ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ಇಲ್ಲಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ಸಹಭಾಗಿತ್ವದಲ್ಲಿ ‘ಗಡಿನಾಡ ಸಾಹಿತ್ಯ ದಿಂಡಿಮ-2024’ ಕಾರ್ಯಕ್ರಮವು ದಿನಾಂಕ 14-03-2024ರಂದು ಸಾನಿಧ್ಯ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಲಕ್ಷ್ಮೀ ವಿ. ಭಟ್ ಮಂಜೇಶ್ವರ ರಚಿತ ‘ಅಷ್ಟ ದ್ರವ್ಯ’ ಹಾಗೂ ‘ಝೇಂಕಾರ’ ಕೃತಿಗಳು ಲೋಕಾರ್ಪಣೆಗೊಂಡವು.
ಡಾ. ಧನಂಜಯ ಕುಂಬ್ಳೆ ‘ಅಷ್ಟ ದ್ರವ್ಯ’ ಕೃತಿಯನ್ನು ಲೋಕಾರ್ಪಣೆಗೈದು ಕೃತಿ ಅವಲೋಕನ ಮಾಡುತ್ತಾ, “ಈ ಕೃತಿಯು ಹೊಸ ಬರಹಗಾರರಿಗೆ ಮಾತ್ರವಲ್ಲದೆ ವಿಶ್ವವಿದ್ಯಾಲಯದ ಸಾಹಿತ್ಯಾಭ್ಯಾಸಿಗಳಿಗೆ ಒಂದು ಉತ್ತಮ ಕೈಪಿಡಿಯಾಗಿದೆ. ಈ ಕೃತಿಯೇ ಒಂದು ಪಠ್ಯಪುಸ್ತಕವಿದ್ದಂತೆ” ಎಂದು ನುಡಿದರು. ಗಡಿನಾಡ ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷರಾದ ಡಾಕ್ಟರ್ ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿಯವರು ‘ಝೇಂಕಾರ’ ಕೃತಿಯನ್ನು ಲೋಕಾರ್ಪಣೆ ಮಾಡಿ, “ಸಾಹಿತ್ಯ ಕ್ಷೇತ್ರಕ್ಕೆ ಇದೊಂದು ಅತ್ಯಮೂಲ್ಯ ಕೊಡುಗೆ” ಎಂದು ಬಣ್ಣಿಸಿದರು. ಡಾ. ಮೀನಾಕ್ಷಿ ರಾಮಚಂದ್ರ ಇವರು ‘ಝೇಂಕಾರ’ ಕೃತಿ ಅವಲೋಕನ ಮಾಡಿ, “ತ್ರಿಪದಿಗಳು ಮಹಿಳೆಯರ ಗಾಯತ್ರಿ ಎಂಬುದು ಮತ್ತೊಮ್ಮೆ ಲಕ್ಷ್ಮೀಯ ಮೂಲಕ ಸಾಬೀತಾಯಿತು. ಕನ್ನಡ ನೆಲದ ಜನಮಾನಸದಲ್ಲಿ ಹಾಸು ಹೊಕ್ಕಾಗಿ ಬೆಳೆದಿರುವ ಸಾಹಿತ್ಯ ತ್ರಿಪದಿಗಳು ಈ ಕೃತಿಯಲ್ಲಿ ಹಲವು ವೈವಿಧ್ಯ ವಿಚಾರಗಳ ಅನಾವರಣವನ್ನು ಕಾಣಬಹುದು. ಕಾಸರಗೋಡಿನ ಕನ್ನಡಿಗರಲ್ಲಿ ಕನ್ನಡದ ರಕ್ತ ಸ್ವಲ್ಪ ಬಿರುಸಾಗಿಯೇ ಹರಿಯುತ್ತಿದೆ” ಎಂದು ನುಡಿದರು.
ಬಳಿಕ ಶಿಕ್ಷಣ ತಜ್ಞ ಶ್ರೀ ವಿ.ಬಿ ಕುಳಮರ್ವ ಇವರು ‘ಛಂದೋಬದ್ಧ ಕವಿತೆಗಳು : ಆಧುನಿಕ ಪ್ರಯೋಗ’ ಈ ವಿಷಯದ ಕುರಿತು ಉಪನ್ಯಾಸ ನೀಡಿದರು. ಕೃತಿಯಿಂದ ಆಯ್ದ ಕೆಲವು ಹಾಡುಗಳನ್ನು ಶ್ರೀಮತಿ ಅನುಷಾ ಕೊಲ್ಲರಮಜಲು, ಶ್ರೀಮತಿ ಪ್ರಸನ್ನಾ ಸಿ.ಎಸ್. ಭಟ್ ಕಾಕುಂಜೆ ಹಾಗೂ ದಿವಾಕರ್ ಬಲ್ಲಾಳ ಇವರು ಸುಮಧುರವಾಗಿ ಹಾಡಿದರು. ಸಭಾಧ್ಯಕ್ಷರಾದ ಕಥಾಬಿಂದು ಪ್ರಕಾಶನದ ಶ್ರೀ ಪಿ.ವಿ. ಪ್ರದೀಪ್ ಕುಮಾರ್ ಅವರು ಶುಭಾಶಂಸನೆ ಗೈದರು.
ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಯುತ ರಾಧಾಕೃಷ್ಣ ಉಳಿಯತಡ್ಕ (ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತರು) ಇವರು ವಹಿಸಿದರು. ಕವಿಗೋಷ್ಠಿಯಲ್ಲಿ ಅನೇಕ ಪ್ರಬುದ್ಧ ಕವಿಗಳು ಭಾಗವಹಿಸಿದ್ದರು. ಡಾಕ್ಟರ್ ಸುರೇಶ ನೆಗಳಗುಳಿ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಸತ್ಯವತಿ ಭಟ್ ಕೊಳಚಪ್ಪು, ಗುಣಾಜೆ ರಾಮಚಂದ್ರ ಭಟ್ಟ, ಯೋಗೀಶ್ ರಾವ್ ಚಿಗುರುಪಾದೆ, ಡಾ. ದಿನೇಶ್ ನಾಯಕ್, ಎಡ್ವರ್ಡ್ ಲೋಬೋ, ಪ್ರಮೀಳಾ ಚುಳ್ಳಿಕಾನ, ಪ್ರವೀಣ್ ಅಮ್ಮೆಂಬಳ, ವೆಂಕಟ ಭಟ್ ಎಡನೀರು, ಶ್ರೀ ಗೋಪಾಲಕೃಷ್ಣ ಶಾಸ್ತ್ರಿ, ಸಾವಿತ್ರಿ ರಮೇಶ ಭಟ್ ಮೊದಲಾದವರು ಕವನ ವಾಚನ ಮಾಡಿದರು. ಅನೂಷ ಕೊಲ್ಲರಮಜಲು ಪ್ರಾರ್ಥಿಸಿ, ಲಕ್ಷ್ಮೀ ವಿ. ಭಟ್ ಸ್ವಾಗತಿಸಿ, ಶ್ರೀ ದಿವಾಕರ ಬಲ್ಲಾಳರು ನಿರೂಪಣೆಗೈದರು. ಸಂತ ಅಲೋಶಿಯಸ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಹಾಲಿಂಗ ಭಟ್ ಕೆ. ಎಲ್ಲಾ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.