ಕಾರ್ಕಳ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಕಳ ಹೊಸಸಂಜೆ ಬಳಗದ ವತಿಯಿಂದ ದಿನಾಂಕ 10-03-2024ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದೆ, ತಾಳಮದ್ದಳೆ ಅರ್ಥದಾರಿ ಜಯಶ್ರೀ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ಯಕ್ಷಗಾನ ಕಲೆ ಅತ್ಯಂತ ಶ್ರೀಮಂತ ಕಲೆ. ಬಯಲಾಟ ಮತ್ತು ತಾಳಮದ್ದಳೆ ಎರಡೂ ಪ್ರಕಾರಗಳಲ್ಲಿಯೂ ಕೂಡ ವಿಪುಲ ಸಾಹಿತ್ಯ ಜೊತೆಗೆ ಪುರಾಣ ಇತಿಹಾಸಗಳ ವಿಸ್ತೃತ ಪರಿಚಯ ದೊರಕುತ್ತದೆ. ವೇಷಗಾರಿಕೆ, ಸಂಗೀತ, ನಾಟ್ಯ, ವಾಙ್ಮಯ ಮುಂತಾದ ಎಲ್ಲವೂ ಒಳಗೊಂಡ ಸರ್ವಾಂಗೀಣ ಕಲೆಯಾಗಿದ್ದು ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಯಕ್ಷಗಾನ ಕಲೆಯನ್ನು ಬೆಳೆಸಿ ಭವಿಷ್ಯದ ಪೀಳಿಗೆಗೂ ತಲುಪಿಸುವ ಕೆಲಸ ಕಲಾವಿದರಿಂದ ನಿರಂತರವಾಗಿ ನಡೆಯಬೇಕು” ಎಂದು ಹೇಳಿದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಸುವರ್ಣಾ ನಾಯಕ್, ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಅರುಣಾ ಎಸ್., ಹಿರಿಯ ನಾಗರಿಕ ಭಾಸ್ಕರ ಕಾರಂತ, ಕಾರ್ಕಳ ಪುರಸಭೆಯ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಯಕ್ಷಗಾನ ಗುರು ಹರೀಶ ಶೆಟ್ಟಿ ಸೂಡ, ವಿಜಯಾ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಕೆ.ಎ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮಿ ಶೆಟ್ಟಿ ಸ್ವಾಗತಿಸಿ, ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಕಾರ್ಯಕ್ರಮ ಸಂಯೋಜಿಸಿ, ಬೇಬಿ ಶೆಟ್ಟಿ ವಂದಿಸಿದರು.