ಬೆಂಗಳೂರು : ವಿಜಯನಗರ ಸಂಗೀತಸಭಾ ಟ್ರಸ್ಟ್ (ರಿ.) ಇದರ ವತಿಯಿಂದ 33ನೇ ವರ್ಷದ ‘ದಾಸವರೇಣ್ಯರ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ 2024’ವು ದಿನಾಂಕ 10-03-2024ರಂದು ವಿಜಯನಗರದ ಬಿ.ಬಿ.ಎಂ.ಪಿ. ಪಾಲಿಕೆ ಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 9.30ಕ್ಕೆ ವೀಣಾ ವಾದಕರು, ಪರಿಸರವಾದಿ ಹಾಗೂ ಭೂ ವಿನ್ಯಾಸಗಾರರಾದ ಶ್ರೀಮತಿ ರೇವತಿ ಕಾಮತ್ ಇವರಿಂದ ಈ ಮಹೋತ್ಸವವು ಉದ್ಘಾಟನೆಗೊಳ್ಳಲಿದೆ. ಗಾನಕಲಾಭೂಷಣ ವಿದುಷಿ ಡಾ. ಸುಮಾ ಸುಧೀಂದ್ರ ಇವರ ವೀಣಾ ವಾದನಕ್ಕೆ ವಿದ್ವಾನ್ ಮತ್ತೂರು ಶ್ರೀನಿಧಿ ಪಿಟೀಲಿನಲ್ಲಿ, ವಿದುಷಿ ಸುಕನ್ಯಾ ರಾಮ್ ಗೋಪಾಲ್ ಘಟಂನಲ್ಲಿ ಮತ್ತು ಗಾನಕಲಾಭೂಷಣ ವಿಜಯಸಂಗೀತಶ್ರೀ ವಿದ್ವಾನ್ ಸಿ. ಚಲುವರಾಜ್ ಇವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಗಾನಕಲಾಭೂಷಣ ವಿದುಷಿ ಸುಮಾ ಸುಧೀಂದ್ರ ಇವರನ್ನು ಸನ್ಮಾನಿಸಲಾಗುವುದು ಮತ್ತು ಹಿರಿಯ ಸಂಸ್ಥಾಪಕ ಸದಸ್ಯರಾದ ವಿದುಷಿ ಮಾಲತಿ ನರಸಿಂಹಮೂರ್ತಿ ಇವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಮಧ್ಯಾಹ್ನ ಗಂಟೆ 12.15ಕ್ಕೆ ಗಾನಕಲಾಭೂಷಣ ವಿಜಯಸಂಗೀತಶ್ರೀ ಡಾ. ಆರ್.ಕೆ. ಪದ್ಮನಾಭ ಇವರ ನೇತೃತ್ವದಲ್ಲಿ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಲಿದೆ.