ಕುಡ್ಲ : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ತುಳುಕೂಟ (ರಿ.) ಸಂಸ್ಥೆಯು ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಅಪ್ರಕಟಿತ ತುಳು ನಾಟಕಕ್ಕಾಗಿ ತುಳುಕೂಟ ಸಂಯೋಜಿಸಿದ ಸ್ಪರ್ಧೆಯ ವಿಜೇತರನ್ನು ರತ್ನವರ್ಮ ಹೆಗ್ಗಡೆ 2023-2024ನೇ ಸಾಲಿನ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಅಪ್ರಕಟಿತ ಹೊಸ ನಾಟಕ ಕೃತಿಗೆ ಪ್ರತೀ ವರ್ಷ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳನ್ನು ಡಾ. ಹೆಗ್ಗಡೆಯವರು ತಮ್ಮ ತೀರ್ಥರೂಪರ ಸವಿ ನೆನಪಿನಲ್ಲಿ ಕಳೆದ ನಲುವತ್ತೇಳು ವರ್ಷಗಳಿಂದ ನೀಡುತ್ತಾ ಬರುತ್ತಿದ್ದಾರೆ. ಈ ಕೆಳಗಿನವರು ಪ್ರಶಸ್ತಿ ವಿಜೇತರು:
ಪ್ರಥಮ – ಶಶಿರಾಜ್ ಕಾವೂರು ಇವರ ಕೃತಿ : ‘ಛತ್ರಪತಿ ಶಿವಾಜಿ’
ದ್ವಿತೀಯ – ನವೀನ್ ಸುವರ್ಣ ಪಡ್ರೆಯವರ ಕೃತಿ : ‘ಮಾಯದಪ್ಪೆ ಮಂತ್ರದೇವತೆ’
ತೃತೀಯ – ಎಲ್ಲೂರು ಶ್ರೀ ಆನಂದ ಕುಂದರ್ ಇವರ ಕೃತಿ : ‘ದೈವದ ಬಾಲೆಲು’
ಪ್ರಶಸ್ತಿ ಮೊತ್ತವು ಕ್ರಮವಾಗಿ ರೂ.10,000/-, ರೂ.8,000/- ಮತ್ತು ರೂ.6,000/- ನಗದು ಆಗಿರುತ್ತದೆ. ನಾಟಕ ರಂಗ ನಿರ್ದೇಶಕ – ಕದ್ರಿ ನವನೀತ ಶೆಟ್ಟಿ ಮತ್ತು ಹಿರಿಯ ಕನ್ನಡ ತುಳು ಸಾಹಿತಿ ಶ್ರೀ ಮುದ್ದು ಮೂಡುಬೆಳ್ಳೆ ಇವರನ್ನೊಳಗೊಂಡ ಸಮಿತಿ ಕೃತಿಗಳ ಮೌಲ್ಯಾಂಕನ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತದೆ. ದಿನಾಂಕ 14-04-2024ರ ರವಿವಾರದಂದು ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ತುಳುಕೂಟವು ಆಚರಿಸುವ ಬಿಸು ಪರ್ಬ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪದಾನ ಮಾಡಲಾಗುವುದು ಎಂದು ತುಳುಕೂಟದ ಅಧ್ಯಕ್ಷ ಮರೋಳಿ ಬಿ. ದಾಮೋದರ ನಿಸರ್ಗ ಹಾಗೂ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಜಂಟಿಯಾಗಿ ತಿಳಿಸಿದ್ದಾರೆ.
ಶಶಿರಾಜ್ ಕಾವೂರು :
ಇವರು ವೃತ್ತಿಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯವಾದಿ. ಪ್ರವೃತ್ತಿಯಲ್ಲಿ ನಟ, ನಿರ್ದೇಶಕ, ಸಾಹಿತಿ. ಇವರು ಬರೆದ ‘ಏಕಾದಶಾನನ’ ನಾಟಕ ಜೀವನರಾಮ್ ಸುಳ್ಯ ನಿರ್ದೇಶನದಲ್ಲಿ ಪ್ರದರ್ಶನಗೊಂಡು ಎರಡು ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿ ದೊರೆತಿದೆ. ‘ಬರ್ಬರೀಕ’ ತುಳು ನಾಟಕಕ್ಕೆ ಎರಡು ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿಯೊಂದಿಗೆ ಗದಗದ ಫ.ಶಿ.ಭಾಂಡಗೆ ಪ್ರಶಸ್ತಿ, ಧಾರವಾಡದ ದ.ರಾ.ಬೇಂದ್ರೆ ಪ್ರಶಸ್ತಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ದೊರೆತಿದೆ.
‘ವೈದ್ಯೋ ನಾರಾಯಣೋ ಹರಿ’ – ರಾಷ್ತ್ರೀಯ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೃತಿ. ಸರದಾರನ ಸ್ವಗತ, ನೆಮ್ಮದಿ ಅಪಾರ್ಟ್‌ಮೆಂಟ್, ಐಸಿಯೂ, ಸಂಪಿಗೆ ನಗರ ಪೋಲಿಸ್ ಸ್ಟೇಶನ್, ವ್ಯೂಹ, ದಾಟ್ಸ್ ಆಲ್ ಯುವರ್ ಆನರ್ ಮತ್ತು ಪರಶುರಾಮ ಇವುಗಳು ಕನ್ನಡ ನಾಟಕಗಳು, ಪಿಲಿತ ಪಂಜ- ತುಳು ನಾಟಕ ಮತ್ತು ಮಿನುಗೆಲೆ ಮಿನುಗೆಲೆ ನಕ್ಷತ್ರ ಎಂಬುದು ಮಕ್ಕಳ ನಾಟಕ, ‘ದಡ್ಡಲಕಾಡಿನ ಮೌನ’ ಎಂಬುದು ಇವರ ಕನ್ನಡ ಕಾದಂಬರಿ ಮತ್ತು ‘ಪುದ್ದು ಕೊಡ್ತರ್’ ತುಳು ಕಾದಂಬರಿ, ‘ಪೊಸ ಒಸರ್’ – ತುಳು ಕವನ ಸಂಕಲನಕ್ಕೆ 2007ರ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಪರ್ಂದ್ ಪೆಲಕಾಯಿ- ತುಳು ಕವನ ಸಂಕಲನ, ಮಾಲೆ ಪಟಾಕಿ- ಗಾದೆಗಳ ಪುಸ್ತಕ. ತುಳು, ಕನ್ನಡ ಸಿನೆಮಾಗಳಿಗೆ ಹಾಡು, ಸಂಭಾಷಣೆ, ಚಿತ್ರಕತೆ ಬರೆದಿರುವ ಇವರ ಕಾಂತಾರದ ‘ವರಾಹರೂಪಂ’ ಹಾಡು ಸೇರಿದಂತೆ ಮೂರು ಹಾಡುಗಳು ಪ್ರಸಿದ್ಧಿಗೊಂಡಿವೆ.
ನವೀನ್ ಸುವರ್ಣ ಪಡ್ರೆ :
ಇವರು ದಿ. ಸೂರ್ಯ ಪಡ್ರೆ ಮತ್ತು ವನಜ ಕುಂಜಾರುಗಿರಿ ದಂಪತಿಗಳ ಸುಪುತ್ರ. ಇವರು ‘ಮಾಯದ ಮಹಾಶಕ್ತಿಲು’, ‘ಚಿತ್ರಾಪುರತ ಸಿರಿ ದುರ್ಗೆ’, ‘ದೈವರಾಜೆ ಕೋಡ್ದಬ್ಬು’, ‘ಸತ್ಯದ ಕಂಬೆರ್ಲು’, ‘ಮಾಯದಪ್ಪೆ ಮಂತ್ರದೇವತೆ’ ಎಂಬ ತುಳು ಪೌರಾಣಿಕ ಹಾಗೂ ಜಾನಪದ ನಾಟಕಗಳನ್ನು ರಚಿಸಿರುತ್ತಾರೆ. ‘ಚಿತ್ರಾಪುರತ ಸಿರಿ ದುರ್ಗೆ’ ಮತ್ತು ‘ಸತ್ಯದ ಕಂಬೆರ್ಲು’ ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ. ಇವರು ರಚಿಸಿದ ಯಕ್ಷಗಾನ ಪ್ರಸಂಗ ‘ಕಾರ್ನಿಕದ ಕಂಬೆರ್ಲು’ ಶ್ರೀ ಬೆಂಕಿನಾಥೇಶ್ವರ ಮೇಳದಲ್ಲಿ ಪ್ರದರ್ಶನಗೊಂಡಿದೆ.
ಭಗವಾನ್ ಶ್ರೀ ಬಬ್ಬುಸ್ವಾಮಿಯ ಕಾರಣಿಕದ ಪವಿತ್ರ ಕ್ಷೇತ್ರಗಳು- ಕುರುಹುಗಳು, ಕಾರಣಿಕದ ದೈವಗಳು ಶ್ರೀ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ, ಪಂಚವರ್ಣದ ಮಣ್ಣಿನ ಕಾರಣಿಕದ ದೈವಗಳು, ದೈವರಾಜ ಶ್ರೀ ಬಬ್ಬುಸ್ವಾಮಿ (ಪಾಡ್ದನ ಆಧಾರಿತ), ದೈವರಾಜ ಶ್ರೀ ಬಬ್ಬುಸ್ವಾಮಿಯ ಐತಿಹಾಸಿಕ ಸ್ಥಳಗಳು (ಕ್ಷೇತ್ರಾಧ್ಯಯನ ಗ್ರಂಥ), ಕಾರಣಿಕದ ದೈವ ಕೊರಗ ತನಿಯ ಇವು ಕನ್ನಡದಲ್ಲಿ ಬರೆದ ಪ್ರಕಟಿತ ಕೃತಿಗಳು, ಕಾರ್ನಿಕದ ಸತ್ಯೊಲು, ಪೂ-ಅರಿ (ಮದು-ಮದಿಪು-ನುಡಿಕಟ್ಟ್) 8ನೇಯ ಮುದ್ರಣಗೊಂಡ ಬಹು ಬೇಡಿಕೆಯ ಕೃತಿ, ಪತಿಮಾನಿ-ಕಟಿಮಾನಿ ಮತ್ತು ಮಾಣಿಕ್ಯದ ಪರೆಲ್ ಮನ್ಸಪಾತ್ರಿ ಬಳ್ಕುಂಜೆ (ವ್ಯಕ್ತಿ ಪರಿಚಯ ಕೃತಿ) ಇವು ತುಳು ಭಾಷೆಯಲ್ಲಿ ಬರೆದ ಪ್ರಕಟಿತ ಕೃತಿಗಳು. ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ, ಸಮಾಜ ರತ್ನ ರಾಜ್ಯ ಪ್ರಶಸ್ತಿ, ಸೌರಭ ರತ್ನ ರಾಜ್ಯ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ‘ಬರವುದ ತುಡರ್’ ಮತ್ತು ‘ತುಳುವ ತುಡರ್’ ಎಂಬ ಬಿರುದು ಇವರ ಸಾಧನೆಗೆ ಸಂದ ಗೌರವ.
ಎಲ್ಲೂರು ಆನಂದ ಕುಂದರ್ :
ಇವರು ಸಾಹಿತಿ, ಕಥೆಗಾರ, ನಾಟಕಗಾರ, ನಟ, ನಿರ್ದೇಶಕ, ಪ್ರಸಾದನ ಕಲಾವಿದ. ಇವರ ಕಾವ್ಯನಾಮ : whyಏಕೆ (YAK =Yelluru Ananda Kunder). 150ಕ್ಕೂ ಅಧಿಕ ಕನ್ನಡ ಹಾಗೂ ತುಳು ಕಥೆಗಳು, 3 ಕನ್ನಡ ಕವನ ಸಂಕಲನ, 3 ಕನ್ನಡ ಕಾದಂಬರಿ, 14 ತುಳು ಸಾಮಾಜಿಕ ನಾಟಕಗಳು ಮತ್ತು 2 ತುಳು ಜನಪದ ನಾಟಕಗಳ ರಚನೆ ಮಾಡಿರುತ್ತಾರೆ. ಕಾಲಕಲ್ಜಿಗ, ಕಣ್ಣನೀರೆ ಕತೆ ಪನ್ಪುಂಡು, ಏರೆಗ್ ಏರ್, ವಿಧಿ ಬರೆತಿನ ನಾಟಕ, ಕಾಲ ಬದಲಾತ್ಂಡ್, ಒಯಿಕ್ಲಾ ಅಮಸರ ಮಲ್ಪಡೆ, ಪೂರಲ ಪೊಕ್ಕಡೆ, ತೂಪಿನಾರ್ ತೂನಗ, ಸಂತು ಸುಧಾರುಜೆ, ಬಬ್ಬುಸ್ವಾಮಿ ಲೀಲಾಮೃತ ಇವು ಜನಮನ್ನಣೆ ಪಡೆದ ನಾಟಕಗಳು. ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇವರ ಬರವಣಿಗೆ ಪ್ರಕಟಗೊಂಡಿವೆ.
ಎರಡು ವರ್ಷದಿಂದ ‘ರಂಗ ಸಂಸಾರ’ ಎನ್ನುವ ತಂಡ ಕಟ್ಟಿಕೊಂಡು ಕಲೆ, ಸಾಹಿತ್ಯ, ಸಂಸ್ಕೃತಿಯ ವಿಭಿನ್ನ ಕಾರ್ಯಕ್ರಮಗಳ ಜೊತೆಗೆ ನಾಟಕ ಪ್ರದರ್ಶನಗಳನ್ನೂ ನೀಡುತ್ತಿದ್ದು, ಹಲವಾರು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಾಟಕ ತರಬೇತಿ ನೀಡಿ ಯಶಸ್ವಿಯಾಗಿ ಪ್ರದರ್ಶನ ಮಾಡಿಸಿದ ಹೆಗ್ಗಳಿಕೆ. ವಿಶಿಷ್ಟವಾಗಿ ಸಂಯೋಜಿಸಿದ ರಾಮಾಯಣ ಕೃತಿಯನ್ನು ಕೇವಲ 20 ನಿಮಿಷದಲ್ಲಿ ಹಲವಾರು ಕಡೆಗಳಲ್ಲಿ ಶಾಲಾ ಮಕ್ಕಳಿಂದ ಪ್ರದರ್ಶನ ಮಾಡಿಸಿರುವುದು ಇವರ ಸಾಧನೆ. ‘ಅಕ್ಷರ ಆರ್ಟ್ಸ್’ ಎನ್ನುವ ಸಂಸ್ಥೆಗೆಯ ಮೂಲಕ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಿಗೆ ರಂಗವಿನ್ಯಾಸ ಹಾಗೂ ರಂಗಸಜ್ಜಿಕೆಯ ಸೇವೆ ಒದಗಿಸುವುದರೊಂದಿಗೆ ಪ್ರಸಾದನ ಕಲಾವಿದನಾಗಿಯೂ, ನಟನಾಗಿಯೂ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. 25ಕ್ಕೂ ಅಧಿಕ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳನ್ನು ನಿರ್ದೇಶಿಸಿ ಯಶಸ್ವಿಯಾಗಿ ಪ್ರದರ್ಶನ ಮಾಡಿಸಿದ ಖ್ಯಾತಿ ಇವರದು.