ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 25-03-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಚೈತ್ರಾ ರಾವ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಪ್ರತಿಭಾನ್ವಿತ ಕಲಾವಿದೆ ಚೈತ್ರಾ ರಾವ್ ಅವರು ಬೆಂಗಳೂರಿನ ಆಚಾರ್ಯ ಶ್ರೀಮತಿ ಇಂದಿರಾ ಕಡಂಬಿ ಅವರ ಶಿಷ್ಯೆ. ಚೈತ್ರಾ ಅವರು ತಮ್ಮ ಎಂಟನೆ ವಯಸ್ಸಿನಲ್ಲಿ ಗುರುಗಳಾದ ಯಶಾ ರಾಮಕೃಷ್ಣರವರಿಂದ ನೃತ್ಯ ಪ್ರಾರಂಭಿಸಿ ಮುಂದೆ ಶ್ರೀಮತಿ ಚೇತನಾ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ನೃತ್ಯದಲ್ಲಿ ತಮ್ಮ ಪ್ರವೃತ್ತಿಯನ್ನು ಮುಂದುವರೆಸಿದರು. ಅವರು ದೇಶಾದ್ಯಂತ ಹಲವಾರು ಭಾಗಗಳಲ್ಲಿ ಅನೇಕ ಏಕವ್ಯಕ್ತಿ ಮತ್ತು ಗುಂಪು ಪ್ರದರ್ಶನಗಳನ್ನು ನೀಡಿದ್ದು, ಶ್ರೀ ಬೆಲ್ರಾಜ್ ಸೋನಿ ಅವರ ಬಳಿ ಕಳರಿಪಯಟ್ಟು ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರಿನ ಆಲಯ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಇಲ್ಲಿ ತಮ್ಮ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ.
ಡಿಡಿ ಚಂದನ, ಬೆಂಗಳೂರಿನ ಬಿ-ಗ್ರೇಡ್ ಕಲಾವಿದೆಯಾಗಿದ್ದು, ‘ಕಲಾ ಕಣ್ಮಣಿ’, ‘ಕಲಾಶ್ರೀ’ ಮತ್ತು ಮಕ್ಕಿ ಮಹಾದೇವ ಅದ್ಯಯನ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಗೆ ನೃತ್ಯ ಪರೀಕ್ಷಕರಾಗಿ ಆಹ್ವಾನಿಸಲಾಗಿದ್ದು, ರಾಜ್ಯದ ವಿವಿಧೆಡೆ ನಡೆದ ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆ ಸೇರಿದಂತೆ ಭರತನಾಟ್ಯ ಸ್ಪರ್ಧೆಗಳಿಗೆ ತೀರ್ಪುಗಾರರಾಗಿದ್ದಾರೆ. ಬಾಲಪ್ರತಿಭಾ ಕಲಾಪ್ರತಿಭೋತ್ಸವ, ಕಿಶೋರಪ್ರತಿಭೆ. ಯುವಪ್ರತಿಭೆ ಮೈಸೂರು, ಪ್ರತಿಭಾಕಾರಂಜಿ, ಕನ್ನಡ ಸಾಂಸ್ಕೃತಿಕ ಇಲಾಖೆ, ಕರ್ನಾಟಕ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಬೆಂಗಳೂರಿನ ಅಂಬಲಂ ಫೌಂಡೇಶನ್ ಅಡಿಯಲ್ಲಿ ಮಾರ್ಗಮ್-2023, ಅನನ್ಯ ನೃತ್ಯೋಲ್ಲಾಸ-81, ನೃತ್ಯಾಲಾಪ್-82, ರಾಜ ರಾಜೇಶ್ವರಿ ಸಾಂಸ್ಕೃತಿಕ ಸಂಘದ ನೃತ್ಯೋತ್ಸವ, ಕಪ್ಪಣ್ಣ ಅಂಗಳ ಮತ್ತು ದಿಕ್ಸೂಚಿ ಸ್ವರ ನೃತ್ಯಾಂಜಲಿ ಉತ್ಸವ, ಕಪಾಲೇಶ್ವರ ಶಿವರಾತ್ರಿ ಪ್ರದರ್ಶನ ಚೆನ್ನೈ, ಆರ್ಟಿಕ್ಯೂಲೇಟ್ ಹಬ್ಬ ಮೈಸೂರು, ಶ್ರೀಮತಿ ಕೃಪಾ ಫಡ್ಕೆ ಮತ್ತು ಶ್ರೀಮತಿ ಭ್ರಮರಾ ಮೈಸೂರಿನ ರಜತ ಮಹೋತ್ಸವ ಆಚರಣೆಗಳು, ಗಂಗೂಬಾಯಿ ಹಾನಗಲ್ ಲಲಿತಕಲೆ ವಿಶ್ವವಿದ್ಯಾಲಯ ಮೈಸೂರು, ಮೈಸೂರು ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಕಛೇರಿ ಸರಣಿ, ಹೆಜ್ಜೆ-ಗೆಜ್ಜೆಯಿಂದ ನೃತ್ಯಾಂಜಲಿ -2019 ಮತ್ತು ಶಿಲ್ಪ ರಾಮಂ ಹೈದರಾಬಾದ್ ಇಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ.