ಉಡುಪಿ : ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಹಾಗೂ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ಸಹಯೋಗದಲ್ಲಿ ಉಡುಪಿ ಬನ್ನಂಜೆ ಶ್ರೀ ನಾರಾಯಣಗುರು ಆಡಿಟೋರಿಯಂನ ದಿ. ತೋಮ ಶ್ಯಾನುಭಾಗ್ ವೇದಿಕೆಯ ‘ತ್ಯಾಗ ಮಂಟಪ’ದಲ್ಲಿ ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯು ದಿನಾಂಕ 10-03-2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ಶಾಂತಾರಾಮ ಸೂಡ ಇವರು ಮಾತನಾಡುತ್ತಾ “ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದೆ. ಧಾರ್ಮಿಕ ಕ್ಷೇತ್ರವಾದ ಭಜನೆಯಲ್ಲಿ ಸ್ಪರ್ಧೆಯನ್ನು ಆಯೋಜಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದರಿಂದ ಯುವಜನತೆಯನ್ನು ಭಜನೆಯತ್ತ ಆಕರ್ಷಿಸುವುದರೊಂದಿಗೆ ಭಜನೆಯ ಮಹತ್ವವನ್ನು ಎಲ್ಲೆಡೆ ಪಸರಿಸುವ ಆರೋಗ್ಯಕರ ಬೆಳವಣಿಗೆಯೂ ಮೂಡಿಸಿದಂತಾಗುತ್ತದೆ” ಎಂದು ನುಡಿದರು.
ಮತ್ತೋರ್ವ ಮುಖ್ಯ ಅತಿಥಿ ಪ್ರಮೋದ್ ರೈ ಪಳಜೆ ಅವರು ಮಾತನಾಡಿ “ಭಜನಾ ಸ್ಪರ್ಧೆಗಳನ್ನು ಕಳೆದ ಹನ್ನೊಂದು ವರ್ಷಗಳಿಂದ ಪೆರ್ಡೂರಿನಲ್ಲಿ ನಡೆಸುತ್ತಿದ್ದು, ಈ ಸ್ಪರ್ಧೆಯು ಇಂದು ಜಿಲ್ಲಾ ಕೇಂದ್ರದಲ್ಲಿ ಜರಗುತ್ತಿದೆ. ಮುಂದೆ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸುವುದರ ಮೂಲಕ ಉಡುಪಿಯ ಭಕ್ತಜನ ಉತ್ತಮ ಭಜಕರ ಭಜನೆ ಕೇಳುವಂತಾಗಲಿ” ಎಂದರು. ಇದೇ ಸಂದರ್ಭದಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ‘ಭೈರವನಾಥೇಶ್ವರ’ ಯೂಟ್ಯೂಬ್ ಚಾನಲ್ ಲೋಕಾರ್ಪಣೆಗೊಳಿಸುವ ಮೂಲಕ ಕಾರ್ಯಕ್ರಮದ ನೇರಪ್ರಸಾರಕ್ಕೆ ಚಾಲನೆ ನೀಡಲಾಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷ ಹಾಗೂ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಅವರು ಇಲ್ಲಿ ನಡೆಯುವ ಭಜನೆಯಿಂದ ಲೋಕಕಲ್ಯಾಣವಾಗಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಾದ ಮತ್ಸ್ಯರಾಜ್ ಗ್ರೂಪ್‌ನ ಕೇಶವ ಎಂ. ಕೋಟ್ಯಾನ್, ಅಭಿನಂದನ್ ಕೋಟ್ಯಾನ್, ತೀರ್ಪುಗಾರರಾದ ತುಳಸೀದಾಸ್, ಗಿರೀಶ್ ತಂತ್ರಿ, ಸಂಗೀತ ಶಿಕ್ಷಕಿ ಅಕ್ಷತಾ ರಾವ್ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ರವೀಂದ್ರ ನಾಡಿಗ್ ಸ್ವಾಗತಿಸಿ, ಉಪೇಂದ್ರ ಆಚಾರ್ ಕಾರ್ಯಕ್ರಮ ನಿರ್ವಹಿಸಿ, ಸಮಿತಿಯ ಖಜಾಂಚಿ ಪ್ರಭಾಕರ ಶೆಟ್ಟಿ ವಂದಿಸಿದರು.