ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 11-03-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ಕುಮಾರಿ ಶ್ರೀಕರೀ ಮಂಗಳೂರು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಶ್ರೀಕರೀಯು ಹೊಸಬೆಟ್ಟು ರಾಮದಾಸ್ ಹೆಚ್. ಮತ್ತು ಶ್ರೀಲತಾ ಅವರ ಜೇಷ್ಠ ಪುತ್ರಿ. ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ನೃತ್ಯಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಅವರಲ್ಲಿ 13 ವರ್ಷಗಳಿಂದ ಭರತನಾಟ್ಯವನ್ನು ಕಲಿಯುತ್ತಿದ್ದಾಳೆ. ಪ್ರಸ್ತುತ ಪೂರ್ವ ವಿದ್ವತ್ ಅಭ್ಯಾಸ ಮಾಡುತ್ತಿದ್ದಾಳೆ. ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿರುವ ಇವರು ಕೆನರಾ ಪಿ.ಯು. ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ. ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಪದವೀದರೆ, ಕೀ ಬೋರ್ಡ್ ಮತ್ತು ಪಿಟೀಲು ಕಲಿಯುತ್ತಿದ್ದಾರೆ.
ಜ್ಞಾನ ಮಂದಾರ ಅಕಾಡೆಮಿ ಬೆಂಗಳೂರು ಇವರಿಂದ ‘ಕರ್ನಾಟಕ ಚೇತನ 2002 ರಾಜ್ಯ ಪ್ರಶಸ್ತಿ’, ಸ್ವಯಂ ಫೌಂಡೇಶನ್ ಮಂಗಳೂರು ಇವರಿಂದ ಬೆಸ್ಟ್ ಡ್ಯಾನ್ಸ್ ಸ್ಟೂಡೆಂಟ್ 2019 ಪ್ರಶಸ್ತಿ, 2016, 2018, 2020ರಲ್ಲಿ ರಾಗ ತರಂಗ ನಡೆಸಿದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ನೃತ್ಯಾಂಜಲಿ ಪುಣೆ ಇವರು ನಡೆಸಿದ Indian Trending Talent Dance ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ನೂಪುರನಾದ ಮ್ಯೂಸಿಕ್ ಅಕಾಡೆಮಿ ಬೆಂಗಳೂರು ಇವರು ನಡೆಸಿದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ Indian pride dancer ಎಂಬ ಬಿರುದು ಮತ್ತು ನೃತ್ಯ ನಿರಂತರ ಬೆಂಗಳೂರು ನಡೆಸಿದ ಸ್ಪರ್ಧೆಯಲ್ಲಿ ಬಹುಮಾನದೊಂದಿಗೆ ‘ಯುವನೃತ್ಯ ಕಲಾ ಜ್ಯೋತಿ 2020’ ಎಂಬ ಪ್ರಶಸ್ತಿ.
ಹಲವಾರು ಅನ್ಸೆನ್ ಏಕವ್ಯಕ್ತಿ ಕಾರ್ಯಕ್ರಮ ನೀಡಿದ ಇವರು ಸನಾತನ ಸಂಸ್ಥೆಯ ರಾಷ್ಟ್ರದೇವೋಭವ, ಸನಾತನ ನೃತ್ಯಾಂಜಲಿ ಕಾರ್ಯಕ್ರಮದಲ್ಲಿ ಅಲ್ಲದೆ ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಚೆನ್ನೈಯ ಗುರುಗಳಾದ ಮಧುರೈ ಆರ್. ಮುರಳೀಧರನ್ ಅವರ ಹಲವು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದು, ಅವರು ನಡೆಸಿದ ಆನ್ ಲೈನ್ ಕಲಿಕೆಯ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾಡಿದ ವರ್ಣ ನೃತ್ಯದಲ್ಲಿ ಶ್ರೀಕರೀಯೂ ಒಬ್ಬಳು. ಅವರ ಈ ಕಾರ್ಯಕ್ರಮಕ್ಕೆ ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ ಆಗಿರುತ್ತದೆ.