ಕಾಸರಗೋಡು : ಕಾಸರಗೋಡಿನ ಸಾಂಸ್ಕೃತಿಕ, ಸಾಹಿತ್ಯಿಕ ಸಂಸ್ಥೆಯಾದ ರಂಗ ಚಿನ್ನಾರಿಯವರು ಏರ್ಪಡಿಸಿದ ಪ್ರಶಸ್ತಿ ವಿಜೇತ ಗಾಯಕ ಬಾಲಚಂದ್ರ ಪ್ರಭು ಅವರ ‘ಕಾಯೋ ಕರುಣಾಕರಾ’ ಭಕ್ತಿ ಸಂಗೀತ ಕಾರ್ಯಕ್ರಮವು ದಿನಾಂಕ 17-03-2024ರಂದು ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಕಾಸರಗೋಡಿನ ಖ್ಯಾತ ಮೂಳೆ ತಜ್ಞರಾದ ಡಾ. ಕೆ.ಕೆ. ಶ್ಯಾನಭೋಗ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ “ಒಳ್ಳೆಯ ಭಜನೆ ಹಾಗೂ ಸಂಗೀತವನ್ನು ಆಲಿಸುವುದರಿಂದ ಮನಸ್ಸು ಉಲ್ಲಸಿತವಾಗಿರುತ್ತದೆ. ಸುಸಂಸ್ಕೃತವಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುಖಾಂತರ ಮನಸ್ಸಿನ ನೋವುಗಳನ್ನು ದೂರ ಮಾಡಿಕೊಳ್ಳಬಹುದು. ಎಂದು ಹೇಳಿದರು. ಕಳೆದೆರಡು ದಶಕಗಳಿಂದ ನಾಡು, ನುಡಿ ಸಂಸ್ಕೃತಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ‘ರಂಗ ಚಿನ್ನಾರಿ’ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ತಲುಪಿಸುವ ಬಹು ದೊಡ್ಡ ಜವಾಬ್ದಾರಿಯನ್ನು ಸಂಸ್ಥೆಯು ಮಾಡುತ್ತಿದೆಯಲ್ಲದೆ, ಮಹಿಳೆಯರಿಗಾಗಿ ‘ನಾರಿ ಚಿನ್ನಾರಿ’ ಮತ್ತು ಸಂಗೀತ ಕ್ಷೇತ್ರಕ್ಕಾಗಿ ‘ಸ್ವರ ಚಿನ್ನಾರಿ’ ಸಂಸ್ಥೆಯನ್ನು ಪ್ರಾರಂಭಿಸಿದ್ದನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಸರಗೋಡು ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಜಗದೀಶ್ ಕಾಮತ್ ಇವರು ಕಾಸರಗೋಡಿನಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಖ್ಯಾತ ಧಾರ್ಮಿಕ ಮುಂದಾಳು, ನೇತ್ರ ತಜ್ಞರಾದ ಡಾ. ಅನಂತ ಕಾಮತ್ ಇವರು ಗಾಯಕ ಬಾಲಚಂದ್ರ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.
‘ಕಾಯೋ ಕರುಣಾಕರಾ’ ಭಕ್ತಿ ಸಂಗೀತದ ಸಭಾ ಕಾರ್ಯಕ್ರಮವು ಸ್ವಯಂ ಪ್ರಭು ಅವರ ಪ್ರರ್ಧನೆಯೊಂದಿಗೆ ಪ್ರಾರಂಭಗೊಂಡಿತು. ರಂಗ ಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಬೆಳವಣಿಕೆಯನ್ನು ವಿವರಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಗಾಯಕ ಬಾಲಚಂದ್ರ ಪ್ರಭು ಉಪಸ್ಥಿತರಿದ್ದರು. ರಂಗ ಚಿನ್ನಾರಿ ನಿರ್ದೇಶಕರಾದ ಸತ್ಯ ನಾರಾಯಣ ಕೆ. ಧನ್ಯವಾದವಿತ್ತರು. ಮನೋಹರ ಶೆಟ್ಟಿ, ನಾರಿ ಚಿನ್ನಾರಿಯ ಕಾರ್ಯದರ್ಶಿ ದಿವ್ಯ ಗಟ್ಟಿ ಪರಕ್ಕಿಲ, ಜನಾರ್ದನ ಅಡಂಗೂಡು, ನಾರಿ ಚಿನ್ನಾರಿಯ ವಿಜಯ ಲಕ್ಷ್ಮೀ ಶ್ಯಾನುಭೋಗ್, ಸೂರ್ಯಕಾಂತಿ, ಸಿ. ಮೀರಾ ಮುಂತಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾರ ಭಾರತಿ ಸಂಗೀತ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ‘ಯುವ ಕಲಾಮಣಿ’ ಪ್ರಶಸ್ತಿ ವಿಜೇತ ಬಾಲಚಂದ್ರ ಪ್ರಭು ಇವರಿಂದ ‘ಕಾಯೋ ಕರುಣಾಕರಾ’ ಭಕ್ತಿ ಸಂಗೀತ ಕಾರ್ಯಕ್ರಮವು ಜರಗಿತು. ಮರಾಠಿ ಭಜನಾ ಕಾರ್ಯಕ್ರಮಕ್ಕೆ ತಬ್ಲಾದಲ್ಲಿ ಅಂತರಾಷ್ಟ್ರೀಯ ತಬ್ಲಾ ಪಟು ರಾಜೇಶ್ ಭಾಗವತ್, ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್, ತಾಳದಲ್ಲಿ ಮಾಸ್ಟರ್ ಸ್ವಯಂ ಪ್ರಭು ಸಹಕರಿಸಿದರು. ಎಲ್ಲಾ ಕಲಾವಿದರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.