ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ಲಾವಣ್ಯ’ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಇದರ ಉಡುಪಿ ಜಿಲ್ಲಾ ಘಟಕದ ಸಹಯೋಗದಲ್ಲಿ ‘ರಂಗಪಂಚಮಿ-2024’ ಐದು ದಿನಗಳ ನಾಟಕೋತ್ಸವದ ಸಮಾರೋಪ ಕಾರ್ಯಕ್ರಮವು ದಿನಾಂಕ 06-03-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ “ಜಾನಪದವೂ ಕೂಡ ಒಂದು ಧರ್ಮವಾಗಿದ್ದು ಇದು ನಾವು ಬದುಕುವ ರೀತಿಗೆ ಹತ್ತಿರದ ಸಂಬಂಧವಿದ್ದು, ಒಂದು ಜೀವನ ಧರ್ಮವಾಗಿದೆ. ಜಾನಪದ ಧರ್ಮವನ್ನು ನಾವು ಅರ್ಥಮಾಡಿಕೊಂಡು ಪಾಲಿಸಿದರೆ ಎಲ್ಲಾ ಕಾಲಮಾನದ ಬದಲಾವಣೆಗಳ ಮಧ್ಯೆ ಕೂಡ ನಮ್ಮ ಸಂಸ್ಕೃತಿ ಉಳಿಯುತ್ತದೆ. ಆಂಗ್ಲ ಮಾಧ್ಯಮ ಶಿಕ್ಷಣ, ನಮ್ಮ ಘನತೆಯ ವೈಭವೀಕರಣಕ್ಕಾಗಿ ದುರದೃಷ್ಟವಶಾತ್ ಜಾನಪದಧರ್ಮವನ್ನು ನಾವು ಇಂದಿನ ದಿನಗಳಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಜಾನಪದ ಧರ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಉಳಿಸಿ ಬೆಳೆಸುವುದರ ಮೂಲಕ ಇದರೊಂದಿಗೆ ಕನ್ನಡ ಭಾಷೆಯು ಹೆಚ್ಚು ಬಳಕೆಗೆ ಬಂದು ಕನ್ನಡ ಪ್ರೇಮವು ಹೆಚ್ಚಾಗುತ್ತದೆ” ಎಂದರು.
ಸಮೃದ್ಧ ಬೈಂದೂರು ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ ಮಾತನಾಡಿ “ಭಾರತೀಯ ಕಲೆ ಮತ್ತು ಸಾಹಿತ್ಯಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿವೆ. ನಾಟಕಗಳಿಂದ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಕೊಳ್ಳಬೇಕಾದ ಸಂಸ್ಕಾರಗಳ ಬಗ್ಗೆ ತಿಳಿಯಬಹುದಾಗಿದೆ. ರಂಗಭೂಮಿಗಳು ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಲ್ಲದೇ, ಜೀವನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ” ಎಂದರು.
ಕರ್ನಾಟಕ ಜಾನಪದ ಪರಿಷತ್ ಇದರ ಉಡುಪಿ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್ ವತಿಯಿಂದ ಪೆರ್ಡೂರು ಮೇಳ ಯಜಮಾನ ಕರುಣಾಕರ ಶೆಟ್ಟಿ ಹಾಗೂ ‘ಲಾವಣ್ಯ’ ವತಿಯಿಂದ ಮೌರಿಕಾರ ಶೇಷ ದೇವಾಡಿಗ, ಸಮಾಜ ಸೇವಕ ಶೇಖ್ ಫಯಾಜ್ ಅಲಿ ಇವರನ್ನು ಸನ್ಮಾನಿಸಲಾಯಿತು. ಪ್ರಥಮ ದರ್ಜೆ ಗುತ್ತಿಗೆದಾರ ಗಾಯಾಡಿ ಗೋಕುಲ ಶೆಟ್ಟಿ ಉಪ್ಪುಂದ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ. ಅರುಣ್ ಕುಮಾರ್ ಹೆಗ್ಡೆ, ಇದ್ದರು. ಗಣಪತಿ ಎಸ್. ಸ್ವಾಗತಿಸಿ, ಶ್ರೀಧರ ವಸ್ರೆ ನಿರೂಪಿಸಿ, ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವಂದಿಸಿದರು. ನಂತರ ಉಡುಪಿ ಕಲಾಮಯಂ ತಂಡದ ಸದಸ್ಯರಿಂದ ‘ಜಾನಪದ ವೈವಿಧ್ಯ’ ಪ್ರದರ್ಶನಗೊಂಡಿತು.