ಮಂಗಳೂರು : ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರಿಂಜದ ಯಕ್ಷಾವಾಸ್ಯಮ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ ಇಲ್ಲಿನ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ದಿನಾಂಕ 16-03-2024ರಂದು ರಾಜ್ಯ ಮಟ್ಟದ ಮಹಿಳಾ ಕಲಾವಿದೆಯರ ಸಾಧನೆಯ ಸಂಭ್ರಮದ ಸಮ್ಮಿಲನ ‘ಯಕ್ಷ ಸುಮತಿ’ ಎಂಬ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ “ಭರತನಾಟ್ಯ ಮತ್ತು ಯಕ್ಷಗಾನದಂತಹ ಕಲೆಗಳು ಜೀವನಕ್ಕೊಂದು ಶಿಸ್ತು, ತಾಳ್ಮೆಯನ್ನು ಕಲಿಸುತ್ತವೆ. ಯಕ್ಷಗಾನ ಮತ್ತು ಭರತನಾಟ್ಯ ಕಲೆಗಳು ಕರಾವಳಿ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಇದನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಒಂದು ಕಲೆಯು ಸ್ವಯಂ ನಿಯಂತ್ರಣದ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳುವ ಪಾಠ ಕಲಿಸುತ್ತದೆ. ಹಿಂದಿನ ಯಕ್ಷಗಾನ ತಂಡಗಳು ಬಹಳ ಶ್ರಮಪಟ್ಟು ಕಲೆಯೊಂದಿಗಿನ ಭಾವನಾತ್ಮಕ ಸಂಬಂಧದಿಂದಾಗಿ ದೊಡ್ಡ ಅಪೇಕ್ಷೆ ಇಲ್ಲದೆ, ಈ ಕಲೆಯನ್ನು ಬೆಳೆಸಿವೆ. ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಒಂದು ಊರು ಗೌರವಯುತವಾಗಿ ಇರಲು ಆ ಊರಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಬಲಿಷ್ಠವಾಗಿ ಇರಬೇಕು. ಆ ಕೆಲಸ ತುಳುನಾಡಿನಲ್ಲಿ ಆಗಿದೆ. ವಿವಿ ತುಳು ಪೀಠಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಲಾಗುವುದು” ಎಂಬ ಭರವಸೆ ನೀಡಿದರು.
ವಿವಿ ಕಾಲೇಜಿನ ಪ್ರಾಂಶುಪಾಲೆ ಅನಸೂಯಾ ರೈ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೆಶಕಿ ಪೂರ್ಣಿಮಾ, ಪಟ್ಲ ಫೌಂಡೇಷನ್ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇದರ ಅಧ್ಯಕ್ಷ ಗೋವಿಂದ ವಂಡಾರು ಉಪಸ್ಥಿತರಿದ್ದರು. ತುಳುಪೀಠ ಮತ್ತು ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
‘ಯಕ್ಷಗಾನದಲ್ಲಿ ಮಹಿಳೆ: ನಿನ್ನೆ-ಇಂದು-ನಾಳೆ” ಕುರಿತ ಗೋಷ್ಠಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ, ಯಕ್ಷಾರಾಧನಾ ಕಲಾಕೇಂದ್ರದ ನಿರ್ದೇಶಕಿ ವಿದುಷಿ ಸುಮಂಗಲಾ ರತ್ನಾಕರ್, ಶಿಕ್ಷಕಿ ಶ್ರೀಮತಿ ನಾಗರತ್ನಾ ಹೇರ್ಳೆ ವಿಷಯ ಮಂಡಿಸಿದರು. ವಿಷಯ ಸಮನ್ವಯಕಾರರಾಗಿ ಸಾಯಿಸುಮಾ ನಾವಡ ಸಹಕರಿಸಿದರು.
‘ಯಕ್ಷಗಾನದಲ್ಲಿ ಮಹಿಳಾ ಸಂವೇದನೆ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಕಟೀಲು ಮೇಳದ ಕಲಾವಿದ ತಾರಾನಾಥ ವರ್ಕಾಡಿ ಅವರು, “ಯಕ್ಷಗಾನವನ್ನು ‘ಗಂಡು ಕಲೆ’ ಎನ್ನುವುದು ಪುರುಷರು ಭಾಗವಹಿಸುವ ಕಾರಣದಿಂದ ಅಲ್ಲ, ಅದರಲ್ಲಿರುವ ಗಡಸುತನ ಅದಕ್ಕಾಗಿ ಹಾಗೆ ಕರೆಯಲಾಗುತ್ತದೆ. ಹೆಣ್ಣಿನಲ್ಲೂ ಗಂಡಸುತನ ಇದೆ. ಅದ್ಭುತ ಕಲಾವಿದೆಯರು ಇದ್ದಾರೆ. ಹೀಗಾಗಿ, ಇದನ್ನು ಪುರುಷ-ಸ್ತ್ರೀಯರ ಕಲೆ ಎಂದು ವಿಂಗಡಿಸುವುದಕ್ಕಿಂತ ಇದಕ್ಕೆ ಕ್ಷಾತ್ರ ಕಲೆ ಎನ್ನುವುದೇ ಸೂಕ್ತ’. ವೀರತನ, ಧೀರತನ ಬಯಸುವ ಯಕ್ಷಗಾನದಲ್ಲಿ ಸಂತುಷ್ಟಿ ಎಂಬುದಿಲ್ಲ. ನಿರಂತರ ಸಾಧನೆ ಮಾಡುತ್ತಿರಬೇಕು. ಅಂತಹ ಸಾಧನೆ ಮಾಡಲು ಹೆಣ್ಣಿಗೆ ಅವಕಾಶ ಇದೆಯೇ ಎಂಬುದನ್ನು ಯೋಚಿಸಬೇಕಾಗಿದೆ. ಸಮಾನ ಸಾಮರ್ಥ್ಯ ಇದ್ದರೂ, ಸ್ತ್ರೀಯರಿಗೆ ಕೌಟುಂಬಿಕ, ಭೌತಿಕ ಒತ್ತಡಗಳ ನಡುವೆ ವೇಷ ಮಾಡಬೇಕಾದ ಅನಿವಾರ್ಯತೆ. ಸಮರ್ಪಣಾ ಭಾವ ಸೇವೆಯಿಂದಾಗಿ ಪುರುಷ ಯಕ್ಷಗಾನ ಬೆಳೆದಿದೆ. ಇದೇ ರೀತಿ ಮಹಿಳೆಯರೂ ಸಮರ್ಪಣಾ ಭಾವದಿಂದ ತೊಡಗಿಕೊಂಡರೆ, ಮಹಿಳಾ ತಂಡಗಳು ಸಮಾನವಾಗಿ ನಿಲ್ಲಲು ಸಾಧ್ಯವಿದೆ” ಎಂದರು.
“ಸ್ತ್ರೀ ಸಂವೇದನೆಯ ನೆಲೆಯಲ್ಲಿ ನೋಡಿದಾಗ ಕಲಾವಿದೆಯರನ್ನು ನೋಡಬೇಕಾದ, ನಡೆಸಿಕೊಳ್ಳಬೇಕಾದ, ಮೇಳದ ಒಳಗಿರುವ ಸ್ತ್ರೀ ಪಾತ್ರಧಾರಿಗಳು ಸಮಾಜದಲ್ಲಿರುವ ಹೆಣ್ಣು ಮಕ್ಕಳ ಘನತೆ ಎತ್ತಿ ಹಿಡಿಯಬೇಕಾಗಿರುವ ರೀತಿ ಎರಡನ್ನೂ ಗಮನಿಸಬೇಕಾಗಿದೆ. ಮಹಿಳೆಯರಿಗೆ ಪುರುಷ ಪಾತ್ರ ಮಾಡುವುದು ಸುಲಭ. ಸ್ತ್ರೀಪಾತ್ರ ಮಾಡುವುದೇ ಕಷ್ಟಕರ. ಪುರುಷರು ಸ್ತ್ರೀಯರನ್ನು ಗಮನಿಸಿ ಹಾವಭಾವ, ವೈಯ್ಯಾರದಲ್ಲಿ ಅನುಕರಣೆ ಮಾಡುತ್ತಾರೋ ಅದನ್ನು ನಾವು ಮಾಡಬೇಕಾಗುತ್ತದೆ. ‘ಯಕ್ಷಗಾನವನ್ನು ದೈವೀ ಕಲೆಯಾಗಿ ನೋಡುವುದಾದರೆ, ಅದರ ದೈವೀಕತೆ ಉಳಿಸಿಕೊಳ್ಳುವುದು ಸಾಧ್ಯವಾಗಬೇಕು” ಎಂದು ತುಮಕೂರು ವಿದ್ಯಾನಿಧಿ ಪಿಯು ಕಾಲೇಜಿನ ಉಪನ್ಯಾಸಕಿ ಅರತಿ ಪಟ್ರಮೆ ಅಭಿಪ್ರಾಯಪಟ್ಟರು.
“ಯಕ್ಷಗಾನದಲ್ಲಿ ಸಾಧನೆಯ ಮೆಟ್ಟಿಲೇರಲು ನಿರಂತರ ಸಮರ್ಪಣಾ ಭಾವ ಅಗತ್ಯ. ಮಹಿಳೆ ಪೂರ್ಣ ಪ್ರಮಾಣದಲ್ಲಿ ಯಕ್ಷಗಾನದಲ್ಲಿ ತೊಡಗಿಕೊಂಡು ವೃತ್ತಿಯಾಗಿ ಸ್ವೀಕರಿಸುವಲ್ಲಿ ಸಮಾಜದ ಮುಕ್ತ ಮನಸ್ಸಿನ ಪ್ರೋತ್ಸಾಹಬೇಕು. ಚೌಕಿಮನೆಗಳು ಮಹಿಳಾ ಸ್ನೇಹಿಯಾಗಿ ರೂಪಗೊಳ್ಳಬೇಕು” ಎಂಬ ಬಹುಮತದ ಅಭಿಪ್ರಾಯ ‘ಯಕ್ಷ ಸುಮತಿ’ಯಲ್ಲಿ ವ್ಯಕ್ತವಾಯಿತು.
ಯಕ್ಷ ಮಂಜೂಷಾದ ನಿರ್ದೇಶಕಿ ವಿದ್ಯಾ ಕೊಳ್ಯೂರು ಮಾತನಾಡಿ, “ನಮ್ಮ ಆಸಕ್ತಿ ಯಕ್ಷಗಾನ ಆಗಿರಬೇಕೇ ಹೊರತು ಮಕ್ಕಳು, ಪುರುಷರು, ಮಹಿಳೆಯರು ಅಂತ ಭೇದ ಇರಬಾರದು. ಕಲೆಯನ್ನು ರಾಜ್ಯದ ಹೊರಗೆ ತೆಗೆದುಕೊಂಡು ಹೋಗುವಾಗ ಅಲ್ಲಿನ ಪ್ರೇಕ್ಷಕರಿಗೆ ಅರ್ಥೈಸುವ ಸೂಕ್ಷ್ಮತೆ ಇರಬೇಕು” ಎಂದರು. ವಿಷಯ ಸಮನ್ವಯಕಾರರಾಗಿ ಶುಭಾಶಯ ಜೈನ್ ಸಹಕರಿಸಿದರು. ಯಕ್ಷಗಾನ ರಸಪ್ರಶ್ನೆ, ಯಕ್ಷಗಾನ ಮುಖ ವರ್ಣಿಕೆ ಬರೆಯುವ ಸ್ಪರ್ಧೆಗಳಲ್ಲಿ ಯುವತಿಯರು ಭಾಗವಹಿಸಿದರು.
ಮಧ್ಯಾಹ್ನ ಕಲಾವಿಸ್ಮಯ ಸಾಲಿಗ್ರಾಮ ಇವರು ಯಕ್ಷ ಸುಮತಿ ಪರಿಕಲ್ಪನೆಯ ‘ನಾಡಿನ ವೀರಾಂಗನೆಯರು’ ಯಕ್ಷಗಾನ ನೃತ್ಯ ರೂಪಕ ಎಲ್ಲರ ಮನ ಸೆಳೆಯಿತು. ನಂತರ ನಡೆದ ಪ್ರಬಂಧ ಮಂಡನೆಯಲ್ಲಿ ಸಮನ್ವಯಕಾರರಾಗಿ ಮಾತನಾಡಿದ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ “ಯಕ್ಷಗಾನದಲ್ಲಿ ಈಚೆಗೆ ಅನುಕರಣೆ ಹೆಚ್ಚಾಗಿದೆ. ಸಾಮಾಜಿಕ ತಾಣಗಳನ್ನು ನೋಡಿ ಕಲಿತು ಪ್ರದರ್ಶನ ನೀಡುವ ಪರಿಪಾಠ ಬೆಳೆಯುತ್ತಿದೆ. ಮಹಿಳೆಯರು ಪುರುಷ ಕಲಾವಿದರ ಅನುಕರಣೆ ಮಾಡಲು ಪ್ರಯತ್ನಿಸುತ್ತಾರೆ. ಈ ಪ್ರವೃತ್ತಿ ಇಲ್ಲದಾಗಬೇಕು. ಕಲೆಯಲ್ಲಿ ತೊಡಗಿಸಿಕೊಂಡವರಿಗೆ ಶ್ರದ್ಧೆ ಮುಖ್ಯ. ಯಕ್ಷಗಾನದಲ್ಲಿ ಈಗ ಯುಟ್ಯೂಬ್ ಚಾನಲ್‌ಗಳೇ ಅಧ್ಯಯನಕ್ಕೆ ಮೂಲ ಆಗುತ್ತಿವೆ. ಅನುಕರಣೆಗಿಂತ ಅನುಸರಣೆ ಮುಖ್ಯವಾಗಬೇಕಾಗಿದೆ. ಇಲ್ಲವಾದರೆ ಯಕ್ಷಗಾನದಲ್ಲಿ ನಮ್ಮತನ ಇಲ್ಲದಾಗುವ ಸಾಧ್ಯತೆಗಳಿವೆ. ಯಕ್ಷಗಾನದಲ್ಲಿ ಈಚೆಗೆ ತೋರಿಕೆ ಹೆಚ್ಚಾಗುತ್ತಿದೆ. ಬಡಗು ತಿಟ್ಟಿನಲ್ಲಿ ಮೊದಲ ವೇಷ ಭಾಗವತರದು ಎಂಬ ಮಾತು ಇದೆ. ಆದರೆ ಈಗ ಸಂಗೀತ ಮತ್ತು ಭಾಗವತಿಕೆಯ ನಡುವಿನ ವ್ಯತ್ಯಾಸ ತಿಳಿಯದಷ್ಟು ಅಬ್ಬರ ಹೆಚ್ಚುತ್ತಿದೆ. ಭಾಗವತಿಕೆ ಕೆಲವೊಮ್ಮೆ ಆರ್ಕೆಸ್ಟ್ರಾದ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದ ಅವರು ಹೊಸಯುಗದ ಯಕ್ಷಗಾನದಲ್ಲಿ ಎಡಿಟಿಂಗ್ ಪರಿಕಲ್ಪನೆ ಬೆಳೆಯಬೇಕಾಗಿದೆ” ಎಂದು ಸಲಹೆ ನೀಡಿದರು.
ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜು ಉಪನ್ಯಾಸಕಿ ಡಾ. ದಿವ್ಯಶ್ರೀ ಡೆಂಬಳ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕ ಡಾ. ಶಿವಕುಮಾರ್ ಅಳಗೋಡು, ಶಕ್ತಿನಗರದ ಶಕ್ತಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀ ಸುನಿಲ್ ಕುಮಾರ್ ಪಲ್ಲಮಜಲು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಶ್ರೀದೇವಿ ಕಲ್ಲಡ್ಕ ಪ್ರಬಂಧ ಮಂಡಿಸಿದರು. ಯಕ್ಷಗಾನದ ಮೂಲದ ಕುರಿತ ಚರ್ಚೆಯಲ್ಲಿ ಈ ಕಲೆ ದಲಿತರಿಂದ ಆರಂಭವಾದದ್ದು ಮತ್ತು ದಲಿತರಿಗಾಗಿ ಆರಂಭವಾದದ್ದು ಎಂಬ ಎರಡು ವಾದಗಳು ಚರ್ಚೆಗೆ ಗ್ರಾಸವಾದವು. ದೇವದಾಸಿಯರು ಮತ್ತು ಯಕ್ಷಗಾನ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದ ಸುನಿಲ್ ಪಲ್ಲಮಜಲು. ಯಕ್ಷಗಾನದಲ್ಲಿ ತಳಸಮುದಾಯವರ ಅಸ್ತಿತ್ವದ ಕುರಿತು ಪ್ರಸ್ತಾಪಿಸಿದ್ದರು. ವಿಚಾರಗೋಷ್ಠಿಯ ಸಮನ್ವಯಕಾರರಾಗಿದ್ದ ಸುಜಯೀಂದ್ರ ಹಂದೆ ಅವರು ದಲಿತರಿಂದ ಆರಂಭಗೊಂಡ ಯಕ್ಷಕಲೆ ದೇವಾಲಯದ ಆಶ್ರಯ ಪಡೆದುಕೊಳ್ಳುತ್ತಿದ್ದಂತೆ ಮೇಲ್ವರ್ಗದವರು ಕೂಡ ಅದರಲ್ಲಿ ತೊಡಗಿಸಿಕೊಂಡರು ಎಂದರು. ತದನಂತರ ತಲಕಳದ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಮಹಿಳಾ ಕಲಾವಿದೆಯರು ಪ್ರಸ್ತುತಪಡಿಸಿದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಅವರ ನಿರ್ದೇಶನದ ‘ಅಬ್ಬರ ತಾಳ’ ರೋಮಾಂಚನ ನೀಡಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಮಾಧವ ಎಂ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಡಾ. ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಧನಂಜಯ ಕುಂಬ್ಳೆ, ಯಕ್ಷಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಕಣಿಪುರ ಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್, ವಂಡಾರು ನಾದನೂಪುರ ಯಕ್ಷೋತ್ಥಾನ ಟ್ರಸ್ಟಿನ ಅಧ್ಯಕ್ಷ ಗೋವಿಂದ ವಂಡಾರು ಪಾಲ್ಗೊಂಡಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರಿಗೆ ‘ಯಕ್ಷಸುಮತಿ’ ಗೌರವ ನೀಡಿ ಸನ್ಮಾನಿಸಲಾಯಿತು.
ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ ಮಾತನಾಡಿ, “ಲೀಲಾವತಿ ಬೈಪಾಡಿತ್ತಾಯ ಅವರು ಗಂಡುಕಲೆಯಾದ ಯಕ್ಷಗಾನದಲ್ಲಿ ಮಹಿಳೆಯರೂ ಸಾಧನೆ ಮಾಡಬಹುದು ಎಂದು ಅವರು ಸಾಧಿಸಿದ್ದಾರೆ” ಎಂದರು. ಡಾ. ಧನಂಜಯ ಕುಂಬ್ಳೆಯವರು ಸಮಾರೋಪ ಭಾಷಣದಲ್ಲಿ “ಅಕ್ಷರ, ಭಕ್ತಿಯ ಮೌಲ್ಯಗಳನ್ನು ದಲಿತರವರೆಗೂ ತಲುಪಿಸಲು ಮತ್ತು ಆ ಮೂಲಕ ಅವರನ್ನು ತಮ್ಮ ಸುಪರ್ದಿಗೆ ತರಲು ಮೇಲ್ವರ್ಗದವರು ಬಳಸಿಕೊಂಡ ಕಲೆ ಯಕ್ಷಗಾನ. ಪುರುಷ ಪ್ರಧಾನ ನೆಲೆಯಲ್ಲೇ ರೂಪುಗೊಂಡಿರುವ ಯಕ್ಷಗಾನದಲ್ಲಿ ಮಹಿಳೆಯರ ಅಸ್ಮಿತೆ ಕಾಣಿಸುವಂತೆ ಆಗಬೇಕಿದೆ. ಇದು ಸುಲಭ ಸಾಧ್ಯವವಲ್ಲವಾದರೂ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು” ಎಂದರು.
ನಾದನೂಪುರ ಪತ್ರಿಕೆಯ ಮುದ್ರಿತ ಪ್ರತಿ ಅನಾವರಣಗೊಳಿಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ. ಅಧ್ಯಕ್ಷತೆ ವಹಿಸಿದ್ದರು. ಡಾ. ಪಿ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಎಂ.ನಾ. ಚಂಬಲ್ತಿಮಾರ್, ನಾದ ನೂಪುರ ಯಕ್ಟೋತ್ಥಾನ ಟ್ರಸ್ಟ್ ವಂಡಾರು ಅಧ್ಯಕ್ಷ ಗೋವಿಂದ ವಂಡಾರು, ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಧ್ಯಾ ಆಳ್ವ ಸ್ವಾಗತಿಸಿ, ಶುಭಾಶಯ ಜೈನ್ ನಿರೂಪಿಸಿದರು. ಸಮಾರೋಪ ಸಮಾರಂಭದ ನಂತರ ಶ್ರೀಮತಿ ಪೂರ್ಣಿಮ ಯತೀಶ್ ರೈ ಇವರ ನಿರ್ದೇಶನದಲ್ಲಿ ಶುಭಾಶಯ ಜೈನ ವಿರಚಿತ ‘ತ್ಯಾಗೊದ ತಿರ್ಲ್’ ತುಳು ಯಕ್ಷಗಾನ ಪ್ರದರ್ಶನಗೊಂಡಿತು.