ಬೆಂಗಳೂರು: 2024ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ.ಎಚ್.ವಿಶ್ವ ನಾಥ್ ಮತ್ತು ಶ್ರೀಮತಿ ಎಂ.ಎಸ್.ಇಂದಿರಾ ಪ್ರಶಸ್ತಿ’ ಗೆ ವಿಶೇಷ ದೃಷ್ಟಿ ಚೇತನ ಲೇಖಕರಾದ ರಮಾ ಫಣಿ ಭಟ್ ಗೋಪಿ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ.
ದೃಷ್ಟಿ ವಿಶೇಷ ಚೇತನ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಡಾ. ಎಚ್. ವಿಶ್ವನಾಥ್ ಅವರು ಈ ಪುರಸ್ಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದು, ಪರಿಷತ್ತಿನ ಅನನ್ಯವಾದ ಪ್ರಶಸ್ತಿ ಎಂಬ ಹೆಗ್ಗಳಿಕೆ ಈ ಪುರಸ್ಕಾರಕ್ಕಿದೆ.
ರಮಾ ಫಣಿ ಭಟ್ ಗೋಪಿಯವರು ಎಂ.ಎ ಮತ್ತು ಎಂ.ಕಾಂ. ಹೀಗೆ ಎರಡು ಸ್ನಾತಕೋತ್ತರ ಪದವಿಯನ್ನು ಪಡೆದವರಾಗಿದ್ದು ಬದುಕನ್ನು ಸವಾಲಾಗಿ ತೆಗೆದುಕೊಂಡ ಸೃಜನಶೀಲ ಬರಹಗಾರರಾಗಿದ್ದಾರೆ. ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಿದ್ದು , ಚಂದನ, ಎಫ್. ಎಂ. ವಾಹಿನಿಗಳೂ ಸೇರಿದಂತೆ ಹಲವೆಡೆ ಕವಿಗೋಷ್ಟಿಗಳಲ್ಲಿ ತಮ್ಮ ಕವಿತೆಗಳನ್ನು ವಾಚಿಸಿದ್ದಾರೆ. ‘ಭಾವಲೋಕ’ ಮತ್ತು ‘ಆಕಾಶ ಬುಟ್ಟಿ’ ಅವರ ಪ್ರಕಟಿತ ಕವನ ಸಂಕಲನಗಳಾಗಿವೆ. ರಮಾ ಅವರ ಸೂಕ್ಷ್ಮ ಅಭಿವ್ಯಕ್ತಿ, ಭಾಷೆಯ ಬಳಕೆ ಮತ್ತು ರೂಪಕಗಳ ಸಂಯೋಜನೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಶಸ್ತಿಯ ಆಯ್ಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಮತ್ತು ದತ್ತಿ ದಾನಿಗಳಾದ ಡಾ.ಎಚ್.ವಿಶ್ವನಾಥ್ ಭಾಗವಹಿಸಿದ್ದರು.