ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ’ ಪ್ರಶಸ್ತಿಯನ್ನು ಹಿರಿಯ ಬರಹಗಾರರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ ಮತ್ತು ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ದತ್ ಸ್ಟೀಫನ್ ಅವರಿಗೆ ಪ್ರದಾನ ಮಾಡುವ ಕಾರ್ಯಕ್ರಮವು ದಿನಾಂಕ 16-03-2024ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ರಾಜಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ನಾಡೋಜ ಡಾ. ಮಹೇಶ ಜೋಶಿ “ಧರ್ಮ ಪ್ರಚಾರದ ಉದ್ದೇಶವನ್ನೇ ಮರೆತು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳೆವಣಿಗೆಗೆ ಕ್ರೈಸ್ತರು ವಿವಿಧ ರೂಪದಲ್ಲಿ ನೀಡಿದ ಕೊಡುಗೆಗಳ ಮೂಲಕವೇ ಕನ್ನಡದ ಪರಂಪರೆ ಬೆಳೆದಿದೆ. ಹರ್ಮನ್ ಮೊಗ್ಲಿಂಗ್ ‘ಮಂಗಳೂರು ಸಮಾಚಾರ’ದ ಮೂಲಕ ಕನ್ನಡದಲ್ಲಿ ಪತ್ರಿಕೋದ್ಯಮವನ್ನು ಆರಂಭಿಸಿದರೆ ಕಿಟಲ್ ನಿಘಂಟನ್ನು ಕೊಡುಗೆಯಾಗಿ ನೀಡಿದರು, ಬೆಂಜಮಿನ್ ಲೂಯಿಸ್ ರೈಸ್ ಕನ್ನಡ ಶಾಸನಗಳ ಅಧ್ಯಯನ, ಇ.ಪಿ. ರೈಸ್ ಸಾಹಿತ್ಯ ಚರಿತ್ರೆಯನ್ನು ಬರೆದರು, ರಿಪ್ಪನ್, ಕರ್ಜನ್, ಕಬ್ಬನ್, ಮೇಖ್ರಿ ಮೊದಲಾದವರು ಆಡಳಿತಗಾರರಾಗಿ ಮಹತ್ವದ ಕೊಡುಗೆಯನ್ನು ನೀಡಿದರು. ಕನ್ನಡದಲ್ಲಿಯೇ ಕೈಸ್ತ ಪ್ರಾರ್ಥನೆಗಳು ನಡೆಯಬೇಕು ಎಂದು ಹೋರಾಟ ಮಾಡಿದ ಫಾದರ್ ಚಸರಾ ಎಂದೇ ಸಾಂಸ್ಕೃತಿಕ ವಲಯಗಳಲ್ಲಿ ಚಿರಪರಿಚಿತರಾದ ಫಾದರ್ ಚೌರಪ್ಪ ಸೆಲ್ವರಾಜ್ ಚರ್ಚ್ ಗಳಲ್ಲಿ ಕನ್ನಡದ ಬಳಕೆ ಮತ್ತು ಕನ್ನಡಿಗರಿಗೆ ದೊರಕಬೇಕಾದ ಸಾಮಾಜಿಕ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ಮಾಡಿದವರು. ‘ಇಕ್ಕಟ್ಟಿಗೆ ಸಿಲುಕಿಸಿ ಬಿಟ್ಟೆ ಕ್ರಿಸ್ತಾ’ ‘ಅದುಮಿಟ್ಟ ನೆನಪಿನ ಪುಟಗಳಿಂದ’ ಇವುಗಳು ಇವರ ಪ್ರಮುಖ ಕೃತಿಗಳು. ಅನೇಕ ಕ್ರೈಸ್ತ ಭಕ್ತಿ ಗೀತೆಗಳನ್ನು ರಚಿಸಿರುವ ಅವರು ಬೈಬಲ್ ಆಧರಿಸಿ ಅವರು ರಚಿಸಿದ ‘ಕ್ರಿಸ್ತ ದನಿ’ ಎಂಬ ಏಳು ಗಂಟೆಗಳ ಗೀತ ನಾಟಕ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನೀಡಿದ ದೊಡ್ಡ ಕೊಡುಗೆ. ಈ ಪುರಸ್ಕಾರದ ಮೂಲಕ ಅವರ ಕೊಡುಗೆಗಳ ಸ್ಮರಣೆಯ ಜೊತೆಗೆ ಅವರ ಹೆಸರು ಶಾಶ್ವತವಾಗಿ ಉಳಿಯಲೂ ಸಾಧ್ಯವಾಗುತ್ತಿದೆ” ಎಂದು ವಿಶ್ಲೇಷಿಸಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಎಸ್.ಎಂ.ಎಂ.ಐ. ಧಾರ್ಮಿಕ ಸಭೆಯ ಕರ್ನಾಟಕ ಪ್ರಾಂತ್ಯಾಧಿಕಾರಿಗಳಾದ ಡಾ. ಸಿಸ್ಟರ್ ಜೆಸ್ಸಿ ಮರ್ಲಿನ್, “ಫಾದರ್ ಚಸರಾ ಅವರದು ಧೀಮಂತ ವ್ಯಕ್ತಿತ್ವ, ನಮ್ಮೆಲ್ಲರಿಗೂ ಆಧ್ಯಾತ್ಮಿಕ ಶಕ್ತಿಯನ್ನು ತುಂಬಿದವರು ಅವರು ಎಂದು ಚಸರಾ ಅವರ ಒಡನಾಟದ ಘಟನೆಗಳನ್ನು ಹಂಚಿಕೊಂಡು, ಸಾಹಿತ್ಯ ಬಹಳ ದೊಡ್ಡ ಬದಲಾವಣೆಗೆ ಕಾರಣವಾಗಬಲ್ಲದ್ದು ಮೌಡ್ಯಗಳನ್ನು ಮಾತಾಗಿಸಿ ಬೆಳಕಿನ ಕಡೆಗೆ ಕರೆದುಕೊಂಡು ಹೋಗಬಲ್ಲಂತಹದು. ಚಸರಾ ಅವರ ನೆನಪು ಉಳಿಯುವಂತಾಗಲು ಪ್ರಶಸ್ತಿಗಳು ಕಾರಣವಾಗಬೇಕು ಅವರ ಆದರ್ಶಗಳು ಉಳಿಯಬೇಕು” ಎಂದರು.
ಮುಖ್ಯ ಅತಿಥಿಗಳಾಗಿದ್ದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಿ.ಜಿ. ಲಕ್ಷ್ಮೀಪತಿಯವರು ಮಾತನಾಡಿ “ಫಾದರ್ ಚಸರಾ ಅಭಿರುಚಿ ಮತ್ತು ಕ್ರಿಯಾಶೀಲತೆಗಳ ಸಂಕೇತವಾಗಿದ್ದರು. ಕನ್ನಡದ ಎಲ್ಲಾ ಪ್ರಗತಿಶೀಲ ಚಳುವಳಿಗಳ ಜೊತೆಗಿದ್ದ ಅವರು ಖಲೀಲ ಗಿಬ್ರಾನ್ ಅವರ ಸಾಹಿತ್ಯವನ್ನು ಸಮರ್ಥವಾಗಿ ಕನ್ನಡಕ್ಕೆ ತಂದಿದ್ದರು, ವಚನ, ದಾಸರ ಪದದ ಮೌಲ್ಯಗಳನ್ನು ಚರ್ಚ್ ಪ್ರಾರ್ಥನೆಯೊಳಗೆ ತಂದು ಸರ್ವ ಧರ್ಮ ಸಾಕಾರವನ್ನು ಸಾಧಿಸಿದವರು” ಎಂದು ಚಸರಾ ಅವರ ಒಡನಾಟದ ನೆನೆಪುಗಳನ್ನು ಹಂಚಿಕೊಂಡಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಬರಹಗಾರ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯನವರು “ಕನ್ನಡದ ಜನಜೀವನ ಹಲವು ಧರ್ಮದ ಧಾರೆಗಳಿಂದ ಕೂಡಿದ ‘ಮಹಾ ಸಂಗಮ’ವೆಂದು ವರ್ಣಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ರೆವರೆಂಡ್ ಉತ್ತಂಗಿ ಚನ್ನಪ್ಪನವರು ಸರ್ವಜ್ಞನ ವಚನಗಳನ್ನು ಸಂಪಾದಿಸಿ ಕನ್ನಡ ಸಾಹಿತ್ಯಕ್ಕೆ ಧರ್ಮದ ಗಡಿ ಇಲ್ಲವೆಂದು ತೋರಿಸಿಕೊಟ್ಟರು” ಎಂದರು. ಮತ್ತೋರ್ವ ಪ್ರಶಸ್ತಿ ಪುರಸ್ಕೃತರಾದ ಪ್ರವೀಣ್ ದತ್ ಸ್ಟೀಫನ್ “1994ರಿಂದಲೂ ಚಸರಾ ಅವರ ಗೀತಗಳಿಗೆ ಸಂಗೀತ ನೀಡುತ್ತಾ ಬಂದ ಅನುಭವಗಳನ್ನು ಹಂಚಿಕೊಂಡು ಸಂಗೀತ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗ ದೊಡ್ಡದು” ಎಂದರು.
ದತ್ತಿ ದಾನಿಗಳ ಪರವಾಗಿ ಮಾತನಾಡಿದ ರಫಾಯಲ್ ರಾಜ್ “1964ರಿಂದಲೂ ಕನ್ನಡಕ್ಕಾಗಿ ಕ್ರೈಸ್ತರು ನಡೆಸುತ್ತಿರುವ ಹೋರಾಟವನ್ನು ವಿವರಿಸಿ ಈ ಹೋರಾಟ ವಿಶ್ವದ ಗಮನಕ್ಕೆ ಬರುವಂತೆ ಮಾಡಿದವರು ಫಾದರ್ ಚಸರಾ” ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿಯವರು ಸ್ವಾಗತಿಸಿ, ಇನ್ನೊಬ್ಬ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಅವರು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು.