ಮಂಗಳೂರು : ಪ್ರವಚನಕಾರ ಹರಿದಾಸ ದಿ. ಪೇಜಾವರ ವಿಜಯಾನಂದ ರಾವ್ ಸಂಸ್ಮರಣಾರ್ಥ, ಹರಿಕಥಾ ಪರಿಷತ್, ಶೇಣಿ ಚಾರಿಟೇಬಲ್ ಟ್ರಸ್ಟ್, ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನ ಸಂಯುಕ್ತ ಆಶ್ರಯದಲ್ಲಿ ಕೊಲ್ಯ ಶ್ರೀ ರಮಾನಂದ ಸ್ವಾಮೀ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ‘ದ್ವಾದಶ ಹರಿಕಥಾ ಸತ್ಸಂಗ’ ಕಾರ್ಯಕ್ರಮವು ದಿನಾಂಕ 12-03-2024 ರಂದು ಉದ್ಘಾಟಣೆಗೊಂಡಿತು .
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ “ಹರಿಕಥಾ ಕಾರ್ಯಕ್ರಮವು ಕೇವಲ ಮನೋರಂಜನೆಗಾಗಿರದೆ ಸಮಾಜದಲ್ಲಿ ಆಧ್ಯಾತ್ಮ ಹಾಗೂ ಪುರಾಣ ಚಿಂತನೆಗಳ ಒಂದು ಸಂಸ್ಕೃತಿ ಶಿಕ್ಷಣ ಕಲೆಯಾಗಿದೆ. ನಾಡಿನ ಎಲ್ಲ ಧಾರ್ಮಿಕ ಕ್ಷೇತ್ರಗಳು ನಡೆಸುವ ಉತ್ಸವಗಳ ಸಾಂಸ್ಕೃತಿಕ ಸರಣಿಯಲ್ಲಿ ಹರಿಕಥೆಯಂಥ ಕಲೆಗೆ ಪ್ರಾಶಸ್ತ್ಯ ನೀಡಿ ಪ್ರೋತ್ಸಾಹಿಸಬೇಕು.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಸಾಧಕರ ಸಂಸ್ಮರಣೆ, ಸನ್ಮಾನಗಳು ಸೇರಿದಂತೆ ಉಪಯುಕ್ತ ಚಟುವಟಿಕೆಗಳನ್ನು ಮಾಡುವಂತದ್ದು ಸಾಂಸ್ಕೃತಿಕ ಸಂಘಟನೆಗಳ ಕರ್ತವ್ಯ. ಈ ನಿಟ್ಟಿನಲ್ಲಿ ನಿರಂತರ ಕಾರ್ಯಶ್ರದ್ಧೆಯಲ್ಲಿರುವ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ವರ್ಗ ಹಾಗೂ ಹರಿಕಥಾ ಪರಿಷತ್ತಿನ ಪದಾಧಿಕಾರಿಗಳು ಅಭಿನಂದನಾರ್ಹರು.” ಎಂದು ಹೇಳಿದರು.
ಶೇಣಿ ಚಾರಿಟೇಬಲ್ ಟ್ರಸ್ಟ್ ಇದರ ಕೋಶಾಧಿಕಾರಿ ಜಿ. ಕೆ. ಭಟ್ ಅವರು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿ ದುಡಿದು ಅಕಾಲದಲ್ಲಿ ಕೀರ್ತಿ ಶೇಷರಾದ ಪ್ರವಚನಕಾರ, ಅರ್ಥದಾರಿ, ಹರಿದಾಸ ಪಿ.ವಿ. ರಾವ್ ಅವರ ಸಂಸ್ಮರಣ ಭಾಷಣಗೈದರು. ಮೂಕಾಂಬಿಕಾ ಕ್ಷೇತ್ರದ ಮಧುಸೂದನ ಅಯ್ಯರ್ , ರಾಧಾಕೃಷ್ಣ ಶೆಟ್ಟಿ, ಮಾತೃ ಮಂಡಳಿಯ ಸುಲೋಚನಾ ಟೀಚರ್, ಗುಣವತಿ ಟೀಚರ್, ಜನಾರ್ದನ ಹಂದೆ, ಹರಿದಾಸ್ ಸುಧಾಕರ ಕೋಟೆ ಕುಂಜತ್ತಾಯ, ಮತ್ತಿತರರು ಉಪಸ್ಥಿತರಿದ್ದರು. ಹರಿಕಥಾ ಪರಿಷತ್ ಇದರ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ಸಂಚಾಲಕ ಸುಧಾಕರ್ ರಾವ್ ಪೇಜಾವರ ವಂದಿಸಿದರು.