ಸೋಮವಾರಪೇಟೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಆಯೋಜಿಸಿರುವ 3 ದಿನಗಳ ‘ಮಕ್ಕಳ ಸಾಹಿತ್ಯ ಸಂಭ್ರಮ’ ದಿನಾಂಕ 04-03-2024 ರಂದು ಸೋಮವಾರಪೇಟೆಯ ಚನ್ನಬಸಪ್ಪ ಸಭಾಂಗಣದಲ್ಲಿ ಉದ್ಘಾಟಣೆಗೊಂಡಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಾತನಾಡಿ “ಮಕ್ಕಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಇದೊಂದು ಕಲಿಕೆಗೆ ಪೂರಕ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ಪಠ್ಯದೊಂದಿಗೆ ಪತ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹ ನೀಡಬೇಕಾಗಿದೆ. ಚಿಕ್ಕಂದಿನಿಂದಲೇ ಮಕ್ಕಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು.” ಎಂದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯರಾದ ಸೌಭಾಗ್ಯ ಬೇಲೂರು ಮಾತನಾಡಿ “ಸಾಹಿತ್ಯಾಭಿರುಚಿಯನ್ನು ಬೆಳೆಸಿ ಮಕ್ಕಳನ್ನು ಗ್ರಂಥಾಲಯದ ಕಡೆಗೆ ಸೆಳೆಯುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮುಂದಿನ ವರ್ಷ ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ಈ ಕಾರ್ಯಕ್ರಮ ನಡೆಯಲಿದೆ.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ. ಇ. ಒ. ಭಾಗ್ಯಮ್ಮ, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಸುಬ್ರಮಣಿ, ಸಂಪನ್ಮೂಲ ವ್ಯಕ್ತಿಗಳಾದ ಸುಮನ ಮ್ಯಾಥ್, ಪವನ್ ಕುಮಾರ್, ಗೌತಮ್ ಕಿರಗಂದೂರು, ಶರ್ಮಿಳಾ ರಮೇಶ್, ಪಿ. ಬಿ. ಪೊನ್ನಪ್ಪ, ಹೇಮಂತ್ ಪಾರೇರ ಮತ್ತಿತರರು ಉಪಸ್ಥಿತರಿದ್ದರು.
05-03-2024 ರಂದು ನಡೆದ ಎರಡನೇ ದಿನದ ಮಕ್ಕಳ ಸಾಹಿತ್ಯ ಸಂಭ್ರಮವು ಯಶಸ್ವಿಯಾಗಿ ನಡೆದು ಎಂದಿನಂತೆ ಕವಿತೆ, ಕಥೆ, ನಾಟಕ, ಮತ್ತು ರಿಪೋರ್ಟರ್ ಈ ನಾಲ್ಕು ಕಾರ್ನರ್ ಗಳಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಿದರು. ಕವಿತೆ ಬರೆಯುತ್ತಾ ಹಾಗೂ ಕಥೆ ಕಟ್ಟುತ್ತಾ ದೊಡ್ಡವರನ್ನು ಬೆರಗುಗೊಳಿಸಿದರು.
ನಾಟಕದ ವಿಭಾಗದಲ್ಲಿ ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದಂತೆ, ಬಾಲ್ಯ ವಿವಾಹ, ನಾಯಿಯ ರೋದನೆ ಎಂಬ ನಾಟಕ ಮಕ್ಕಳು ತಾವೇ ರಚಿಸಿ ಅಭಿನಯಿಸಿದರು.
ಕಥೆ ವಿಭಾಗದ ಮಕ್ಕಳು ಚಿತ್ರ ನೋಡಿ ಕಥೆ ಬರೆಯುವುದು, ಕಥೆಗೊಂದು ಸಾಲು, ಪದ ಆಧರಿಸಿ ಕತೆ ರಚನೆ, ಮಕ್ಕಳ ಬದುಕಿನ ಘಟನೆ ಆಧಾರಿತ ಕಥಾ ರಚನೆ, ಕಡ್ಡಿಗೊಂಬೆ ಮೂಲಕ ಕಥೆ ಕಟ್ಟುವುದು ಹೀಗೆ ಹಲವು ಬಗೆಯಲ್ಲಿ ಕಥೆ ರಚಿಸಿದರು.
ಕವಿತೆ ವಿಭಾಗದಲ್ಲಿ ಪ್ರಾಸ ಬದ್ಧ ಬಳಸಿ ಕವಿತೆ, ಚಿತ್ರ ಬಳಸಿ ಕವಿತೆ, ಸಾಲಿಗೆ ಸಾಲು ಕವಿತೆ, ನಮ್ಮನೆ ಹಾಡು ಹೀಗೆ ಕವನ ಕಟ್ಟಿದರು.
ಮಕ್ಕಳು ರಚಿಸಿದ ಕವನಗಳು :
*ಸುಂದರವಾದ ಕಮಲದ ಹೂವುಗಳು
ನೀರಿನಲ್ಲಿ ತೇಲುತ್ತಿತ್ತು ಬಾತು ಕೋಳಿಗಳು
ಆಕಾಶದಲ್ಲಿ ಹಾರಾಡುವ ಹಕ್ಕಿ
ನನ್ನ ಗೆಳತಿಯ ಮುಖದ ಮೇಲಿದೆ ಚುಕ್ಕಿ*
*ನನ್ನ ಹೆಸರು ಮಳೆ
ನಾನಿದ್ದರೆ ಬೆಳೆ
ರೈತನು ಕೀಳುವನು ಕಳೆ
ಇದು ನಾನು ಬರೆದ ಹಾಳೆ….
ರಿಪೋರ್ಟರ್ ವಿಭಾಗದಲ್ಲಿ ಸಾಹಿತಿಯಾದ ನ. ಲ. ವಿಜಯರವರ ವೆಲ್ಡಿಂಗ್ ಶಾಪ್ ಮತ್ತು ಪತ್ರಿಕಾ ಭವನಕ್ಕೆ ಭೇಟಿ ಮಾಡಿದರು. ಮತ್ತು ಅಂಧ ದಂಪತಿಗಳಾದ ರೂಪಾ ಪರಮೇಶ್ ಹಾಗೂ ವಕೀಲರಾದ ಬಿ. ಜೆ. ದೀಪಕ್ ರವರ ಸಂದರ್ಶನ ಮಾಡಲಾಯಿತು. ಪುಸ್ತಕ ಓದು ವಿಭಾಗದ ಮಕ್ಕಳು ವಿವಿಧ ಪುಸ್ತಕಗಳನ್ನು ಓದಿ ಅದರ ಕುರಿತ ಚಿಕ್ಕ ಪುಸ್ತಕ ರಚನೆ ಮಾಡಿದರು. ಇಂದು ಸಮುದಾಯದ ಜನರು ಸ್ವಯಂ ಪ್ರೇರಿತರಾಗಿ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಭಾಗಿಯಾಗಿ ವೀಕ್ಷಿಸಿದ್ದು ವಿಶೇಷವಾಗಿತ್ತು.