ಮಂಗಳೂರು : ಕರ್ನಾಟಕ ಸರಕಾರದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಇಲಾಖೆ ನೀಡುವ 2023 – 24ರ ‘ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 08-03-2024ರಂದು ಮಂಗಳೂರಿನ ದ. ಕ. ಜಿಲ್ಲಾ ಪಂಚಾಯತ್ ಸಂಕೀರ್ಣದ ನೇತ್ರಾವತಿ ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಡೆಯಿತು.
ಕಲೆ ಸಾಂಸ್ಕೃತಿಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಶ್ರೀ ಆಶಿಶ್ ಎಂ. ರಾವ್ ಅವರಿಗೆ ಈ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಮಿಕರ ಭವಿಷ್ಯ ನಿಧಿ ಇಲಾಖೆಯ ಮಂಗಳೂರಿನ ಶಾಖೆಯಲ್ಲಿ ಉದ್ಯೋಗಿಯಾಗಿರುವ ಮಧುಸೂದನ ಹಾಗೂ ರಾಜಶ್ರೀ ದಂಪತಿಯ ಸುಪುತ್ರನಾಗಿರುವ ಶ್ರೀ ಆಶಿಶ್ ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ. ಚಿತ್ರಕಲೆ, ಸಂಗೀತ, ಗ್ಲಾಸ್ ಪೇಂಟಿಂಗ್, ರಂಗೋಲಿ, ಲೀಫ್ ಕಾರ್ವಿಂಗ್, ಕಸದಿಂದ ರಸ, ಕ್ಲೇ ಮಾಡಲಿಂಗ್, ಕ್ಯಾನ್ವಾಸ್ ಪೈಂಟಿಂಗ್, ಸ್ಟೋನ್ ಆರ್ಟ್, ಕ್ಲೋತ್ ಆರ್ಟ್, ವಾಲ್ ಪೇಂಟಿಂಗ್, ಕೊಲಾಜ್ ವರ್ಕ್, ಪೆನ್ಸಿಲ್ ಸ್ಕೆಚ್, ಪೆನ್ ಆರ್ಟ್, ಮುಂತಾದ ವಿಷಯಗಳಲ್ಲಿ ಪರಿಣತಿ ಹೊಂದಿರುವ ಇವರು ಇದುವರೆಗೆ 200ಕ್ಕೂ ಅಧಿಕ ಬಹುಮಾನವನ್ನು ಪಡೆದುಕೊಂಡಿದ್ದಾರೆ.
‘ಸುರಭಿ ಆಲ್ ಇಂಡಿಯಾ ಚೈಲ್ಡ್ ಎಕ್ಸಿಬಿಷನ್ ಸೊಸೈಟಿ’ ನಡೆಸಿದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ, ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಮ್ಯುನಿಕೇಷನ್ ಇನ್ಫಾರ್ಮೆಶನ್ ಆಫ್ ನ್ಯೂ ಡೆಲ್ಲಿ’ ಅವರು ನಡೆಸಿದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ, ಇಂಟರ್ನ್ಯಾಷನಲ್ ಆನ್ಲೈನ್ ಚಿತ್ರಕಲಾ ಸ್ಪರ್ಧೆ, ‘ಬ್ಲೂ ಕ್ಯಾಂಪ್’ ನಡೆಸಿದ ಚಿತ್ರಕಲಾ ಸ್ಪರ್ಧೆ, ಕಲ್ಕೂರ ಪ್ರತಿಷ್ಠಾನದ ರಾಷ್ಟ್ರೀಯ ಮಕ್ಕಳ ಉತ್ಸವದ ರಂಗೋಲಿ ಸ್ಪರ್ಧೆ, ರಾರಾಸಂ ಫೌಂಡೇಶನ್ ಬಂಟ್ವಾಳ ಇವರು ನಡೆಸಿದ ದಶ ಸಂಭ್ರಮದ ಚಿತ್ರಕಲಾ ಸ್ಪರ್ಧೆ ಮುಂತಾದ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.
ಆಶಿಶ್ ಅರಳಿ ಎಲೆ, ಹಲಸಿನ ಎಲೆ ಮತ್ತು ಅಂತೋರಿಯಂ ಎಲೆಯಲ್ಲಿ ಜಗತ್ತಿನ ದಿಗ್ಗಜರಾದ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಶಿವಾಜಿ, ಸಂಗೊಳ್ಳಿ ರಾಯಣ್ಣ ಹಾಗೂ ಬಾಲಸುಬ್ರಹ್ಮಣ್ಯಂ ಮುಂತಾದವರ ಭಾವಚಿತ್ರವನ್ನು ರಚಿಸಿ ಎಲ್ಲರ ಮನ ಗೆದ್ದಿದ್ದಾರೆ. ಶ್ರೀರಾಮ, ಶ್ರೀ ಕೃಷ್ಣ, ಆಂಜನೇಯ, ಯೋಗಾಸನ ಭಂಗಿಗಳು, ತಾಯಿ ಮಗುವಿನ ಬಾಂಧವ್ಯ, ಪ್ರಕೃತಿ ಸಂಬಂಧಿತ ವಿಷಯಗಳನ್ನು ಎಲೆಗಳಲ್ಲಿ ಕೊರೆದಿದ್ದಾರೆ. ಭಾವಚಿತ್ರಗಳ ಮಾದರಿಯನ್ನು ಎಲೆಗಳಲ್ಲಿ ಕೊರೆಯುವ ಅಪರೂಪದ ಕಲಾ ಮಾದರಿಯನ್ನು ಇವರು ಪ್ರಯತ್ನಿಸಿ ಯಶಸ್ಸನ್ನು ಕಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಬಾಲ ಪುರಸ್ಕಾರ, ತ್ರಿವೇಣಿ ಸಂಗಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರತಿಭಾನ್ವೇಷಣ ಕೇಂದ್ರದಿಂದ ಅಭಿನಂದನ್ ಪ್ರಶಸ್ತಿ ಪುರಸ್ಕಾರ, ಮೇಘ ಮೈತ್ರಿ ಭಾಲಪುರಸ್ಕಾರ, 11ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ‘ಕರ್ನಾಟಕ ಪ್ರತಿಭಾರತ್ನ’ ಪ್ರಶಸ್ತಿ, ಸೀತಮ್ಮಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಕಾಸರಗೋಡು ಇವರ ‘ಭರವಸೆಯ ಬೆಳಕು’ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಇವರ ಸಾಧನೆಗೆ ಸಂದ ಗೌರವವಾಗಿದೆ.