ಕಾಸರಗೋಡು : ಗಡಿಪ್ರದೇಶವಾದ ಕಾಸರಗೋಡಿನಲ್ಲಿ ಕಳೆದ 18 ವರ್ಷಗಳಿಂದ ನಾಡು, ನುಡಿ ಹಾಗೂ ಸಂಸ್ಕೃತಿಗಾಗಿ ತನ್ನನ್ನು ತೊಡಗಿಸಿಕೊಂಡಿರುವ ‘ರಂಗ ಚಿನ್ನಾರಿ’ ಸಂಸ್ಥೆಯು ನೂರಾರು ಸಾಂಸ್ಕೃತಿಕ- ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಕೆಲವು ವರ್ಷಗಳಿಂದ ಕಾಸರಗೋಡಿನ ಪ್ರತಿಭೆಗಳಿಗೆ ನಗದು ಬಹುಮಾನದೊಂದಿಗೆ ‘ರಂಗ ಚಿನ್ನಾರಿ ಪ್ರಶಸ್ತಿ’ ಹಾಗೂ ’ರಂಗ ಚಿನ್ನಾರಿ ಯುವ ಪ್ರಶಸ್ತಿ’ ನೀಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿದೆ.
2023-24ನೇ ಸಾಲಿನಲ್ಲಿ ಈ ಕೆಳಗಿನವರಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆಯೆಂದು ರಂಗ ಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ, ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಕೆ. ಮತ್ತು ಮನೋಹರ ಶೆಟ್ಟಿ ತಿಳಿಸಿದ್ದಾರೆ. ‘ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ’ಗೆ ಶ್ರೀ ರಾಮ ಜೋಗಿ, ‘ರಂಗ ಚಿನ್ನಾರಿ ಪ್ರಶಸ್ತಿ’ಗೆ ಶ್ರೀ ಚಂದ್ರಶೇಖರ ಹಾಗೂ ಶ್ರೀಮತಿ ಶಶಿಕಲಾ ಬಾಯಾರು, ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ಗೆ ಶ್ರೀ ಕಾರ್ತಿಕ್ ಪಡ್ರೆ ಹಾಗೂ ಕುಮಾರಿ ಶಿವಾನಿ ಕೆ. ಕೂಡ್ಲು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 30-03-2024ರ ಶನಿವಾರ ಸಂಜೆ ಘಂಟೆ 4.30ಕ್ಕೆ ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾ ಕುಟೀರದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು.
ಕಳೆದೆರಡು ವರ್ಷಗಳಿಂದ ಮಹಿಳೆಯರಿಗಾಗಿ ‘ನಾರಿ ಚಿನ್ನಾರಿ’ ಘಟಕ, ಸುಗಮ ಸಂಗೀತ ಬೆಳವಣೆಗೆಗಾಗಿ ‘ಸ್ವರ ಚಿನ್ನಾರಿ’ ಘಟಕಗಳನ್ನು ಸ್ಥಾಪಿಸಿ ಹಲವಾರು ಚಟುವಟಿಕೆಗಳನ್ನು ಸಂಘಟಿಸುತ್ತಿರುವ ಸಂಸ್ಥೆ ‘ರಂಗ ಚಿನ್ನಾರಿ’. ಕಾಸರಗೋಡಿನ 4000 ಕನ್ನಡ ಶಾಲಾ ಮಕ್ಕಳಿಗಾಗಿ ನಾಡಗೀತೆ, ಭಾವಗೀತೆಗಳ ಶಿಬಿರ, ರಂಗ ಸಂಸ್ಕೃತಿ ಶಿಬಿರ, ಭರತನಾಟ್ಯ ಕಾರ್ಯಾಗಾರ, ನಾಟಕೋತ್ಸವ, ಸಾಹಿತ್ಯೋತ್ಸವ, ಯಕ್ಷಗಾನೋತ್ಸವ, ಭಕ್ತಿ ಭಾವಗೀತೆ, ಭಜನಾ ಕಮ್ಮಟ ಹೀಗೆ ನೂರಾರು ಉತ್ಸವಗಳನ್ನು ಸಂಘಟಿಸಿದೆ.
ಶ್ರೀ ರಾಮ ಜೋಗಿ :
ಐತಪ್ಪ ಜೋಗಿ ಮತ್ತು ರುಕ್ಮಿಣಿ ದಂಪತಿಗಳ ಸುಪುತ್ರರಾಗಿರುವ 72ರ ಹರೆಯದ ಶ್ರೀ ರಾಮ ಜೋಗಿಯವರು ಕಯ್ಯಾರು ಜೋಡುಕಲ್ಲು ನಿವಾಸಿ. ತಮ್ಮ 16ನೇ ವಯಸ್ಸಿನಿಂದ ತೊಡಗಿ ಸತತವಾಗಿ 40 ವರ್ಷಗಳ ಸುದೀರ್ಘ ಕಾಲ ಹಲವು ಮೇಳಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಜನಮೆಚ್ಚುಗೆಯನ್ನು ಗಳಿಸಿದ್ದಾರೆ. ತೆರೆಯ ಮರೆಯಲ್ಲಿ ಇವರ ದುಡಿಮೆಯೂ ಅಷ್ಟೇ ಪ್ರಾಮುಖ್ಯವಾದುದು. ವರ್ಣಾಲಂಕಾರ, ವಸ್ತ್ರಾಲಂಕಾರ ಹಾಗೂ ವೇಷಭೂಷಣಗಳನ್ನು ದುರಸ್ತಿ ಮಾಡುವುದರಲ್ಲಿ ಇವರು ಪರಿಣತರು. ಹಲವು ಶಿಷ್ಯರಿಗೆ ಯಕ್ಷಗಾನ ನಾಟ್ಯತರಬೇತಿಯನ್ನೂ ನೀಡಿದ್ದಾರೆ. ಅನೇಕ ವರ್ಷಗಳಿಂದ ಚಿಕ್ಕ ಮೇಳದ ತಂಡವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸದ್ದಿಲ್ಲದ ಇವರ ಸಾಧನೆಯನ್ನು ಗುರುತಿಸಿ ದೇವಕಾನ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ಯಕ್ಷ ಸಂಪದದ ಶುಭವರ್ಣ ಪ್ರಶಸ್ತಿಗಳು ಒಲಿದು ಬಂದಿವೆ. ಬಡತನದ ಹಿನ್ನೆಲೆಯಲ್ಲೂ ಯಕ್ಷಗಾನ ಕಲೆಯನ್ನು ಪ್ರೀತಿಯಿಂದ ಆರಾಧಿಸಿಕೊಂಡು ಬರುತ್ತಿರುವ ಶ್ರೀ ರಾಮ ಜೋಗಿಯವರು ಈ ಬಾರಿಯ ‘ಶ್ರೀ ಶ್ರೀ ಕೇಶವಾನಂದ ಭಾರತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಶ್ರೀ ಚಂದ್ರಶೇಖರ :
ದಿ. ಕೆ. ಕೃಷ್ಣ ಮತ್ತು ದಿ. ಕೆ. ಮುಕ್ತಾ ದಂಪತಿಗಳ ಸುಪುತ್ರರಾದ ಶ್ರೀ ಚಂದ್ರಶೇಖರ ಇವರು ವಾದ್ಯ ಕಲಾವಿದರ ಮನೆತನದವರು. ತಂದೆ ಹಾಗೂ ಅಜ್ಜ ದಿ. ತ್ಯಾಂಪಣ್ಣ ಶೇರಿಗಾರ್ ನುರಿತ ಬ್ಯಾಂಡ್ ಕಲಾವಿದರಾಗಿದ್ದರು. ಚಂದ್ರಶೇಖರರು ಸಾಕ್ಸೋಫೋನ್ ವಾದನವನ್ನು ತಮ್ಮ ಹಿರಿಯಣ್ಣ ಗಂಗಾಧರ್ ಇವರಲ್ಲಿ ಕಲಿತು, ಕಾಸರಗೋಡು ಪರಿಸರದಲ್ಲಿ ಸುಮಾರು ಐದು ಸಾವಿರಕ್ಕಿಂತಲೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೇವಸ್ಥಾನ ಹಾಗೂ ದೈವಸ್ಥಾನಗಳ ಉತ್ಸವಗಳಲ್ಲಿ, ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಇವರ ಸಾಕ್ಸೋಫೋನ್ ವಾದನಕ್ಕೆ ತಲೆದೂಗದವರಿಲ್ಲ. ಇವರದು ಕಲಾವಿದರ ಕುಟುಂಬ. ತಮ್ಮ ಐದು ಮಂದಿ ಸಹೋದರರೊಂದಿಗೆ ತಾಸೆ, ಕ್ಲಾರಿಯೋನೆಟ್, ಸಾಕ್ಸೋಫೋನ್- ಹೀಗೆ ವಿವಿಧ ವಾದ್ಯಗಳನ್ನು ನುಡಿಸುತ್ತಾ, ಸಂಗೀತ ಕಲೆಯ ಉಪಾಸನೆಯನ್ನು ಮಾಡುತ್ತಾ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪರಂಪರಾಗತ ಕಲೆಯನ್ನು ಶ್ರದ್ಧೆಯಿಂದ ಉಳಿಸಿ ಬೆಳೆಸುತ್ತಾ ಮುನ್ನಡೆಯುತ್ತಿರುವ ಈ ಸಂಗೀತ ಸಾಧಕನಿಗೆ ಅರ್ಹವಾಗಿಯೇ ಈ ಬಾರಿಯ ‘ರಂಗ ಚಿನ್ನಾರಿ ಪ್ರಶಸ್ತಿ’ ಒಲಿದಿದೆ. ಪ್ರಸ್ತುತ ಅವರು ಕಾಸರಗೋಡಿನ ನಾಯಕ್ಸ್ ರಸ್ತೆಯ ಬಳಿಯ ನಿವಾಸದಲ್ಲಿ ಮಡದಿ ಶಕುಂತಳಾರವರ ಜೊತೆ ವಾಸವಾಗಿದ್ದಾರೆ.
ಶ್ರೀಮತಿ ಶಶಿಕಲಾ ಬಾಯಾರು :
ಯಕ್ಷಗಾನ ಅರ್ಥಧಾರಿಗಳಾಗಿ ಸಾಹಿತಿಗಳಾಗಿ, ಗುರುಗಳಾಗಿ, ಕಾಸರಗೋಡಿನ ಕನ್ನಡ ನೇತಾರರಾಗಿ, ಜನಮಾನಸದಲ್ಲಿ ಸ್ಮರಣೀಯರಾಗಿರುವ ದಿ. ಪಂಡಿತ ಪೆರ್ಲ ಕೃಷ್ಣ ಭಟ್ ಅವರ ಪುತ್ರಿಯಾಗಿರುವ ಶ್ರೀಮತಿ ಶಶಿಕಲಾ ಬಾಯಾರು ಓರ್ವ ಗೃಹಿಣಿ. ಸಾಹಿತ್ಯ ಹಾಗೂ ಕಸೂತಿ ಚಿತ್ರಕಲೆಯಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದವರು. ಔಪಚಾರಿಕ ಶಿಕ್ಷಣ ಎಸ್.ಎಸ್.ಎಲ್.ಸಿ.ಗೆ ಸೀಮಿತವಾದರೂ ಓದು ಬರವಣಿಗೆ ಸಂಗೀತ ಚಿತ್ರಕಲೆ ಹೀಗೆ ಸದಭಿರುಚಿಯ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡ ಇವರು ತಮಗೆ ತಾವೇ ಗುರುವಾಗಿ ಕಸೂತಿ ಚಿತ್ರದಲ್ಲಿ ಮಾಡಿದ ಸಾಧನೆ ಅನನ್ಯ. ನುಡಿಮುತ್ತುಗಳನ್ನು ಕೋದಂತಿರುವ ಅವರ ಪತ್ರಗಳು ‘ಪತ್ರಾರ್ಜಿತ’ ಎಂಬ ಹೆಸರಿನಲ್ಲಿ ಜಯಂತ ಕಾಯ್ಕಿಣಿಯವರ ಮುನ್ನುಡಿಯೊಂದಿಗೆ ಪ್ರಕಟವಾದದ್ದು ಪತ್ರ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು. ಕಸೂತಿ ಹೆಣೆಯ ಹಾಸು ಹೊಕ್ಕುಗಳಲ್ಲಿ ಅದನ್ನು ತುಂಬುವ ಬಣ್ಣಗಳಲ್ಲಿ ಅವರು ಮೂಡಿಸುವ ವ್ಯಕ್ತಿ ಚಿತ್ರಗಳು, ಭಾವಪೂರ್ಣ ಸನ್ನಿವೇಶಗಳು, ಒಂದೊಂದಕ್ಕೂ ಅವರು ಕೊಡುವ ಶೀರ್ಷಿಕೆಗಳು ಅನುಪಮವಾದುದು. ಆಳ್ವಾಸ್ ನುಡಿಸಿರಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಅಲ್ಲದೆ ಸ್ಥಳೀಯವಾಗಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಅವರ ಚಿತ್ರಗಳು ಪ್ರದರ್ಶನಗೊಂಡು ನಾಡಿನ ಉದ್ದಗಲದ ಜನರ ಮನಸೂರೆಗೊಂಡಿವೆ. ಈ ಸದ್ದಿಲ್ಲದ ಸಾಧಕಿಯ ಸಾಧನೆಯನ್ನು ಮುಂಬಯಿಯ ಸ್ಪಾರೋ ಎಂಬ ಸಂಸ್ಥೆಯು ಸಾಕ್ಷ್ಯ ಚಿತ್ರವಾಗಿ ದಾಖಲಿಸಿಕೊಂಡಿದೆ. ತಮ್ಮ ಕಲಾಸಕ್ತಿಗೆ ತುಂಬು ಬೆಂಬಲವನ್ನು ನೀಡುತ್ತಿದ್ದ ಪತಿ ಶ್ರೀಪತಿ ಭಟ್ ಅವರನ್ನು ಕಳೆದುಕೊಂಡು ಕೂಡು ಕುಟುಂಬದ ಹಿರಿಯೆಯಾಗಿ ಬಾಳ ಸಂಜೆಯಲ್ಲಿರುವ ಈ ಅಪೂರ್ವ ಸಾಧಕಿಯನ್ನು ಗೌರವಿಸುವುದಕ್ಕೆ ರಂಗಚಿನ್ನಾರಿಗೆ ಅಭಿಮಾನವೆನಿಸುತ್ತದೆ.
ಕಾರ್ತಿಕ್ ಪಡ್ರೆ :
ಕಾಸರಗೋಡಿನ ಯುವ ಪ್ರತಿಭೆ ಕಾರ್ತಿಕ್ ಪಡ್ರೆಯವರು ಬಾಲಕೃಷ್ಣ ಪಾಟಾಳಿ ಹಾಗೂ ರೇಖಾ ದಂಪತಿಗಳ ಪುತ್ರ. ತಾನು ಕಲಿತ ಶಾಲಾ ಕಾಲೇಜುಗಳಲ್ಲಿ ತನ್ನ ಪ್ರತಿಭೆಯ ಹೆಜ್ಜೆ ಗುರುತನ್ನು ಮೂಡಿಸುತ್ತ ಬಂದವರು. ಎಂ.ಎ., ಬಿ.ಎಡ್. ಪದವೀಧರರಾಗಿರುವ ಇವರು ತಮ್ಮ ವಾಕ್ಪಟುತ್ವದಿಂದ ಹಾಗೂ ಬರವಣಿಗೆಯ ಕೌಶಲದಿಂದ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ. ಎಳೆಯ ವಯಸ್ಸಿನಲ್ಲಿಯೇ ಇವರು ಹಲವು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಪ್ರಬಂಧ ಮಂಡನೆ ಹಾಗೂ ಉಪನ್ಯಾಸಗಳಲ್ಲಿ ಪ್ರಬುದ್ಧ ಚಿಂತನೆಯನ್ನು ಮಂಡಿಸುವುದರ ಮೂಲಕ ತುಂಬು ಭರವಸೆಯನ್ನು ಮೂಡಿಸಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು, ತಮ್ಮ ನಾಯಕತ್ವ ಗುಣವನ್ನು ಸಾಬೀತು ಪಡಿಸಿದ್ದಾರೆ. ಉತ್ತಮ ಸಂಘಟನಾ ಶಕ್ತಿಯುಳ್ಳವರಾಗಿ, ಕನ್ನಡ ಪರ ಹೋರಾಟದಲ್ಲೂ ಶ್ರಮವಹಿಸಿದ್ದಾರೆ. ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥಧಾರಿಗಳಾಗಿ ಕೌಶಲವನ್ನು ಮೆರೆದಿದ್ದಾರೆ. ‘ಸಿರಿ ಚಂದನ’ ಕನ್ನಡ ಯುವ ಬಳಗದ ಕಾರ್ಯದರ್ಶಿ, ಕಲಾಕುಂಚ ಕೇರಳ ಗಡಿನಾಡ ಘಟಕದ ಜಿಲ್ಲಾ ಕಾರ್ಯದರ್ಶಿ ಹೀಗೆ ಹಲವು ನೆಲೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.
ಶಿವಾನಿ ಕೆ. ಕೂಡ್ಲು :
ಅರಳು ಪ್ರತಿಭೆ ಶಿವಾನಿ ಕೆ. ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿರುವ ಕಿರಣ್ ಪ್ರಸಾದ್ ಹಾಗೂ ರಮ್ಯ ದಂಪತಿಯ ಪುತ್ರಿ. ಅದೇ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ಆಗಿರುವ ಈಕೆಯದು ಬಹುಮುಖ ಪ್ರತಿಭೆ. ಚಂಪೂ ಭಾಷಣ, ನೃತ್ಯ, ಅಭಿನಯ, ಕರಕುಶಲ ಕಲೆ ಹೀಗೆ ಈಕೆಯ ಆಸಕ್ತಿಗಳು ಹಲವು. ಉಪಜಿಲ್ಲೆ, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಹಲವು ಬಹುಮಾನಗಳನ್ನು ಗೆದ್ದುಕೊಂಡಿದ್ದಾಳೆ. ಗುರು ಸುರೇಂದ್ರನ್ ಪಟ್ಟೇನ್ ನೀಲೇಶ್ವರ ಇವರಲ್ಲಿ ನೃತ್ಯಾಭ್ಯಾಸ ಕಲಿಯುತ್ತಿರುವ ಈಕೆ ಮೋಹಿನಿಯಾಟ್ಟಂನಲ್ಲಿ ಉಪ ಜಿಲ್ಲಾ ಮಟ್ಟದಲ್ಲಿ ಎ ಗ್ರೇಡ್ ಪಡೆದಿರುತ್ತಾಳೆ. ಸ್ಕೌಟ್ -ಗೈಡ್ಸ್ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾದ ಈಕೆ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ನಡೆದ ಸ್ಕೌಟ್ ಗೈಡ್ಸ್ ಸಮಾವೇಶಗಳಲ್ಲಿ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದಾಳೆ.