ ಮತ್ತು ಅನುಸರಣೀಯ. ‘ಸ್ಫೂರ್ತಿ ಚೇತಸರು’ ಹಾಗೂ ‘ಸದ್ದಿಲ್ಲದ ಸಾಧಕ ಉಜ್ವಲ ವ್ಯಕ್ತಿತ್ವ’ ಕಥನಗಳೆನಿಸಿವೆ. ಹಿಂದಿ, ಮಲಯಾಳ ಮತ್ತು ತುಳು ಭಾಷೆಯ ಸುಮಾರು ಹದಿಮೂರು ಕೃತಿಗಳು ಕನ್ನಡಕ್ಕೆ ಅನುವಾದವಾಗಿದ್ದು ವಿವಿಧ ಸಂದರ್ಭದಲ್ಲಿ ಬೆಳಕು ಕಂಡಿವೆ.
ಅನ್ಯ ಭಾಷಿಕರಿಗರನೇಕರಿಗೆ ಕನ್ನಡ ಕ್ಲಾಸು ತೆಗೆಯುತ್ತಿದ್ದಾರೆ. ಭಾಷಣ, ಸಾಹಿತ್ಯ ವಿಚಾರ ಸಂಕಿರಣಗಳು, ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಅವಕಾಶ ಹೊಂದಿದ್ದಾರೆ. ಅನೇಕ ಅನ್ಲೈನ್ ಕ್ಲಾಸುಗಳನ್ನು ಪ್ರತಿವಾರ ಮಾಡುತ್ತಿದ್ದಾರೆ. 2023ರ ಜೂನ್ ನಿಂದ ಪ್ರತಿ ಶನಿವಾರ ಆಯೋಜಿಸುತಿದ್ದ ಹರಿಶ್ಚಂದ್ರ ಕಾವ್ಯ ವ್ಯಾಖ್ಯಾನ 2024ರ ಮಾರ್ಚ್ ನಲ್ಲಿ ಕೊನೆಗೊಳ್ಳಲಿದೆ.
ಪಿ. ಎನ್. ಮುಡಿತ್ತಾಯ
ನಿವೃತ್ತ ಪ್ರಾಂಶುಪಾಲರಾಗಿರುವ ಶ್ರೀ ಪಿ.ಎನ್. ಮುಡಿತ್ತಾಯ ಇದುವರೆಗೆ 30ಕ್ಕೂ ಅಧಿಕ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ನಾಲ್ಕು ಲಲಿತ ಪ್ರಬಂಧ ಹಾಗೂ 40ಕ್ಕೂ ಅಧಿಕ ಸಂಪಾದಕೀಯ ಪುಸ್ತಕಗಳನ್ನು ರಚಿಸಿದ್ದ ಇವರು ಹಲವಾರು ಕೃತಿಗಳನ್ನು ಕನ್ನಡದಿಂದ ಮಲಯಾಳಂ ಭಾಷೆಗೆ ಹಾಗೂ ಮಲಯಾಳಂ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದಿಸಿದ್ದಾರೆ. ಗಡಿನಾಡು ಕಾಸರಗೋಡಿನ ಹಲವಾರು ಕವಿಗೋಷ್ಠಿಗಳಲ್ಲಿ ಸಮನ್ವಯಕಾರರಾಗಿ ಭಾಗವಹಿಸಿದ್ದಾರೆ.