ಮಂಗಳೂರು, ಫೆಬ್ರವರಿ 05: ವಿದ್ದು ಉಚ್ಚಿಲ್ ನಿರ್ದೇಶನದ, ರುದ್ರ ಥೇಟರ್ ಮಂಗಳೂರು ಅರ್ಪಿಸುವ ಕನ್ನಡ ನಾಟಕ ‘ಶೂದ್ರ ಶಿವ’ ಇಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಚೊಚ್ಚಲ ಪ್ರದರ್ಶನ ಕಂಡಿತು. ಕೇಂದ್ರ ಸರಕಾರದ ಮಾಜಿ ಸಚಿವ ಶ್ರೀ ಜನಾರ್ದನ ಪೂಜಾರಿ ಇವರು ನಗಾರಿ ಬಾರಿಸುವ ಮೂಲಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ಡಾ. ಮೋಹನ್ ಬಿ. ಇವರ ಕೃತಿ ‘ಬಸವಣ್ಣ ಮತ್ತು ನಾರಾಯಣ ಗುರು ಸಾಮಾಜಿಕ ದರ್ಶನ – ಒಂದು ತೌಲನಿಕ ಅಧ್ಯಯನ’ವನ್ನು ಲೋಕಾರ್ಪಣೆಗೈಯ್ಯಲಾಯಿತು.
ಖ್ಯಾತ ವಕೀಲರು ಮತ್ತು ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿಗಳು ಹಾಗೂ ಗುರು ಬೆಳದಿಂಗಳು ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಪದ್ಮರಾಜ್, ಹೆಸರಾಂತ ನಾಟಕ ನಿರ್ದೇಶಕ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್, ನಾರಾಯಣ ಗುರು ಅಧ್ಯಯನ ಪೀಠದ ನಿಕಟಪೂರ್ವ ನಿರ್ದೇಶಕರೂ ಹಿರಿಯ ಲೇಖಕರೂ ಆದ ಶ್ರೀ ಮುದ್ದು ಮೂಡುಬೆಳ್ಳೆ, ಶ್ರೀಮತಿ ಊರ್ಮಿಳಾ ರಮೇಶ್, ರಾಮಕೃಷ್ಣ ಮಠದ ಶ್ರೀ ರಂಜನ್ ಬೆಲ್ಲರ್ಪಾಡಿ, ಡಾ. ಮೋಹನ್ ಬಿ. ಹಾಗೂ ನಾಟಕದ ನಿರ್ದೇಶಕರಾದ ಶ್ರೀ ವಿದ್ದು ಉಚ್ಚಿಲ್ ಉಪಸ್ಥಿತರಿದ್ದರು. ನಾರಾಯಣ ಗುರುಗಳ ತತ್ವ ಮತ್ತು ಆದರ್ಶಗಳನ್ನೊಳಗೊಂಡ ಈ ನಾಟಕಕ್ಕೆ ಕಿಕ್ಕಿರಿದ ಸಭಾಂಗಣ ಸಾಕ್ಷಿಯಾಯಿತು.
ಅಸ್ಪೃಶ್ಯತೆಯ ವಿರುದ್ಧ ನಾರಾಯಣ ಗುರುಗಳ ಹೋರಾಟ, ವಿದ್ಯೆಯ ಮಹತ್ವದ ಬಗ್ಗೆ ಅವರಿಗಿದ್ದ ಕಾಳಜಿ, ಸಮಾಜದಲ್ಲಿ ಸಮತೋಲನ ಇರಬೇಕೆಂಬ ಅವರ ಕಳಕಳಿಯನ್ನು ಬಿಚ್ಚಿಟ್ಟ ‘ಶೂದ್ರ ಶಿವ’ ಪ್ರೇಕ್ಷಕರ ಮುಂದೆ ಇತಿಹಾಸದ ಒಂದು ಅಧ್ಯಾಯವನ್ನೇ ತೆರೆದಿಟ್ಟಿತು. ಪ್ರಭಾವಶಾಲಿ ಪ್ರದರ್ಶನದೊಂದಿಗೆ ಆರಂಭಗೊಂಡ ನಾಟಕ ನಾರಾಯಣಗುರುಗಳ ಜೀವನದ ಹಲವು ಮಜಲುಗಳನ್ನು ಎಳೆ ಎಳೆಯಾಗಿ ಬಿಡಿಸಿದ್ದು ಮಾತ್ರವಲ್ಲದೆ, ಕುಶಲತೆಯಿಂದ ಅವರ ತತ್ವ ಸಂದೇಶಗಳನ್ನು ಜನರ ಮನ ಮುಟ್ಟುವಂತೆ ಚಿತ್ರಿಸಿದ ರೀತಿ ಮೆಚ್ಚುಗೆಗೆ ಪಾತ್ರವಾದದ್ದು. ಊರ ಪರವೂರ ಕಲಾವಿದರು ಅಭಿನಯಿಸಿದ ‘ಶೂದ್ರ ಶಿವ’ ಎಲ್ಲಾ ಕಲಾವಿದರ ಕಲಾ ಪ್ರಬುದ್ಧತೆಗೆ ವೇದಿಕೆಯಾಯಿತು.
ನಾರಾಯಣ ಗುರುಗಳೊಂದಿಗೆ ಮಹಾತ್ಮಾ ಗಾಂಧಿಯವರ ಭೇಟಿ, ನಾರಾಯಣ ಗುರುಗಳ ಅನುಯಾಯಿಗಳಾದ ಡಾಕ್ಟರ್ ಪಲ್ಪು, ಕುಮಾರ್ ಆಶಾನ್, ಅಯ್ಯಪ್ಪನ್, ಅಯ್ಯಂಕಾಳಿ ಇತ್ಯಾದಿ ವ್ಯಕ್ತಿಗಳ ಹಾಗೂ ಸಂದರ್ಭಗಳ ಚಿತ್ರಣ ಪ್ರೇಕ್ಷಕರ ಮನಸೂರೆಗೊಂಡಿತು. ಇಂದಿಗೂ ಎಂದೆಂದಿಗೂ ಅನ್ವಯವಾಗುವ ಹಲವು ವಿಷಯಗಳನ್ನು ನಯ ನಾಜೂಕಿನಿಂದ ನಮ್ಮ ಮುಂದಿರಿಸುವ ಶೂದ್ರ ಶಿವನನ್ನು ಒಮ್ಮೆ ನೋಡಲೇಬೇಕು.
ತಿರುಗಾಟಕ್ಕೆ ತಯಾರಾಗಿರುವ ರುದ್ರ ಥೇಟರ್ ನ ಶೂದ್ರ ಶಿವನನ್ನು ನಿಮ್ಮೂರಿಗೆ ಕರೆಸಿಕೊಳ್ಳಲು 6361657578, 9902450686ನ್ನು ಸಂಪರ್ಕಿಸಿ.
________________________________________________________________________________________
ಒಂದು ವಿಮರ್ಶೆ
ನಾರಾಯಣ ಗುರು ತತ್ವ ಆದರ್ಶಗಳನ್ನು ಮತ್ತೊಮ್ಮೆ ನೆನಪಿಸುವ “ಶೂದ್ರ ಶಿವ”
ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮತ್ತೊಂದು ನವೀನತೆಗೆ ಸಾಕ್ಷಿಯಾಯಿತು.
ಬಾಬು ಶಿಶ ಪೂಜಾರಿಯವರ ‘ನಾರಾಯಣ ಗುರು ವಿಜಯ ದರ್ಶನ’ ಕೃತಿಯ ಪ್ರೇರಣೆಯೊಂದಿಗೆ ವಿದ್ದು ಉಚ್ಚಿಲರ ನಿರ್ದೇಶನದಲ್ಲಿ ಮೊದಲ ಪ್ರಯೋಗವನ್ನು ಕಂಡ “ಶೂದ್ರ ಶಿವ” ನಾಟಕವು ಪ್ರೇಕ್ಷಕರ ಜನಮನ ಗೆದ್ದಿದೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದರ್ಶಕಗಳು ಅವರ ಬದುಕು ಈ ನಾಟಕದ ಕಥಾವಸ್ತುವಾಗಿದ್ದರೂ ಗುರುಗಳ ಜೊತೆಗಿನ ಗುರುಗಳ ಸಂಘಟಿತ ಚಳುವಳಿಯನ್ನು ಒಂದು ಪ್ರಮುಖ ಘಟ್ಟವನ್ನಾಗಿ ತೋರಿಸಿರುವುದು ಈ ನಾಟಕದ ಕಥಾಹಂದರವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ನಾರಾಯಣ ಗುರು, ಡಾ.ಪಲ್ಪು,ಕುಮಾರನ್ ಆಶಾನ್, ಅಯ್ಯಪ್ಪ ಮೊದಲಾದವರು ಕೂಡಿಕೊಂಡು ನಡೆಸುವ ಸಾಮಾಜಿಕ ಸುಧಾರಣೆಯ ಹೋರಾಟದ ಬಗೆಯನ್ನು ಈ ನಾಟಕವು ಹೆಡಣೆದುಕೊಂಡಿದೆ.
ನಾಟಕದ ಆರಂಭದಲ್ಲಿ ಪ್ರಾಚೀನ ಕೇರಳದಿಂದ ನಾರಾಯಣ ಗುರುಗಳ ಸಮಕಾಲಿನ ಕೇರಳದವರೆಗೂ ನಡೆದು ಬಂದ ಜಾತಿ ತಾರತಮ್ಯಗಳ ಆಚರಣೆ ಕೆಳ ಜಾತಿಯ ಮೇಲಿನ ಸವರ್ಣರ ದಬ್ಬಾಳಿಕೆ, ದಲಿತೇತರ ಅವರ್ಣಿಯರು ದಲಿತರನ್ನು ಶೋಷಿಸುವ ಬಗೆ, ಇವೆಲ್ಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಗುರುಗಳ ಧಾರ್ಮಿಕ ಚಳುವಳಿಯ ಆರಂಭದ ಘಟ್ಟದ ಅರವಿಪುರದಲ್ಲಿ “ಶೂದ್ರ ಶಿವನ” ಸ್ಥಾಪನೆ ಮತ್ತು ಮುಂದಕ್ಕೆ ಬೆಳೆದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಕ್ರಾಂತಿಯ ಗುರು ಚಳುವಳಿಯ ಹೆಜ್ಜೆಗಳು ಈ ನಾಟಕದಲ್ಲಿವೆ.
ಶಿವನು ಗುರುಗಳ ಜೊತೆಗೆ ನಡೆಯುತ್ತಾನೆ,ಜನರನ್ನು ಕಂಡು ತಾಂಡವವಾಡುತ್ತಾನೆ ಎನ್ನುವ ನಿರ್ದೇಶಕರ ಕಲ್ಪನೆಯು ನಾಟಕಕ್ಕೊಂದು ಹೊಸ ರೂಪವನ್ನು ನೀಡಿದೆ. ಒಂದಕ್ಕೊಂದು ಸೈ ಎನಿಸುವ ಹಾಡುಗಳ ಸರಣಿಯಂತೂ ಜನ ಮನಸೂರೆಗೊಳಿಸುವಂತಿದೆ.
40 ವರ್ಷಗಳಿಗೂ ದೀರ್ಘಕಾಲದ ಕಥೆಯೊಂದನ್ನು ರಂಗ ರೂಪಕ್ಕಿಳಿಸಿದ ಶರತ್ ಎಸ್ ಮೈಸೂರು ಮತ್ತು ಮನೋಜ ವಾಮಂಜೂರು ಇವರ ಯತ್ನ ಪ್ರೇಕ್ಷಕರನ್ನು ತಲುಪಿದೆ. ಶರತ್ ಉಚ್ಚಿಲರ ಸಂಗೀತವಂತೂ ಪ್ರೇಕ್ಷಕರನ್ನು ಸೆಳೆದು ಬಿಡುತ್ತದೆ. ಆದರೆ ನಾಟಕದ ಕೆಲವು ದೃಶ್ಯಗಳಲ್ಲಿರುವ ಸಂಗೀತದ ಕೊರತೆಗಳನ್ನು ನೀಗಿಸಿದರೆ ಇದು ಮತ್ತಷ್ಟು ಪ್ರಭಾವ ಬೀರಬಹುದು. ನಾಟಕದುದ್ದಕ್ಕೂ ಕೊಂಕು ಮಾತಿನ ಮೂಲಕ ಆಗಾಗ ವೇದಿಕೆಗೆ ಬಂದುಬಿಡುವ ದಾಸವಾಳದ ಕಿವಿಯವರ ಪಾತ್ರವಂತೂ ಮನೋರಂಜನಿಯ. ನಾಟಕದಲ್ಲಿ ಪ್ರತಿಯೊಬ್ಬ ನಟನೂ ತನ್ನ ಪಾತ್ರಕ್ಕೆ ಜೀವ ತುಂಬುತ್ತಾ ಬಂದಿದ್ದು ಅಲ್ಲಲ್ಲಿ ಸಂಭಾಷಣೆಯ ಏರಿಳಿತಗಳಲ್ಲಿ ಹಿಡಿತ ಸಾಧಿಸಿದರೆ ಪಾತ್ರಗಳು ಮತ್ತಷ್ಟು ಗಟ್ಟಿಗೊಳ್ಳಬಹುದು. ನಾಟಕದಲ್ಲಿನ ಮನೀಶ್ ಪಿಂಟೋ ಅವರ ಬೆಳಕಿನ ವಿನ್ಯಾಸ, ಶಶಿಧರ್ ಅಡಪ ಇವರ ರಂಗ ವಿನ್ಯಾಸ, ಶಿವರಾಂ ಕಲ್ಮಡ್ಕರ ವಸ್ತ್ರ ವಿನ್ಯಾಸಗಳು ನಾಟಕಕ್ಕೆ ಪೂರಕವಾಗಿದ್ದವು.
ಒಟ್ಟಿನಲ್ಲಿ ನಾರಾಯಣ ಗುರುಗಳ ವಿಚಾರಧಾರೆಗಳನ್ನು ಮತ್ತು ಅವರ ತತ್ವ ಆದರ್ಶಗಳನ್ನು ಈ ನಾಟಕ ಯಾವುದೇ ರಾಜಿ ಇಲ್ಲದೆ ಸಮರ್ಥವಾಗಿ ಪ್ರೇಕ್ಷಕರ ಮುಂದಿರಿಸಿದೆ.