ಮಂಗಳೂರು : ಕನ್ನಡ ತುಳು ವಿದ್ವಾಂಸರಾದ ಅಮೃತ ಸೋಮೇಶ್ವರ ಅವರ ಸಾಧನೆಗಳ ಕುರಿತು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವ ವಿದ್ಯಾಲಯ) ಕಾಲೇಜಿನ ಸಭಾಂಗಣದಲ್ಲಿ ‘ಅಮೃತಾನುಸಂಧಾನ’ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 10-03-2024ರಂದು ನಡೆಯಿತು. ಸೋಮೇಶ್ವರ ಉಚ್ಚಿಲದ ಕಲಾ ಗಂಗೋತ್ರಿ ಯಕ್ಷಗಾನ ಕೇಂದ್ರ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕರಾವಳಿಯ ಅನೇಕ ವಿದ್ವಾಂಸರು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಕುಲಪತಿ ಮತ್ತು ಅಮೃತರ ದೀರ್ಘ ಕಾಲದ ಒಡನಾಡಿ ಡಾ. ವಿವೇಕ ರೈಯವರು ಮಾತನಾಡಿ “ಭಾಷೆ, ಸಾಹಿತ್ಯದ ಪ್ರಬೇಧಗಳು, ಮಾಧ್ಯಮ ಮತ್ತು ಓದುಗ, ಕೇಳುಗ, ನೋಡುಗ ವರ್ಗ ಎಂದು ನಾಲ್ಕು ರೀತಿಯಿಂದ ಅಮೃತರ ಒಟ್ಟು ಸಾಧನೆಗಳನ್ನು ವಿಭಜಿಸಿ ಅರ್ಥಮಾಡಿಕೊಳ್ಳಬೇಕು. ಮೂರು ಭಾಷೆಯನ್ನು ಮಾತಾಡುತ್ತಿದ್ದ ಅಮೃತರು ತುಳುವನ್ನು ತನ್ನ ಮೂಲ ಶಕ್ತಿಯಾಗಿ ಬಳಸಿಕೊಂಡು ಕನ್ನಡದಲ್ಲಿ ಬರೆದರು. ಭಗವತೀ ಆರಾಧನೆಯಂತ ಪುಸ್ತಕ ಬರೆಯುವಾಗ ಅವರು ಮಲೆಯಾಳ ಭಾಷೆಯ ಅನುಭವಗಳನ್ನು ಬಳಸಿಕೊಂಡರು. 1962ರಷ್ಟು ಹಿಂದೆಯೇ ಇಂತಹ ಕೆಲಸಗಳನ್ನು ಮಾಡಿದ ಅಮೃತರು ಮುಂದಿನ ತಲೆಮಾರಿನವರು ನಡೆಸುವ ಸಂಶೋಧನೆಗೆ ಭದ್ರವಾದ ಒಂದು ತಳಹದಿಯನ್ನು ಹಾಕಿ ಕೊಡುವುದರ ಜತೆಗೆ ಕರಾವಳಿಯ ಅರಿವಿನ ಲೋಕದಲ್ಲಿ ಕಾರಣಾಂತರಗಳಿಂದ ಗೌಣವಾಗಿದ್ದ ತುಳುವಿಗೆ ಒಂದು ಮನ್ನಣೆಯನ್ನು ತಂದು ಕೊಟ್ಟರು. ಅವರು ಪಾಡ್ದನಗಳ ಸಂಗ್ರಹ, ತುಳು ನಾಟಕಗಳ ರಚನೆ, ಕಾದಂಬರಿ ಕತೆ ಕವನಗಳ ಬರಹ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಮೋಳ ಮಲೆಯಾಳಂ ನಿಘಂಟು ಶಾಸ್ತ್ರ ರಚಿಸುವುದರ ಮೂಲಕ ತನ್ನ ಮಾತೃ ಭಾಷೆ ಮಲೆಯಾಳಂಗೆ ತನ್ನ ಋಣವನ್ನು ತೀರಿಸಿದರು. 1960ರ ಕಾಲಘಟ್ಟದಲ್ಲಿ ಸಂಶೋಧನೆಗೆ ಯಾವುದೇ ಸವಲತ್ತುಗಳು ಇರಲಿಲ್ಲ. ಅಂಥ ಕಷ್ಟ ಕಾಲದಲ್ಲಿ ಅಮೃತರು ಜಿಲ್ಲೆಯಾದ್ಯಂತ ಓಡಾಡಿ ಮಾಹಿತಿ ಸಂಗ್ರಹಿಸಿದ್ದು ಅಚ್ಚರಿ ತರುವ ವಿಚಾರವಾಗಿದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರು, “ಒಬ್ಬ ಅಧ್ಯಾಪಕನಾಗಿ ಅಮೃತರು ತಮ್ಮ ವಿದ್ಯಾರ್ಥಿಗಳನ್ನು ಭೂತಕೋಲ, ಜಾತ್ರೆ ಮತ್ತು ಯಕ್ಷಗಾನಗಳಿಗೆ ಕರೆದೊಯ್ಯುತ್ತಿರುವುದನ್ನು ಸ್ಮರಿಸಿಕೊಂಡರು. ಈ ಪರಂಪರೆ ಈಗ ಇಲ್ಲವಾಗಿರುವುದನ್ನು ವಿಷಾದದಿಂದ ಗುರುತಿಸಿದ ಅವರು ಅಮೃತರ ಒಟ್ಟು ಸಾಧನೆಯನ್ನು ಮೂರು ಶೀರ್ಷಿಕೆಗಳಲ್ಲಿ ವಿವರಿಸಿದರು. ಮೊದಲನೆಯದಾಗಿ ಅಮೃತರ ವೈಚಾರಿಕ ನೆಲೆ ಉದಾರವಾದಿ ಮಾನವತಾವಾದವಾಗಿದ್ದು 20ನೇ ಶತಮಾನದ ಕರಾವಳಿಯ ಅತ್ಯುತ್ತಮ ಗುಣಗಳ ಮುಂದುವರಿಕೆಯಾಗಿದೆ. ವಿಧವಾ ವಿವಾಹ, ಸ್ತ್ರೀ ಶಿಕ್ಷಣ ಮೌಢ್ಯಗಳಿಗೆ ವಿರೋಧ, ಮಠ ಮಾನ್ಯಗಳ ಅನ್ಯಾಯಗಳು, ಅಸ್ಪೃಶ್ಯತೆ, ಶ್ರೇಷ್ಠತೆಯ ವ್ಯಸನ ಇತ್ಯಾದಿಗಳ ಬಗ್ಗೆ ಅಮೃತರು ಕೊನೆಯವರೆಗೂ ಬರೆಯುತ್ತಿದ್ದರು. ಇದರಿಂದ ಅವರಿಗೆ ಸಣ್ಣ ಪುಟ್ಟ ತೊಂದರೆಗಳಾಗಿದ್ದರೂ ಇದರಿಂದ ಅವರು ವಿಚಲಿತರಾಗುತ್ತಿರಲಿಲ್ಲ. ಧರ್ಮವನ್ನು ನಿರಾಕರಿಸದೆ ಅದರ ಸಾಂಸ್ಥೀಕರಣದ ವಿರುದ್ಧ ಮತ್ತು ದುರುಪಯೋಗಗಳ ಬಗ್ಗೆ ಅವರು ಬರೆಯುತ್ತಿದ್ದ ವಿಚಾರಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಬೇಕಾದ ಅಗತ್ಯವಿದೆ. ಎರಡನೆಯದಾಗಿ ಕರಾವಳಿಯ ಪಂಡಿತ ಪರಂಪರೆಗೆ ತೌಳವ ಸಂಸ್ಕೃತಿಯನ್ನು ಸೇರಿಸಿ ಅದನ್ನು ಸಮಗ್ರಗೊಳಿಸಲು ಪ್ರಯತ್ನಿಸಿದರು. ತುಳು ಸಂಸ್ಕೃತಿಯ ಮಹತ್ವದ ಬಗ್ಗೆ ಅತ್ಯಂತ ಆಳವಾಗಿ ಬರೆದಿರುವ ಅವರು ತುಳು ನಾಟಕ ಮತ್ತು ತುಳು ಯಕ್ಷಗಾನಗಳನ್ನು ಬೆಂಬಲಿಸಿ, ಅಗತ್ಯ ಬಿದ್ದರೆ ‘ತುಳುತಿಟ್ಟ’ನ್ನು ರೂಪಿಸಬಹುದು ಎಂದೂ ಹೇಳಿದ್ದರು. ಭೂತಾರಾಧನೆಯ ಮಾಂತ್ರಿಕ ಭಾಷೆಯು ವೈದಿಕ ಮಾಂತ್ರಿಕ ಭಾಷೆಗೆ ಸಮನಾದುದು ಎಂದು ಹೇಳುವ ದಿಟ್ಟತನವನ್ನು ಅವರು ಮೆರೆದಿದ್ದರು. ಮೂರನೆಯದಾಗಿ ಪುರಾಣಗಳನ್ನು ಆಧುನಿಕವಾಗಿ ಹೇಗೆ ನೋಡಬಹುದು ಎಂಬುದನ್ನು ಅವರು ಯಕ್ಷಗಾನ ಪ್ರಸಂಗಗಳನ್ನು ಬರೆಯುವುದರ ಮೂಲಕ ಜನರಿಗೆ ತೋರಿಸಿಕೊಟ್ಟರು. ಭುವನದ ಭಾಗ್ಯ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ತ್ರಿಪುರ ಮಥನ, ಮಹಾಶೂರ ಭೌಮಾಸುರ ಮೊದಲಾದ ಪ್ರಸಂಗಗಳು 1980ರ ದಶಕದಲ್ಲಿ ಯಕ್ಷಗಾನಕ್ಕೊಂದು ಸುವರ್ಣ ಯುಗವನ್ನೇ ಸೃಷ್ಟಿಸಿದವು” ಎಂದು ಶ್ಲಾಘಿಸುತ್ತಾ ಅಮೃತರನ್ನು ನೆನಪಿಸಿಕೊಂಡರು .
ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಶಿಯವರು ಅಮೃತರ ಜತೆಗಿನ ತನ್ನ ಸುದೀರ್ಘ ಒಡನಾಟವನ್ನು ಸ್ಮರಿಸುತ್ತಾ “ಯಕ್ಷಗಾನದ ಕುರಿತಾದ ಅಮೃತರ ಸಂಶೋಧನೆಗಳು ಅತ್ಯಂತ ಮಹತ್ವದ್ದು. ಧರ್ಮಸ್ಥಳ ಮೇಳದಲ್ಲಿ ಆ ಕಾಲದಲ್ಲಿದ್ದ ಶ್ರೇಷ್ಠ ಕಲಾವಿದರು ಅಮೃತರ ಪ್ರಸಂಗಗಳನ್ನು ಇನ್ನಷ್ಟೂ ಎತ್ತರಕ್ಕೆ ಏರಿಸುವಲ್ಲಿ ಸಫಲರಾದರು” ಎಂದು ಅಭಿಪ್ರಾಯಪಟ್ಟರು.
ಅಮೃತರ ಕುರಿತಾಗಿ ನಡೆದ ಗೋಷ್ಠಿಯಲ್ಲಿ ವಿದ್ವಾಂಸ ಪಾದೇಕಲ್ಲು ವಿಷ್ಣುಭಟ್ ಅವರು ಅಮೃತರ ಯಕ್ಷಗಾನ ಕುರಿತು ಮಾತಾಡಿ ಅಮೃತರ ಪ್ರಸಂಗಗಳು ಹೇಗೆ ಕರಾವಳಿಯ ವಿದ್ವತ್ ಲೋಕವನ್ನು ಬೆಳೆಸಿದವು ಎಂಬುದನ್ನು ವಿವರವಾಗಿ ಹೇಳಿದರು. ಅಮೃತರು ತುಳುವಿಗೆ ನೀಡಿದ ಕೊಡುಗೆಗಳ ಬಗ್ಗೆ ಮಾತಾಡಿದ ಡಾ. ಶಿವರಾಮ ಶೆಟ್ಟಿಯವರು ಮೌಕಿಕ ಲೋಕದ ವಿವರಗಳನ್ನು ಅಕ್ಷರ ಲೋಕಕ್ಕೆ ದಾಟಿಸಿದ ಅಮೃತರನ್ನು ಕರ್ನಾಟಕದ ಇತರ ಭಾಗಗಳು ನಿರ್ಲಕ್ಷಿಸಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಅಮೃತರು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತಾಡಿದ ಡಾ. ಪ್ರಮೀಳಾ ಮಾಧವ ಅವರು ಅಮೃತರ ಕನ್ನಡ ಸಾಹಿತ್ಯ ಸಾಧನೆಗಳ ಬಗ್ಗೆ ಹೇಳಿ ತೀರದ ತೆರೆಯಂಥ ಪ್ರಾದೇಶಿಕ ಕಾದಂಬರಿಯ ಬಗ್ಗೆ ಇನ್ನಷ್ಟೂ ಚರ್ಚೆ ಆಗಬೇಕಿತ್ತು. ಹೃದಯ ವಚನಗಳು ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಅತ್ಯುತ್ತಮ ಕೊಡುಗೆ ಎಂದು ಹೇಳಿದರು.
ತಲಪಾಡಿಯ ‘ಯಕ್ಷ ಸಿಂಧೂರ’ದ ಮಹಿಳಾ ಕಲಾವಿದರಿಂದ ಅಮೃತರು ರಚಿಸಿದ ‘ಕಾಯಕಲ್ಪ’ ಪ್ರಸಂಗದ ತಾಳಮದ್ದಳೆ ನಡೆಯಿತು. ಕಲಾ ಗಂಗೋತ್ರಿಯ ಕೆ. ಸದಾಶಿವ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಕಲಾ ಗಂಗೋತ್ರಿಯ ಯು. ಸತೀಶ ಕಾರಂತ, ಅಮೃತ ಸೋಮೇಶ್ವರರ ಪುತ್ರ ಚೇತನ ಸೋಮೇಶ್ವರ ಹಾಗೂ ಸೊಸೆ ರಾಜೇಶ್ವರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಮನೋಜ್ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿ, ದಿನೇಶ್ ನಾಯಕ್ ಗೋಷ್ಠಿಯನ್ನು ನಿರ್ವಹಿಸಿ, ಕನ್ನಡ ವಿಭಾಗದ ಮಾಲಿಂಗ ಭಟ್ ಅತಿಥಿಗಳನ್ನು ಗೌರವಿಸಿದರು.