ಕನ್ನಡದ ಯುವ ಬರಹಗಾರ್ತಿ ವಿದ್ಯಾ ಕೆ.ಎನ್. ಅವರ ಎರಡನೇ ಕಾದಂಬರಿ ‘ಯೋಗದಾ’. ಶೀರ್ಷಿಕೆಯೇ ಸೂಚಿಸುವಂತೆ ಇದು ಸನಾತನ ಹಿಂದೂ ಸಂಸ್ಕೃತಿಯನ್ನು ಜೀವಾಳವಾಗಿಸಿಕೊಂಡ ಒಂದು ಕೃತಿ. ಆಧುನಿಕತೆಯ ಹುಚ್ಚು ಪ್ರವಾಹದಲ್ಲಿ ತನ್ನತನವನ್ನು ಮರೆಯುತ್ತಿರುವ ಇಂದಿನ ಜನತೆಗೆ ಭಾರತೀಯ ಸಂಸ್ಕೃತಿಯೊಳಗಿನ ಅಗಾಧ ಶಕ್ತಿಯ ಮಹತ್ವವನ್ನು ನೆನಪಿಸುವ ಈ ಕೃತಿಯ ತಿರುಳು ಒಂದು ಸುಂದರ ಕೌಟುಂಬಿಕ ಕಥೆಯ ಕಣಕದೊಳಗೆ ಬೆಸೆದ ತತ್ವಜ್ಞಾನದ ಸಿಹಿ ಹೂರಣದಂತಿದೆ. ನಮ್ಮ ಹಿರಿಯರು ಹಿಂದೆ ಶ್ರದ್ಧೆಯಿಂದ ಮನೆ ಮನೆಗಳಲ್ಲಿ ಮಾಡುತ್ತಿದ್ದ ಶಕ್ತಿಯ ಉಪಾಸನೆ ಮತ್ತು ಆ ಮೂಲಕ ಮನೆಯೊಳಗೆ ಸಂಚರಿಸುವ ಧನಾತ್ಮಕ ವಾತಾವರಣದ ಬಗ್ಗೆ ಅವರ ಕಾಳಜಿಯನ್ನು ಈ ಕಾದಂಬರಿ ಪುನರ್ ಸ್ಥಾಪಿಸಲು ಪ್ರಯತ್ನಿಸುತ್ತದೆ. ಆಧುನಿಕತೆಯನ್ನು ರೂಢಿಸಿಕೊಂಡ ಕುಟುಂಬದೊಳಗೂ ಇದು ಸಾಧ್ಯ ಅನ್ನುವುದನ್ನು ತೋರಿಸಿ ಕೊಡುತ್ತದೆ.
ಹುಟ್ಟೂರು ಸಾಂಸ್ಕೃತಿಕ ಮಹತ್ವದ ಸ್ಥಳ ಶೃಂಗೇರಿಯಾದರೂ ಉದ್ಯೋಗದ ಕಾರಣದಿಂದ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿರುವ ಶಂಕರ್ ದೀಕ್ಷಿತರು, ಅವರ ಪತ್ನಿ ಸುವರ್ಣಾ, ಮಕ್ಕಳಾದ ಅನಘಾ ಮತ್ತು ಅಭಿಜ್ಞಾರ ಸುಂದರ ಕೌಟುಂಬಿಕ ಬದುಕಿನ ಸುತ್ತ ಈ ಕಾದಂಬರಿ ಕಟ್ಟಲ್ಪಟ್ಟಿದೆ. ಎಲ್ಲರೂ ಇಂಗ್ಲೀಷ್ ಶಿಕ್ಷಣ ಪಡೆದವರೇ. ಆದರೆ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಆಚಾರ-ವಿಚಾರಗಳಲ್ಲಿ ಅಪರಿಮಿತ ಆಸಕ್ತಿಯುಳ್ಳವರು. ಶಂಕರರಿಗೆ ಅವರ ಇಪ್ಪತ್ತಾರನೇ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಗುರುಗಳಾಗಿ ಅಗಾಧ ಜ್ಞಾನವುಳ್ಳ ಶ್ರೀವಿದ್ಯಾ ಭಗವತಿ ಯಂತ್ರದ ಉಪಾಸಕರಾದ ಸಿರ್ಸಿಯ ಸದಾನಂದ ಭಟ್ಟರೊಂದಿಗೆ ಸಂಪರ್ಕ ಉಂಟಾಗುತ್ತದೆ. ಭಟ್ಟರು ತಮ್ಮ ಸ್ವಂತ ಮಕ್ಕಳಲ್ಲಿ ಉಪಾಸನೆಯ ಆಸಕ್ತಿ ಇಲ್ಲದ್ದನ್ನು ಗಮನಿಸಿ ಆ ಯಂತ್ರವನ್ನು ಶಂಕರರಿಗೆ ಕೊಟ್ಟು ಶಾಸ್ತ್ರೋಕ್ತವಾಗಿ ಉಪದೇಶ ಹಾಗೂ ದೀಕ್ಷಾ ಮಂತ್ರವನ್ನು ಹೇಳಿ ಕೊಟ್ಟು ಕೊನೆಯುಸಿರೆಳೆದಿದ್ದಾರೆ. ವಿಶೇಷವಾದ ಶ್ರದ್ಧಾ-ಭಕ್ತಿಗಳಿಂದ ಉಪಚಾರದಲ್ಲಿ ಒಂದಿಷ್ಟೂ ಲೋಪವಾಗದಂತೆ ಎಚ್ಚರಿಕೆಯಿಂದ ಕೈಗೊಳ್ಳಬೇಕಾದ ಆ ಕೆಲಸವನ್ನು ಶಂಕರರು ತಮ್ಮ ಹಿರಿಯರ ಅಸಮಾಧಾನದ ನಡುವೆಯೂ ಸ್ವೀಕರಿಸಿ ಪಾಲಿಸುವ ಜವಾಬ್ದಾರಿಯನ್ನು ಹೊರುತ್ತಾರೆ. ಅವರನ್ನು ಪ್ರೀತಿಸಿ ಮದುವೆಯಾಗುವ ಆಧುನಿಕ ಮನೋಭಾವದ ಹೆಣ್ಣು ಸುವರ್ಣಾ ಆಗಾಗ ಅಳುಕುತ್ತಲೇ ಶಂಕರರ ಸತ್ಕಾರ್ಯಗಳಲ್ಲಿ ಕೈಜೋಡಿಸುತ್ತಾಳೆ. ಶಂಕರ ದೀಕ್ಷಿತರು ಪರಮಹಂಸ ಯೋಗಾನಂದರ ಆತ್ಮಕಥೆಯನ್ನು ಓದಿದ ನಂತರ ಅದರಿಂದ ಪ್ರಭಾವಿತರಾಗಿ ‘ಯೋಗದಾ’ ಅನ್ನುವ ಹೆಸರು ಅವರಿಗೆ ಪ್ರಿಯವಾಗಿದೆ. ಅಂತೆಯೇ ಶಕ್ತಿಯ ಸಾನಿಧ್ಯದಲ್ಲಿ ಒಳ್ಳೆಯ ಹುಮ್ಮಸ್ಸಿನಲ್ಲಿದ್ದಾಗ ಕೆಲವೊಮ್ಮೆ ತಮ್ಮ ಹೆಂಡತಿಯನ್ನು ಆ ಹೆಸರಿನಿಂದ ಕರೆಯುತ್ತಾರೆ.
ಶಂಕರ ದೀಕ್ಷಿತರು ವರ್ಷದ ಎಲ್ಲಾ ದಿನಗಳಲ್ಲಿಯೂ ಮಡಿಯಲ್ಲಿ ದೇವರ ಕೋಣೆಯನ್ನು ಪ್ರವೇಶಿಸಿ ತ್ರಿಕರಣ ಶುದ್ಧಿಯಿಂದ, ಸಂಪೂರ್ಣ ಶರಣಾಗತಿಯ ಭಾವದಿಂದ ಪೂಜಿಸುವ ಪರಿಪಾಠವನ್ನು ಇಟ್ಟುಕೊಳ್ಳುತ್ತಾರೆ. ಮನೆಯ ಸುತ್ತ ಹೂವಿನ ಗಿಡಗಳನ್ನು ನೆಟ್ಟು ಬೆಳೆಸಿ , ಮುಂಜಾನೆ ಎದ್ದು ಹೂಗಳನ್ನು ಕೊಯ್ದು ಸ್ಫಟಿಕದ ಆ ಯಂತ್ರಕ್ಕೆ ದುರ್ಗಾ ಸಪ್ತಶತಿ ಪಾರಾಯಣ, ಲಲಿತಾ ಸಹಸ್ರನಾಮ ಪಠನಗಳೊಂದಿಗೆ ಪೂಜೆ ಸಲ್ಲಿಸುವುದಲ್ಲದೆ ನವರಾತ್ರಿ ಕಾಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅತಿಥಿಗಳನ್ನು ಕರೆದು ವಿಶೇಷ ಭೋಜನವನ್ನೂ ದಕ್ಷಿಣೆ-ಬಾಗಿನಗಳನ್ನೂ ಕೊಡುವ ಸಂಪ್ರದಾಯವನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಾರೆ. ಶ್ರೀವಿದ್ಯಾ ಭಗವತಿಯಲ್ಲಿ ದೃಢವಾದ ನಂಬಿಕೆ, ಅಪರಿಮಿತ ಶ್ರದ್ಧೆ ಹಾಗೂ ನಿರ್ಮಲವಾದ ಮನಸ್ಸಿನಿಂದ ಮಾಡುವ ಆರಾಧನೆಯಿಂದ ಇಂದ್ರಿಯ ನಿಗ್ರಹ ಹಾಗೂ ಸ್ಥಿತಪ್ರಜ್ಞತೆಗಳನ್ನು ಸಾಧಿಸುವುದು ಅವರಿಗೆ ಸಾಧ್ಯವಾಗಿದೆ. ಮಗಳು ಅನಘಾ ಈ ಎಲ್ಲ ವಿಚಾರಗಳಲ್ಲಿ ಅವರ ಉತ್ತರಾಧಿಕಾರಿಯಾಗುವ ಲಕ್ಷಣಗಳನ್ನು ತೋರಿಸುತ್ತಾಳೆ. ಅಭಿಜ್ಞಾಳ ವಿಷಯದಲ್ಲಿ ಆರಂಭದಲ್ಲಿ ಒಂದಷ್ಟು ತೊಡಕುಗಳು ಕಾಣಿಸಿಕೊಂಡರೂ ಅವು ಕ್ರಮೇಣ ನಿವಾರಣೆಯಾಗುತ್ತವೆ. ಅವರದು ಸುಖಿ ಸಂಸಾರವಾಗುತ್ತದೆ. ಅದಕ್ಕೆ ಕಾರಣ ಭಗವತಿಯ ಕೃಪೆ ಅನ್ನುವುದನ್ನು ಕಾದಂಬರಿ ಸೂಚಿಸುತ್ತದೆ.
ಶಂಕರ ದೀಕ್ಷಿತರ ಸ್ನೇಹಿತರಾದ ಕೃಷ್ಣರಾಜ ದೀಕ್ಷಿತ್ ಮತ್ತು ಅವರ ಹೆಂಡತಿ ಭಾನುಮತಿಯರ ಕುಟುಂಬದ ಕಥೆ ಇನ್ನೊಂದು. ಅವರದು ಅಗ್ನಿ ಹೋತ್ರಿಗಳ ಕುಟುಂಬ. ಪಾರಂಪರಿಕವಾಗಿ ಅವರ ಮನೆಯ ಹೋಮಕುಂಡದಲ್ಲಿ ಅಗ್ನಿ ಉರಿಯುತ್ತಲೇ ಇರಬೇಕು. ಅದು ಎಂದೂ ಕೆಡದಂತೆ ಎಚ್ಚರಿಕೆ ವಹಿಸುವುದು ಅವರು ಕರ್ತವ್ಯ. ಆಧುನಿಕ ಬದುಕಿನ ಉಪದ್ವ್ಯಾಪಗಳ ನಡುವೆ ಇದನ್ನು ಪಾಲಿಸುವುದು ಕಷ್ಟವಾದರೂ ಇದುವರೆಗೆ ಅವರು ನಡೆಸಿಕೊಂಡು ಬಂದಿದ್ದಾರೆ. ಮಕ್ಕಳು ಅದನ್ನು ಮುಂದುವರೆಸುವುದೇ ಇಲ್ಲವೇನೋ ಎಂಬ ಆತಂಕವಿದ್ದಂತೆಯೇ ಕೊನೆಯಲ್ಲಿ ಮಗ ವಿಖ್ಯಾತ ಅದನ್ನು ಸ್ವೀಕರಿಸುವ ಲಕ್ಷಣಗಳು ಕಂಡು ಬರುತ್ತವೆ.
ಸದಾನಂದ ಭಟ್ಟರ ಮಗ ಶ್ರೀಪಾದ ಅಮೆರಿಕಾದಲ್ಲಿ ಹಲವು ವರ್ಷಗಳಿದ್ದು ಮಗಳು ಶ್ರೀಕಲಾ ಅಲ್ಲೇ ಹುಟ್ಟುತ್ತಾಳೆ. ಅಲ್ಲೇ ಅಂತರ್ಧರ್ಮೀಯ ವಿವಾಹವಾಗುತ್ತಾಳೆ. ಎರಡು ವರ್ಷಗಳಲ್ಲಿ ವಿಚ್ಛೇದನಗೊಂಡು ಒಂಟಿಯಾಗಿ ಬದುಕುತ್ತಾಳೆ. ಶ್ರೀಪಾದ ಭಟ್ಟರು ಅಲ್ಲಿನ ಜೀವನದಿಂದ ಬೇಸತ್ತು ಊರಿಗೆ ಹಿಂತಿರುಗಿ ಬಂದು ನೆಲೆಸುತ್ತಾರೆ. ಆದರೆ ಅವರಿಗೆ ಇಲ್ಲೂ ನೆಮ್ಮದಿ ಸಿಗದೆ ಅವರು ಮಾನಸಿಕವಾಗಿ ಅಸ್ವಸ್ಥರಾಗುತ್ತಾರೆ. ಆದರೆ ಪವಾಡವೋ ಎಂಬಂತೆ ಶ್ರೀಕಲಾ ಅಮೆರಿಕದಲ್ಲಿ ನೆಲೆಸಿದ್ದ ಸದಾನಂದ ಭಟ್ಟರ ಓರ್ವ ಶಿಷ್ಯರ ಸಂಪರ್ಕಕ್ಕೆ ಬಂದು ಅವರ ಕೈಯಿಂದ ಶ್ರೀವಿದ್ಯಾ ಭಗವತಿ ಯಂತ್ರ ಮತ್ತು ದೀಕ್ಷೆಯನ್ನು ಪಡೆಯುತ್ತಾಳೆ. ಹೀಗೆ ಯಂತ್ರವನ್ನು ಸ್ವೀಕರಿಸುವುದರಿಂದ ಮನೆಯಲ್ಲೂ ಕುಟುಂಬದಲ್ಲೂ ಒಂದಿಲ್ಲೊಂದು ಹಾನಿ ಉಂಟಾಗುತ್ತದೆ ಎಂಬ ಭಯ ನಿರಾಧಾರವೆಂದು ಸಾಬೀತಾಗುತ್ತದೆ. ಮಾತ್ರವಲ್ಲದೆ ಪೂಜಿಸುವವರು ಇಲ್ಲದೆ ಯಂತ್ರವು ಅನಾಥವಾಗುತ್ತದೆ ಎಂಬ ಭ್ರಮೆಯ ವಿರುದ್ಧ ‘ಭಗವತಿ ತನಗೆ ಬೇಕಾದವರನ್ನು ತಾನೇ ಆಯ್ದುಕೊಳ್ಳುತ್ತಾಳೆ. ಆ ಬಗ್ಗೆ ನಾವು ಚಿಂತಿಸುವ ಅಗತ್ಯವಿಲ್ಲ ‘ಎಂಬ ಶಂಕರ ದೀಕ್ಷಿತರ ಮಾತು ನಿಜವಾಗುತ್ತದೆ. ಆಧುನಿಕತೆಯ ಕೆಡುಕುಗಳನ್ನೂ ನಿವಾರಿಸಿ ನಂಬಿದವರ ಬದುಕನ್ನು ಶುದ್ಧೀಕರಿಸುವ ಕೆಲಸವನ್ನೂ ಮನೆಯೊಳಗೆ ನೆಲೆಸಿದ ಆ ಶಕ್ತಿಯೇ ಮಾಡುತ್ತದೆ ಅನ್ನುವುದನ್ನು ಕಾದಂಬರಿಯಲ್ಲಿ ನಡೆಯುವ ವಿದ್ಯಮಾನಗಳು ಸಾರಿ ಹೇಳುತ್ತವೆ.
ಕಾದಂಬರಿಯಲ್ಲಿ ಭಾರತೀಯ ಸಂಸ್ಕೃತಿಯ ಇನ್ನೂ ಅನೇಕ ವಿಚಾರಗಳು ಹಾಸುಹೊಕ್ಕಾಗಿವೆ. ಪ್ರಕೃತಿ ಮತ್ತು ಮನುಷ್ಯರ ನಡುವಣ ಆದರ್ಶ ಸಂಬಂಧಗಳ ಚಿತ್ರಣ, ಹಬ್ಬ-ಹರಿದಿನಗಳ ಸಂಭ್ರಮದ ಆಚರಣೆ, ಸಾತ್ವಿಕ ಆಹಾರ ಕ್ರಮ, ನೆರೆಹೊರೆಯವರ ಜೊತೆಗೆ ಸೌಹಾರ್ದ ಸಂಬಂಧ, ಪ್ರೀತಿಯಿಂದ ಮಾಡುವ ಅತಿಥಿ ಸತ್ಕಾರ, ಹಿರಿಯರಿಗೆ ಗೌರವ ಕೊಡುವ ರೀತಿ -ಇತ್ಯಾದಿ. ಇಲ್ಲಿನ ಪಾತ್ರಗಳು ಸುಶಿಕ್ಷಿತರಾಗಿ ಪದವಿಗಳನ್ನು ಪಡೆದು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ಕಾರು-ಬಂಗಲೆಗಳ ಒಡೆಯರಾದರೂ ಸಂಸ್ಕೃತಿ-ಸಂಪ್ರದಾಯಗಳನ್ನು ಮುಂದುವರಿಸುವವರೇ ಆಗಿದ್ದಾರೆ. ನಿಜ ಅರ್ಥದಲ್ಲಿ ಸುಸಂಸ್ಕೃತರಾಗಿದ್ದಾರೆ. ಇದರ ಹೃದ್ಯವಾದ ಚಿತ್ರಣವೇ ಈ ಕಾದಂಬರಿಯ ಪ್ಲಸ್ ಪಾಯಿಂಟ್.
-ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕರ ಬಗ್ಗೆ :
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುಟ್ಟ ಹಳ್ಳಿ ಹೊಸಕೊಪ್ಪದವರಾದ ವಿದ್ಯಾ ಕೆ.ಎನ್. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಆನಂತರ ಬೆಂಗಳೂರಿನ ಆಡೆನ್ ಪಬ್ಲಿಕ್ ಶಾಲೆಯಲ್ಲಿ ಐದು ವರ್ಷಗಳ ಕಾಲ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. 2017ರಲ್ಲಿ ಹಠಾತ್ತಾಗಿ ಪ್ರಾರಂಭವಾದ ಬರೆವಣಿಗೆ ಸಣ್ಣ ಪುಟ್ಟ ಲೇಖನ, ಕಥೆ ಮತ್ತು ಪ್ರಬಂಧಗಳಿಗೆ ಮೀಸಲಾಗಿದ್ದು, ಜನಪ್ರಿಯ ಪತ್ರಿಕೆಗಳಾದ ಉದಯವಾಣಿ, ವಿಶ್ವವಾಣಿ, ಕನ್ನಡಪ್ರಭ, ಹೊಸದಿಗಂತ ಮತ್ತು ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿವೆ. ಬರೆದ ಮೊದಲ ಕಥೆಯ ಜಾಡೇ ಹಿಡಿದು ಕಾದಂಬರಿ ಬರೆಯುವ ಧೈರ್ಯ ಮಾಡಿ ‘ಭಾವನಾಗಮ್ಯ’ ಎಂಬ ಕಾದಂಬರಿ ಪ್ರಕಟಿಸಿದರು. ಮೊದಲ ಕಾದಂಬರಿ ಬರೆಯುವಾಗಲೇ ಹೊಳೆದ, ಅಧ್ಯಯನ ಅವಶ್ಯವಿರುವ ಕಥಾವಸ್ತುವನ್ನು ಸಮಯ ತೆಗೆದುಕೊಂಡು ‘ಯೋಗದಾ’ ಎಂಬ ಎರಡನೆಯ ಕಾದಂಬರಿಯಾಗಿ ಹೊರತಂದಿದ್ದಾರೆ.