ಕಾರ್ಕಳ : ಕಾರ್ಕಳ ಪೆರ್ವಾಜೆಯ ಅಮಿತ್ ಎಸ್. ಪೈ ಸ್ಮಾರಕ ಸ್ವಾಮಿ ವಿವೇಕಾನಂದ ಧ್ಯಾನ ಯೋಗ ಮತ್ತು ಸೇವಾಮಂದಿರದಲ್ಲಿ ಹೊಸಸಂಜೆ ಬಳಗದ ಸಹಯೋಗದಲ್ಲಿ ಆಯೋಜಿಸಲಾದ ‘ಸಾಧಕರಿಗೆ ಸನ್ಮಾನ’ ಕಾರ್ಯಕ್ರಮವು ದಿನಾಂಕ 17-03-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾದ ಸಾವಿತ್ರಿ ಮನೋಹರ್ ಮಾತನಾಡಿ “ಮಹಿಳಾ ಸಾಹಿತ್ಯ ಅಂದರೆ ಅಡುಗೆಮನೆ ಸಾಹಿತ್ಯ ಎಂದು ಹೀಗಳೆಯದಿರಿ .ಇಂದು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಮಹಿಳೆಯರು ಜನಸಾಮಾನ್ಯರಿಂದ ವಿದ್ವಾಂಸರವರೆಗೆ ಮೆಚ್ಚುಗೆ ಗಳಿಸುವಂತಹ ಕೃತಿಗಳನ್ನು ರಚಿಸಿ ಯಶಸ್ವಿಯಾಗಿದ್ದಾರೆ .ಆದ ಕಾರಣ ಸಾಹಿತ್ಯದಲ್ಲಿ ಸ್ತ್ರೀ ಮತ್ತು ಪುರುಷ ಸಾಹಿತ್ಯ ಎಂಬ ಭೇದ ಸರ್ವಥಾ ಸಲ್ಲದು. ಹಾಸ್ಯ ಅಂದರೆ ಸಂತೋಷ ಕೊಡುವಂತದ್ದು .ಹಾಸ್ಯದಲ್ಲಿ ಲಘುಹಾಸ್ಯ , ತಿಳಿಹಾಸ್ಯ , ಬಿಗುಹಾಸ್ಯ ಹೀಗೆ ನಾನಾ ಪ್ರಕಾರಗಳಿವೆ . ಇನ್ನೊಬ್ಬರ ಮನಸ್ಸನ್ನು ನೋಯಿಸದೆ ನಕ್ಕು ಹಗುರಾಗುವ ಹಾಸ್ಯ ಸಾಹಿತ್ಯ ಸ್ರಷ್ಟಿ ಪ್ರಸ್ತುತ ತೀರಾ ಅತ್ಯಗತ್ಯವಾಗಿದೆ .ನಗು ಮನುಷ್ಯನ ಸಹಜಸ್ವಭಾವವಾಗಬೇಕು. ಆದಕಾರಣ ಶಿಸ್ತಿನ ಪರಿಧಿಯೊಳಗೆ ನಗುವನ್ನು ಬಂಧಿಸಿಡುವ ಪ್ರವೃತ್ತಿಯನ್ನು ತತ್ ಕ್ಷಣ ತೊರೆಯಿರಿ.” ಎಂದು ಅವರು ಕರೆನೀಡಿದರು.
ಕಾರ್ಪೋರೇಶನ್ ಬ್ಯಾಂಕ್ ನಿವೃತ್ತ ಪ್ರಬಂಧಕ ಮುಂಡ್ಕೂರು ಗೋಪಿನಾಥ ವೈಕುಂಠ ಕಾಮತ್,
ಎಂ. ಸಿ. ಸಿ. ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಡಿಸಿಲ್ವ, ಯುವಸಾಹಿತಿ ರಾಜೇಶ್ ಕಲ್ಯಾ , ಕಾರ್ಕಳ ಪುರಸಭೆಯ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ , ಮಂದಿರದ ಪ್ರವರ್ತಕರಾದ ಶ್ರೀನಿವಾಸ ಪೈ , ನಿರ್ಮಲಾ ಪೈ, ಹೊಸಸಂಜೆ ಬಳಗದ ಅಧ್ಯಕ್ಷ ಆರ್ . ದೇವರಾಯ ಪ್ರಭು , ಸಾಮಾಜಿಕ ಮುಂದಾಳು ಪ್ರಭಾಕರ ಬಂಗೇರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಮೂಡುಬಿದಿರೆ ಶಾಖೆಯ ಹಿರಿಯ ಪ್ರಬಂಧಕ ಉಮೇಶ್ , ಎಂ. ಸಿ. ಸಿ. ಬ್ಯಾಂಕ್ ಕಾರ್ಕಳ ಶಾಖೆಯ ಪ್ರಬಂಧಕ ರೊಯನ್, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಪುರಸ್ಕೃತ ಹಾಸ್ಯಸಾಹಿತಿ ಧಾರವಾಡದ ನಳಿನಿ ಟಿ . ಭೀಮಪ್ಪ ಅವರನ್ನು ಸನ್ಮಾನಿಸಲಾಯಿತು .
ಕಾರ್ಯಕ್ರಮದಲ್ಲಿ ಶ್ರಾವ್ಯಾ ಶೆಟ್ಟಿ ಸ್ವಾಗತಿಸಿ, ವೀಣಾ ಭಂಡಾರಿ ಪ್ರಾಸ್ತಾವಿಕ ಮಾತನ್ನಾಡಿ, ಗ್ರೀಷ್ಮಾ ಪ್ರಭು ತೆಳ್ಳಾರು ಕಾರ್ಯಕ್ರಮ ನಿರೂಪಿಸಿ, ಸುನೀತಾ ಬಂಗೇರ ವಂದಿಸಿದರು.