ಮಂಗಳೂರು : ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿ ನಡೆದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರಾವಳಿ ಲೇಖಕಿಯರ, ವಾಚಕಿಯರ ಸಂಘ ಮತ್ತು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಲ್ಮಠ, ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆದಿರುವ ಡಾ. ಸುನೀತಾ ಶೆಟ್ಟಿ ಪ್ರಾಯೋಜಿತ ‘ತೌಳವಸಿರಿ’ ಪ್ರಶಸ್ತಿ, ನಾಡೋಜ ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ ಮತ್ತು ಚಂದ್ರಭಾಗಿ ರೈ ದತ್ತಿನಿಧಿ ಬಹುಮಾನ ಇವುಗಳ ಪ್ರದಾನ ಸಮಾರಂಭವು ದಿನಾಂಕ 20-03-2024ರಂದು ನಡೆಯಿತು.
ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಲ್ಮಠ, ಮಂಗಳೂರು ಇಲ್ಲಿನ ಪ್ರಾಚಾರ್ಯರಾಗಿರುವ ಡಾ. ಜಗದೀಶ್ ಬಾಳ ಇವರು ಮಾತನಾಡಿ “ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಅಧ್ಯಯನದೊಂದಿಗೆ ಸಾಹಿತ್ಯ ಕೃತಿಗಳನ್ನು ಓದುವುದರ ಮೂಲಕ ಬರವಣಿಗೆಯ ಕಡೆಗೂ ಆಸಕ್ತಿಯನ್ನು ತೋರಿಸಬೇಕು, ಸಾಹಿತ್ಯದಷ್ಟು ಮನಸ್ಸಿಗೆ ಹಿತ ಕೊಡುವಂತಹದ್ದು ಬೇರೆ ಯಾವುದೂ ಇಲ್ಲ. ಇಂತಹ ಸಾಹಿತ್ಯದ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಕರಾವಳಿ ಲೇಖಕಿಯರ ವಾಚಕಿಯರ ಸಂಘವು ಇಂತಹ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಆಯೋಜಿಸುತ್ತಿರುವುದು ಪ್ರಶಂಸನೀಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ತೌಳವಸಿರಿ’ ಪ್ರಶಸ್ತಿಯನ್ನು ಜೀವಮಾನದ ಸಾಹಿತ್ಯ ಸಾಧನೆಗಾಗಿ ಲೇಖಕಿ ಎಚ್. ಶಕುಂತಲಾ ಭಟ್ ಅವರಿಗೆ, ನಾಡೋಜ ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿಯನ್ನು ಲೇಖಕಿ ಜಯಶ್ರೀ ದೇಶಪಾಂಡೆ ಅವರಿಗೆ ಮತ್ತು ಚಂದ್ರಭಾಗಿ ರೈ ದತ್ತಿನಿಧಿ ಬಹುಮಾನವನ್ನು ಲೇಖಕಿ ಸ್ಮಿತಾ ಅಮೃತರಾಜ್ ಅವರಿಗೆ ಹಿರಿಯ ಲೇಖಕಿ ಉಷಾ ಪಿ. ರೈ ಮತ್ತು ನಿವೃತ್ತ ಶಿಕ್ಷಕಿ ಕೆ.ಎ. ರೋಹಿಣಿಯವರು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬದ್ರಿಯಾ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾಗಿರುವ ಡಾ. ಇಸ್ಮಾಯಿಲ್ ಎನ್. ಮತ್ತು ತುಳು, ಕನ್ನಡ ಲೇಖಕರಾದ ಬೆನೆಟ್ ಜಿ. ಅಮ್ಮನ್ನ ಸಂದರ್ಭೋಚಿತವಾಗಿ ಮಾತಾಡಿದರು.
ಜ್ಯೋತಿ ಗುರುಪ್ರಸಾದ್, ಡಾ. ಸಕೀನಾ ನಾಸಿರ್, ವಿಜಯಲಕ್ಷ್ಮಿ ಶೆಟ್ಟಿ, ಶ್ರೀಮತಿ ಶಶಿಲೇಖಾ ಮೇಡಂ ಹಾಗೂ ಶ್ರೀ ಆ್ಯಂಬ್ರೋಸ್ ಎಂ.ಸಿ. ಇವರು ಉಪಸ್ಥಿತರಿದ್ದರು. ಮಂಜುಳಾ ಸುಕುಮಾರ್, ಯಶೋದಾ ಮೋಹನ್, ಶರ್ಮಿಳಾ ಶೆಟ್ಟಿ ಇವರು ಪ್ರಶಸ್ತಿ ಪತ್ರಗಳನ್ನು ವಾಚಿಸಿದರು. ಡಾ. ಸುಧಾರಾಣಿ ಪ್ರಶಸ್ತಿ ವಿಜೇತ ಸಾಧಕಿಯರ ಪರಿಚಯವನ್ನು ಮಾಡಿಕೊಟ್ಟರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಯಾರು ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾವಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ವಿಜಯಲಕ್ಷ್ಮಿ ಭಟ್ ಅವರು ವಂದಿಸಿ, ಉಷಾ ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.
ಎಚ್. ಶಕುಂತಲಾ ಭಟ್ :
ಯು. ರಾಮಚಂದ್ರರಾವ್ ಮತ್ತು ಯು. ಸುಲೋಚನ ಬಾಯಿ ಇವರ ಸುಪುತ್ರಿಯಾದ ಶಕುಂತಳಾ ಭಟ್ ಎಚ್. ಇವರು ಎಂ.ಎ. (ಕನ್ನಡ) ಪದವೀಧರರು. ಹಣತೆ, ಮೊಗ್ಗು ಬಿರಿದಾಗ, ಮುತ್ತಿನಸರ, ಪಂಚಾಗ್ನಿ, ಕಾಡ ಬೆಳದಿಂಗಳು, ಒಂದು ಕೊಲೆಯ ಸುತ್ತ, ಅದೇ ಹೆಜ್ಜೆ ಅದೇ ದಾರಿ ಹೀಗೆ 15ಕ್ಕೂ ಅಧಿಕ ಕಾದಂಬರಿಗಳನ್ನು ರಚಿಸಿದ್ದಾರೆ.
ಸೋತು ಗೆದ್ದವಳು (ನಾಟಕ), ಕಾಲಚಕ್ರ, ಅಧಿಕಾರ ದಂಡ ಮತ್ತು ಶೃಂಗದ ಬೆನ್ನೇರಿ, ಜೀವನ್ಮುಖಿ, ಕಪಟ ಸಂನ್ಯಾಸಿ, ಮಹಾಯಾನ, ರೇಣುಕಾ (ಕಥಾ ಸಂಕಲನಗಳು), ಅರಗಿಳಿ, ಅಂತರಾಳ, ಒಲವಿನೊಸಗೆ, ಹನಿಹನಿ ಮುತ್ತು (ಕವನ ಸಂಕಲನಗಳು), ‘ತೀರ್ಪು’ ಮತ್ತು ‘ಬೇಸ್ತು’ ಹಾಸ್ಯ ಸಂಕಲನಗಳು, `ತುಳು ಜನಪದ ಸಂಸ್ಕೃತಿಯಲ್ಲಿ ಶಿಶು, ಮಕ್ಕಳ ನಾಟಕಗಳು’ ಇವರ ಅಧ್ಯಯನ ಗ್ರಂಥವಾಗಿದೆ. ಭಕ್ತ ಧ್ರುವ, ಯಮನ ಸೋಲು, ಅಬ್ಬಕ ರಾಣಿ, ಭಕ್ತ ಸುಧಾಮ, ಪುನರ್ಜನ್ಮ ಕೃತಿಗಳು. ನೋಡು ಬಾ ಮೈಸೂರು, ಬಹರೈನಲ್ಲೊಂದು ಸುತ್ತು (ಪ್ರವಾಸ ಕಥನ), ನಾಗಾಭರಣ (ಸಂಪಾದಿತ ಕೃತಿ), ಅಖಿಲ ಭಾರತ ಅಂಬರೀಶ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯಯುವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿಗಳೊಂದಿಗೆ ದೊರೆತ ಸನ್ಮಾನ ಪುರಸ್ಕಾರಗಳೆಲ್ಲವೂ ಇವರ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಾಹಿತ್ಯ ಸಂಪತ್ತಿಗೆ ದೊರೆತ ಗೌರವಗಳು.
ಜಯಶ್ರೀ ದೇಶಪಾಂಡೆ ಲೇಖಕಿ :
ಶ್ರೀಮತಿ ಜಯಶ್ರೀ ದೇಶಪಾಂಡೆಯವರು ಸಾಹಿತ್ಯ ಲೋಕಕ್ಕೆ ಅಪರಿಚಿತರಲ್ಲ. ತೊಂಬತ್ತರ ದಶಕದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡ ಇವರು ಕಥೆ, ಕಾದಂಬರಿ, ಕವಿತೆ, ಲಲಿತ ಪ್ರಬಂಧ, ಪ್ರಬಂಧ, ಚಿಂತನ, ಪ್ರವಾಸ ಲೇಖನ, ಅನುವಾದ-ಹೀಗೆ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದವರು. ಕಥಾಸಂಕಲನ, ಲಲಿತ ಪ್ರಬಂಧ ಸಂಕಲನ, ಕಾದಂಬರಿ, ಕವನ ಸಂಕಲನ, ಪ್ರವಾಸ ಕಥನ, ವಿಮರ್ಶೆ, ಇವೆಲ್ಲ ಸೇರಿದಂತೆ ಒಟ್ಟು ಹದಿನೆಂಟು ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.
ಇವರು ಬರೆದ ಏಳು ಕಾದಂಬರಿಗಳಲ್ಲಿ ‘ಕೆಂಪು ಹಳದಿ ಹಸಿರು’, ‘ದೂರ ದಾರಿಯ ತೀರ’, ‘ಕಾಲಿಂದಿ’, ‘ಚಕ್ರವಾತ’, ‘ಸರಸ್ವತಿ ಕಾಯದ ದಿನವಿಲ್ಲ’, ‘ಬೇವು’ ಇವುಗಳು ಕನ್ನಡದ ಹಲವು ಪ್ರಮುಖ ನಿಯತಕಾಲಿಕೆಗಳಲ್ಲಿ ಧಾರಾವಾಹಿಯಾಗಿ ಮೂಡಿಬಂದಿವೆ.
ಆರು ಕಥಾಸಂಕಲನ, ಒಂದು ವಿಮರ್ಶಾ ಬರಹಗಳ ಕೃತಿ, ಮೂರು ಲಲಿತ ಪ್ರಬಂಧ ಸಂಕಲನ, ಒಂದು ಕವಿತಾ ಸಂಕಲನ, ಒಂದು ಪ್ರವಾಸ ಕಥನಗಳು ಇವರ ಬರವಣಿಗೆಯ ಕೊಡುಗೆಗಳು. ಇಂಗ್ಲಿಷ್ ಮತ್ತು ಮನ:ಶಾಸ್ತ್ರದ ಓದಿನಲ್ಲಿ ಪದವಿ ಪಡೆದಿರುವ ಇವರ ಕಥೆಗಳು ಅಪಾರ ಓದುಗರ ಮೆಚ್ಚುಗೆ ಪಡೆದಿದ್ದು,
‘ಪ್ರಥಮ್ ಬುಕ್ಸ್ ಸಂಸ್ಥೆಯ ಬಹುಭಾಷಾ ಮಕ್ಕಳ ಸಾಹಿತ್ಯ ಯೋಜನೆಯಡಿ ಪ್ರಕಟವಾದ ಬಹುಭಾಷಾ ಮಕ್ಕಳ ಕಥಾಸರಣಿಯಲ್ಲಿ ಕೆಲವು ಸ್ವಂತ ಕಥೆಗಳನ್ನು ಬರೆದಿರುವುದರೊಂದಿಗೆ ಮರಾಠೀ ಮತ್ತು ಇಂಗ್ಲಿಷ್ ಭಾಷೆಗಳಿಂದ ನಲವತ್ತು ಮಕ್ಕಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದ್ದಾರೆ. ಇವರ ‘ಹೌದದ್ದು ಅಲ್ಲ, ಅಲ್ಲದ್ದು ಹೌದು’ ಲಲಿತ ಪ್ರಬಂಧಗಳ ಸಂಕಲನ 66ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರಕಟಣಾ ಕಾರ್ಯಕ್ರಮದ ಅಂಗವಾಗಿ ಪ್ರಸ್ತುತಗೊಂಡಿದ್ದಲ್ಲದೆ ಅತ್ತಿಮಬ್ಬೆ ಪ್ರಶಸ್ತಿ ಸಹ ಪಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಕಾವ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಸುಧಾ ಮೂರ್ತಿ- ತ್ರಿವೇಣಿ’ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಶ್ರೇಷ್ಠ ಪುಸ್ತಕ ಪ್ರಶಸ್ತಿ, ಅತ್ತಿಮಬ್ಬೆ -ಮಯೂರ ಕಲಾರಂಗದ ರಾಜ್ಯಮಟ್ಟದ ಕಾದಂಬರಿ ವಿಮರ್ಶಾ ಪ್ರಶಸ್ತಿ, ಡಾ. ಪಂಡಿತ್ ಪುಟ್ಟರಾಜ ಸಾಹಿತ್ಯ ಸಮಿತಿಯ ‘ಶ್ರೇಷ್ಠ ಪುಸ್ತಕ ರತ್ನ’ ಪುರಸ್ಕಾರ, ಕರ್ನಾಟಕ ಲೇಖಕಿಯರ ಸಂಘದ ಪ್ರವಾಸ ಲೇಖನ ಕೃತಿ ಪ್ರಶಸ್ತಿ, ನಿರುಪಮಾ ಕಥಾ ಪ್ರಶಸ್ತಿ ಇಂಥ ಗೌರವಗಳಿಗೆ ಭಾಜರಾಗಿದ್ದಾರೆ.
‘ಪದ್ಮಿನಿ’, ‘ಮೂರನೆಯ ಹೆಜ್ಜೆ’, ‘ರೇಖೆಗಳ ನಡುವೆ’, ‘ಸ್ಥವಿರ ಜಂಗಮಗಳಾಚೆ’, ‘ಉತ್ತರಾರ್ಧ’, ‘ಬಿಂಬ’ ಎಂಬ ಕಥಾ ಸಂಕಲನಗಳಲ್ಲಿ ಹಲವು ಕಥೆಗಳು ತೆಲುಗು, ಮರಾಠಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ‘ಹೌದದ್ದು ಅಲ್ಲದ್ದು ಹೌದು’ ಮತ್ತು ‘ನೋಟ್ ಬುಕ್ ನ ಕಡೆಯ ಪುಟ’ ಇವು ಲಲಿತ ಪ್ರಬಂಧಗಳು, ‘ಯತ್ಕಿಂಚಿತ್’ ಇದು ಕವಿತಾ ಸಂಕಲನ ಮತ್ತು ‘ಭಿನ್ನಕೋನ’ ವಿಮರ್ಶಾ ಬರಹಗಳ ಸಂಕಲನ.
ಶ್ರೀಮತಿ ಸ್ಮಿತಾ ಅಮೃತರಾಜ್ :
ಕನ್ನಡ ಎಂ.ಎ. ಪದವೀಧರೆಯಾದ ಸ್ಮಿತಾ ಅಮೃತರಾಜ್ ಇವರ ಲಲಿತ ಪ್ರಬಂಧ, ಕವನ ಸಂಕಲನ, ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಏಳು ಪುಸ್ತಕಗಳು ಪ್ರಕಟಗೊಂಡಿವೆ. ‘ಕಾಲ ಕಾಯುವುದಿಲ್ಲ’, ‘ತುಟಿಯಂಚಿನಲ್ಲಿ ಉಲಿದ ಕವಿತೆಗಳು’ ಮತ್ತು ‘ಮಾತು ಮೀಟಿ ಹೋಗುವ ಹೊತ್ತು’ ಇವು ಕವನ ಸಂಕಲನಗಳು, ‘ಅಂಗಳದಂಚಿನ ಕನವರಿಕೆಗಳು’, ‘ಒಂದು ವಿಳಾಸದ ಹಿಂದೆ’ ಮತ್ತು ‘ನೆಲದಾಯ ಪರಿಮಳ’ ಇವು ಲಲಿತ ಪ್ರಬಂಧಗಳು, ‘ಹೊತ್ತಗೆ ಹೊತ್ತು’ ಇದು ಪುಸ್ತಕ ಪರಿಚಯ.
ರಾಜ್ಯ, ಹೊರ ರಾಜ್ಯಗಳಲ್ಲಿ ನಡೆದ ಅನೇಕ ಪ್ರತಿಷ್ಟಿತ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಹೆಗ್ಗಳಿಕೆ ಇವರದು. ಇವರ ಕೆಲವು ಕವಿತೆ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ. ಇವರ ಕವಿತೆಗಳು ಇಂಗ್ಲೀಷ್, ತೆಲುಗು ಮತ್ತು ಮಲಯಾಳಂಗೆ ಅನುವಾದಗೊಂಡಿದ್ದು, ಒಂದು ಪ್ರಬಂಧ ಮತ್ತು ಕವಿತೆ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಯ ಮಕ್ಕಳಿಗೆ ಪಠ್ಯವಾಗಿದೆ.
ಮುಂಬೈಯ ಸುಶೀಲಾ ಸೀತಾರಾಮ ಶೆಟ್ಟಿ ಪ್ರಶಸ್ತಿ, ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ, ಕೊಡಗಿನ ಗೌರಮ್ಮ ಪ್ರಶಸ್ತಿ, ಬಿ.ಎಂ.ಕಾವ್ಯ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ, ಅಡ್ವೈಸರ್ ಕಾವ್ಯ ಪ್ರಶಸ್ತಿ, ಕಾವ್ಯ ಮಾಣಿಕ್ಯ, ಗುರುಕುಲ ಶರಭ ಪ್ರಶಸ್ತಿ ಸೇರಿದಂತೆ, ಬುದ್ದ ಬಸವ ಗಾಂಧಿ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರ್ನಳ್ಳಿ ದತ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಾಹಿತ್ಯ ಕೃತಿಗಳಿಗೆ ಸಂದಿವೆ. ಈ ಪ್ರಶಸ್ತಿ ಗೌರವಗಳು ಶ್ರೀಮತಿ ಸ್ಮಿತಾ ಅಮೃತರಾಜ್ ಇವರ ಸಾಹಿತ್ಯ ಕೃಷಿಗೆ ಸಾಕ್ಷಿಯಾಗಿವೆ.