“ನೋಡಿ, ನಾಟಕಕ್ಕೆ ಒಪ್ಪಿಕೊಂಡ ಮೇಲೆ ಪ್ರಾಕ್ಟೀಸಿಗೆ ಸರಿಯಾಗಿ ಬರ್ಬೇಕು. ಎಲ್ಲರನ್ನೂ ಕಾಯಿಸುವುದು ಸರಿಯಲ್ಲ. ಇದ್ರ ಪರಿಣಾಮ ಏನು ಗೊತ್ತುಂಟಾ ? ವೇದಿಕೆಗೆ ಹೋದಾಗ ಬಾಯಿಪಾಠ ಇಲ್ಲ, ಸೈಡ್ ವಿಂಗ್ ನಲ್ಲಿ ಪ್ರಾಂಪ್ಟ್ ಗೆ ಕಿವಿ ಕೊಡೋದು, ಅಭಿನಯ ಇಲ್ಲಾ, ಇದರಿಂದಾಗಿ ಉತ್ತಮ ಪ್ರಸ್ತುತಿ ಸಾಧ್ಯವಿಲ್ಲ. ಕಲಾವಿದರಾದ ನಮ್ಮಲ್ಲಿ ಒಂದು ಶಿಸ್ತು ಬೇಕಪ್ಪ.”
“ಹೌದಾ ? ಹಾಗಾದ್ರೆ ನೀವು ಶಿಸ್ತು ಹೇಗೆ ಪಾಲಿಸ್ತೀರಿ ?”
“ನೀವು ನನ್ನ ಬಗ್ಗೆ ಕೇಳ್ತೀರಾ ? 5 ಗಂಟೆಗೆ ಪ್ರಾಕ್ಟೀಸಿಗೆ ಬರ್ಬೇಕು ಅಂತ ನಿರ್ದೇಶಕರು ಹೇಳಿದ್ರೆ, ಹತ್ತು ನಿಮಿಷಕ್ಕೆ ಮೊದಲು ಅಲ್ಲಿರ್ತೇನೆ. ಅಲ್ಲಿ ಹೋದ ಮೇಲೆ ಅದೇ ನನ್ನ ಪ್ರಪಂಚ. ಇಂದಿಗೂ ಅದನ್ನು ಪಾಲಿಸಿಕೊಂಡು ಬಂದಿದ್ದೇನೆ. ರಂಗಭೂಮಿ ಮತ್ತು ಸಿನೇಮಾ ರಂಗ ಇವೆರಡನ್ನು ತುಲನೆ ಮಾಡಿದ್ರೆ ನನ್ನ ಪ್ರಥಮ ಆದ್ಯತೆ ರಂಗಭೂಮಿಗೆ. ರಂಗಭೂಮಿಯ ಬದುಕಿನಲ್ಲಿ ನೋವು ನಲಿವು ಎರಡೂ ಇದೆ. ‘ರಂಗಭೂಮಿ ನನಗೆ ಬೇಡ’ ಎನ್ನುವ ಮನಸ್ಥಿತಿ ನನಗೆ ಎಂದೂ ಬಂದಿಲ್ಲ. ರಂಗಭೂಮಿ ನನ್ನ ಜೀವನ. ಅದೇ ನನ್ನ ಉಸಿರು” ಇದು ಕಲಾವಿದೆ ಶ್ರೀಮತಿ ಸರೋಜಿನಿ ಶೆಟ್ಟಿಯವರು ತುಂಬು ಅಭಿಮಾನದಿಂದ ಹೇಳಿದ ಮಾತು.
ಸ್ನೇಹ ಜೀವಿ, ಬಿಚ್ಚು ಮನಸ್ಸಿನ ಅಜಾತ ಶತ್ರು, ಸುಂದರ ವ್ಯಕ್ತಿತ್ವದ ಸರೋಜಿನಿಯವರು 5ನೇ ತರಗತಿಯಲ್ಲಿರುವಾಗಲೇ ‘ಕೃಷ್ಣ ಲೀಲೆ ಕಂಸ ವಧೆ’ ನಾಟಕದಲ್ಲಿ ಅಭಿನಯಿಸಿ, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಅಂದಿನ ನಾಟಕಕ್ಕೆ ಸಾಕ್ಷಿಯಾದವರ ತುಂಬು ಮೆಚ್ಚುಗೆ ಪಡೆದವರು. ಪ್ರೇಕ್ಷಕರ ಗಮನ ಸೆಳೆದು ತನ್ನ ಅಭಿನಯ ಅವರ ಮನಸ್ಸಿನಲ್ಲಿ ನಿಲ್ಲುವಂತೆ ಮಾಡಬೇಕು ಎಂಬ ಛಲವೇ ಈ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೇರಣೆ. ಈ ನಿಟ್ಟಿನಲ್ಲಿ ತುಳು ರಂಗಭೂಮಿ ಮತ್ತು ತುಳು ಸಿನೇಮಾ ರಂಗದ ತನ್ನ ಗುರು ಶ್ರೀ ಕೆ.ಎನ್. ಟೈಲರ್ ಇವರನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳುವುದು ನನ್ನ ಧರ್ಮ ಮತ್ತು ಆದ್ಯ ಕರ್ತವ್ಯ ಎನ್ನುತ್ತಾರೆ ಸರೋಜಿನಿಯವರು.
ಕಲಾವಿದೆ ಸರೋಜಿನಿ ಶೆಟ್ಟಿ ಎಂದೇ ಜನಮಾನಸದಲ್ಲಿ ಹಾಸು ಹೊಕ್ಕಾದ ಇವರ ನಿಜ ನಾಮಧೇಯ ಶರ್ವಾಣಿ. ‘ತುಳುನಾಡ ಸಿರಿ’ ಸಿನೇಮಾದಲ್ಲಿ ನಟಿಸುವ ವೇಳೆಗೆ ಶರ್ವಾಣಿಯಿಂದ ಹೆಸರು ಸರೋಜಿನಿಗೆ ಬದಲಾಯಿತು. ತಂದೆ ಶ್ರೀ ತಿಮ್ಮಪ್ಪ ಶೆಟ್ಟಿ ತಾಯಿ ಶ್ರೀಮತಿ ಕಲ್ಯಾಣಿ ಶೆಟ್ಟಿಯವರ ಸುಪುತ್ರಿಯಾದ ಇವರು ಕಲೆಗೆ ತನ್ನ ತಾಯಿ ನೀಡಿದ ಪ್ರೋತ್ಸಾಹವನ್ನು ನೆನೆದು ಭಾವುಕರಾಗುತ್ತಾರೆ. ತನ್ನ ಮನೆಯಿಂದ ಪ್ರಾಕ್ಟೀಸ್ ನಡೆಯುವ ಜಾಗಕ್ಕೆ ಬರಬೇಕಾದರೆ 5 ಕಿ. ಮೀಟರ್ ನಡೆದು ಮತ್ತೆ ಬಸ್ಸಿನಲ್ಲಿ ಬರಬೇಕು. ಹೆಣ್ಣು ಮಕ್ಕಳು ವೇದಿಕೆ ಏರುವುದು ಎಂದರೆ ಆ ಕಾಲದಲ್ಲಿ ಗೌರವದ ಮಾತಾಗಿರಲಿಲ್ಲ. ಹಂತ ಹಂತದಲ್ಲಿಯೂ ತನ್ನ ಮಗಳಿಗೆ ಬೆಂಗಾವಲಾಗಿ ನಿಂತು ಎಲ್ಲಾ ಕಡೆಗೂ ಪ್ರಾಕ್ಟೀಸಿಗೆ ಜೊತೆಯಾಗಿ ಹೋಗಿ ಮುಗಿದ ಮೇಲೆ ಕರೆ ತರುವುದನ್ನು ತಾಯಿ ಕಲ್ಯಾಣಿ ಶೆಟ್ಟಿಯವರು ತನ್ನ ದಿನನಿತ್ಯದ ಕೆಲಸಗಳಲ್ಲಿ ಒಂದಾಗಿಸಿಕೊಂಡಿದ್ದರು. ಇದೆಲ್ಲ ಇಂದು ಸಾಮಾನ್ಯ ಮಾತಾಗಿರಬಹುದು, 47 ವರ್ಷಗಳ ಹಿಂದೆ ಅಲ್ಲ.
ಬಿ.ವಿ. ಕಾರಂತರು ನಿರ್ದೇಶಿಸಿದ ಶಿವರಾಮ ಕಾರಂತರ ‘ಚೋಮನ ದುಡಿ’ ಇವರ ಮೊದಲ ಸಿನೇಮಾ. ‘ತುಳುನಾಡ ಸಿರಿ’, ‘ಬೊಳ್ಳಿದೋಟ’, ‘ಸಂಗಮ ಸಾಕ್ಷಿ’ ಮಾತ್ರವಲ್ಲದೆ ‘ಗಂಗಾ ಜಮುನಾ ಸರಸ್ವತಿ’ಯಲ್ಲಿ ಅಮಿತಾ ಬಚ್ಚನ್ ಜೊತೆ ಮತ್ತು ಮಮ್ಮುಟ್ಟಿ, ವಿಷ್ಣುವರ್ಧನ್, ಅಂಬರೀಷ್ ರಂತಹ ನಾಯಕ ನಟರ ಜೊತೆ ಅಭಿನಯಿಸಿದ ಅನುಭವ ಇವರದ್ದು.
ಶ್ರೀ ಕೆ.ಎನ್. ಟೈಲರ್ ಇವರ ‘ಗಣೇಶ ಸಭಾ’ದ ಮೂಲಕ ನಾಟಕ ರಂಗ ಪ್ರವೇಶಿಸಿ ತನ್ನ ಮನಸ್ಸಿಗೊಪ್ಪುವ ಪಾತ್ರಗಳ ಮೂಲಕ ಪ್ರತಿಭೆಯನ್ನು ಅನಾವರಣಗೊಳಿಸಿದವರು ಇವರು. ಲಂಕೇಶ್ ರ ‘ಟಿಂಗರೆ ಬೊಡ್ಡಣ್ಣ’, ಕಾಳಿದಾಸನ ‘ಆಷಾಡದ ಒಂದು ದಿನ’ ಇಂತಹಾ ನಾಟಕಗಳು ಇವರಿಗೆ ಖುಷಿ ಕೊಟ್ಟಿವೆ.
18 ವರ್ಷದೊಳಗೆ ಗೃಹಿಣಿಯ ಪಟ್ಟವನ್ನು ಸ್ವೀಕರಿಸಿದ ಇವರು ವಿವಾಹಾ ನಂತರ ಸಿನೇಮಾ ರಂಗ ಪ್ರವೇಶಿಸಿದ್ದು, ಹಿಂತಿರುಗಿ ನೋಡದೇ ಅಭಿನಯವನ್ನೇ ಉಸಿರಾಗಿರಿಸಿಕೊಂಡು ಕಲಾ ಸರಸ್ವತಿಯ ನಿಸ್ವಾರ್ಥ ಸೇವೆ ಮಾಡಿರುವುದು ಗಮನೀಯ. ಕದ್ರಿ ಶ್ರೀ ನವನೀತ ಶೆಟ್ಟಿಯವರು ಬರೆದು ನಿರ್ದೇಶಿಸಿದ ಶ್ರೀ ಕಿಶೋರ್ ಡಿ. ಶೆಟ್ಟಿಯವರ ‘ಶ್ರೀ ಲಲಿತೆ’ ತಂಡದ ಮೂಲಕ ‘ಕಟೀಲ್ದಪ್ಪೆ ಉಳ್ಳಾಲ್ದಿ’ ನಾಟಕದಲ್ಲಿ ಅಭಿನಯಿಸಿ ‘ಶ್ರೀದೇವಿಯ’ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ ಜನಮೆಚ್ಚುಗೆ ಪಡೆದವರು. ಈ ನಾಟಕ ಈವರೆಗೆ 345 ಪ್ರದರ್ಶನಗಳನ್ನು ಹಾಗೂ ಪ್ರಸ್ತುತ ಇವರು ನಟಿಸಿದ ‘ಗರುಡ ಪಂಚಮಿ’ ನಾಟಕವೂ 62 ಪ್ರದರ್ಶನಗಳನ್ನು ಕಂಡಿದೆ ಎಂಬುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ರಂಗಭೂಮಿಯಲ್ಲಿ ಅಂದಿಗೂ ಇಂದಿಗೂ ಇರುವ ವ್ಯತ್ಯಾಸಗಳ ಬಗ್ಗೆ ಹೇಳುತ್ತಾ ಅಂದು ಸಂಭಾವನೆ ಬಹಳ ಕಡಿಮೆ ಇತ್ತು. ಕಲಾವಿದರು ಸಂಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಬರುತ್ತಿರಲಿಲ್ಲ. ಸಂಭಾವನೆ ಬೇಕು ಆದರೆ ಎಲ್ಲವೂ ಸಂಭಾವನೆ ಆಗಬಾರದು. ರಂಗಭೂಮಿ ಅನೇಕ ಕಲಾವಿದರಿಗೆ ಜೀವನ ಕೊಟ್ಟಿದೆ. ರಂಗಭೂಮಿಯಲ್ಲಿ ಒಗ್ಗಟ್ಟು ಬೇಕು. ಕಲಾವಿದರಲ್ಲಿ ಶ್ರದ್ಧೆ – ಶಿಸ್ತು ಬೇಕು. ಆಗ ರಂಗಭೂಮಿ ಬೆಳೆಯುತ್ತದೆ, ಪ್ರೇಕ್ಷಕರಿಗೆ ಕಲಾವಿದರು ಉತ್ತಮ ರಂಗ ಪ್ರಸ್ತುತಿ ನೀಡಲು ಸಾಧ್ಯವಾಗುತ್ತದೆ.
ಶ್ರೀಮತಿ ಸರೋಜಿನಿ ಶೆಟ್ಟಿ ಹಾಗೂ ಎಲ್ಲಾ ರಂಗಕರ್ಮಿಗಳಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಪ್ರೀತಿ ಪೂರ್ವಕ ಶುಭಾಶಯಗಳು.