ಮಂಗಳೂರು : ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ಬಾಲ ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಬಿರುವೆರ್ ಕುಡ್ಲದ ವತಿಯಿಂದ ಮಂಗಳೂರಿನ ಗೋಲ್ಡ್ ಫಿಂಚ್ ಹೊಟೇಲಿನಲ್ಲಿ ದಿನಾಂಕ 03-03-2024ರಂದು ಬ್ರಹ್ಮಶಶ್ರೀ ನಾರಾಯಣಗುರು ಅವರ ಭಾವಚಿತ್ರ, ರೇಷ್ಮೆ ಪಂಚೆ ಹಾಗೂ ಶಾಲು ನೀಡುವ ಮೂಲಕ ಸಮ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು “ನಮ್ಮ ರಾಷ್ಟ್ರೀಯ ಅಸ್ಮಿತೆಯಾಗಿರುವ ಶ್ರೀ ರಾಮ ಮಂದಿರ ನಿರ್ಮಾಣದಲ್ಲಿ ದೇವರ ಇಚ್ಛೆಯಂತೆ ನಾನು ನಿರ್ಮಿಸಿದ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಆಗಿರುವುದು ಪುಣ್ಯವೇ ಸರಿ. ಈ ಹಿಂದೆ ಹಲವು ಮೂರ್ತಿ ನಿರ್ಮಿಸಿದ್ದರೂ ಬಾಲರಾಮನ ಪ್ರತಿಷ್ಠಾಪನೆಯ ಬಳಿಕ ದೇಶದ ಹಳ್ಳಿ ಹಳ್ಳಿಗಳಲ್ಲಿ ರಾಮಭಕ್ತರು ನನಗೆ ಆಶೀರ್ವಾದಿಸಿದ್ದಾರೆ. ಮರ್ಯಾದಾಪುರುಷನ ಮಂದಿರ ಮರು ನಿರ್ಮಾಣವಾಗಿದ್ದು, ದೇಶವು ರಾಮ ರಾಜ್ಯವಾಗಿ ರೂಪುಗೊಳ್ಳಲಿ. ‘ಬಿರುವೆರ್ ಕುಡ್ಲ’ ಸಂಘಟನೆಯ ಬಗ್ಗೆ ನನಗೆ ಮಾಹಿತಿ ಸಿಕ್ಕಾಗ ಯುವ ಸಮೂಹವು ಒಟ್ಟುಸೇರಿ ಸಮಾಜದ ಸೇವೆಗೆ ಇಳಿದಿರುವುದು ನಿಜಕ್ಕೂ ಶ್ಲಾಘನೀಯ. ಎಂದರು.
ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಬಾಗ್ ಸಮ್ಮಾನಿಸಿದರು. ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲ್, ಸಂಘಟನೆಯ ಪ್ರಮುಖರಾದ ಜಿತೇಶ್ ಜೈನ್, ರಾಕೇಶ್ ಬಲ್ಲಾಳ್, ಕಿಶೋರ್ ಬಾಬು, ಲೋಹಿತ್, ದರ್ಶನ್ ಜೈನ್, ದಿನಿಲ್, ವಿಘ್ನೇಶ್, ಸಾಗರ್, ಯಶ್ವಿನ್, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.