ಜಾನಪದ ಲೋಕಕ್ಕೆ ಏರ್ಯರು ಕೊಪ್ಪರಿಗೆ ಇದ್ದಂತೆ: ವಿವೇಕ ರೈ
ಮಂಗಳೂರು, ಫೆಬ್ರವರಿ 05 : ದಕ್ಷಿಣ ಕನ್ನಡ ಜಾನಪದ ಲೋಕದ ಪರಂಪರೆಯನ್ನು ಅಧ್ಯಯನ ಮಾಡುವ ಪ್ರತಿಯೊಬ್ಬರಿಗೂ ಏರ್ಯ ಲಕ್ಷ್ಮಿನಾರಾಯಣ ಆಳ್ವರ ಕೆಲಸಗಳು ಮಹತ್ತರವಾಗಿದ್ದು, ಅವರು ದಕ ಜಾನಪದ ಲೋಕಕ್ಕೆ ಕೊಪ್ಪರಿಗೆ ಇದ್ದಂತೆ ಎಂದು ಹಿರಿಯ ವಿದ್ವಾಂಸ ಪ್ರೊ. ಬಿ.ಎ.ವಿವೇಕ ರೈ ಹೇಳಿದರು.
ಅವರು ಭಾನುವಾರ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್‍ಸಿ ಆರ್ ಐ ಸಭಾಂಗಣದಲ್ಲಿ ರಂಗ ಸಂಗಾತಿ ಮಂಗಳೂರು ಆಶ್ರಯದಲ್ಲಿ ಕಪ್ಪಣ್ಣ -75 ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡದ ಜಾನಪದ ಅವಲೋಕನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಏರ್ಯ ಅವರು ಸಾಹಿತ್ಯ, ಸಹಕಾರಿ, ಸಂಘಟನೆ ಜತೆಯಲ್ಲಿ ಜಾನಪದ ವಿಚಾರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದವರು. ವಿಶೇಷವಾಗಿ 6 ತುಳು ಸಂಪುಟಗಳನ್ನು ಹೊರತರುವ ವಿಚಾರದಲ್ಲಿ ಏರ್ಯರ ಕೊಡುಗೆ ಮೆರೆಯಲು ಸಾಧ್ಯವಿಲ್ಲ. ಅವರನ್ನು ತುಳು ಜಾನಪದ ಲೋಕದ ಕೊಪ್ಪರಿಗೆ ಎಂದರೆ ತಪ್ಪಾಗಲಾರದು. ದೈವ ಆರಾಧಕರಿಗೆ, ದೈವದ ಕೆಲಸ ಮಾಡುವವರಿಗೆ ಪ್ರಶಸ್ತಿ ಸೇರಿದಂತೆ ಸ್ಥಾನಮಾನ ನೀಡುವ ವಿಚಾರದಲ್ಲಿ ಏರ್ಯರು ಮೊದಲಿಗರು. ಅವರು ಜಾನಪದ ಅಕಾಡೆಮಿಯ ಮೂಲಕ ಸಾಕಷ್ಟು ದೈವ ಆರಾಧಕರಿಗೆ ನೆರವಾಗಿದ್ದಾರೆ. ಬರೀ ಅಕಾಡೆಮಿ ಮಾತ್ರವಲ್ಲ ತಮ್ಮ ಸ್ವಂತ ಮನೆಯಲ್ಲೇ ಗೌರವಿಸುವ ಪರಿಪಾಟವನ್ನು ಬೆಳೆಸುವ ಕೆಲಸ ಮಾಡಿದರು.
ಕಪ್ಪಣ್ಣ ಅವರು ರಂಗದ ಮೇಲೆ ಬೆಳಕು ಚೆಲ್ಲುವ ಅಪರೂಪದ ವ್ಯಕ್ತಿಯಾಗಿದ್ದಾರೆ. ರಂಗ ಸಜ್ಜಿಕೆ, ಸಂಘಟನೆ, ಜತೆಗೆ ಬೆಂಗಳೂರಿನಲ್ಲಿ ಜಾನಪದ ಜಾತ್ರೆಯ ಮೂಲಕ ಸಾವಿರಾರು ಜಾನಪದ ಕಲಾವಿದರಿಗೆ ರಾಜ್ಯದ ರಾಜಧಾನಿಯಲ್ಲಿ ಅವಕಶ ನೀಡುವ ಮೂಲಕ ಮಾನ್ಯತೆ ಕೊಟ್ಟವರು ಎಂದರು.
ಈ ಸಂದರ್ಭ ಮಂಗಳೂರು ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಸೋಮಣ್ಣ, ಏರ್ಯ ಆಳ್ವ ಫೌಂಡೇಶನ್ ಬೆಂಗಳೂರು ಇದರ ಅಧ್ಯಕ್ಷ ಏರ್ಯ ಬಾಲಕೃಷ್ಣ ಆಳ್ವ, ದೆಹಲಿ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಶ್ರೀನಿವಾಸ್ ಜಿ ಕಪ್ಪಣ್ಣ ಮಾತನಾಡಿದರು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ ಭರತಾಂಜಲಿ ತಂಡದ ಕಲಾವಿದರಿಂದ ಏರ್ಯ ಲಕ್ಷ್ಮಿನಾರಾಯಣ ಆಳ್ವರ ಮತ್ತಿತರ ಕವಿಗಳ ಕವಿತೆಗಳ ನೃತ್ಯ ವೈಭವ ನಡೆಯಿತು. ಡಾ. ನಾ. ದಾಮೋದರ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು. ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.