ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ 30-03-2024ರಂದು ಸಂಜೆ 5-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂರು ಪ್ರತಿಷ್ಟಿತ ದತ್ತಿ ಪುರಸ್ಕಾರಗಳ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮತ್ತು ಪ್ಯಾರಾ ಅಂತರರಾಷ್ಟ್ರೀಯ ಕ್ರೀಡಾಪಟು ಡಾ. ಕೆ.ಎನ್. ರಾಜಣ್ಣನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್, ಕರ್ನಾಟಕ ಇಂಜಿನಿಯರಿಂಗ್ ಸರ್ವೀಸ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಶಿವಾನಂದ ಪಿ. ಹೂಗಾರ, ದತ್ತಿ ದಾನಿಯಾದ ಡಾ. ಹೆಚ್. ವಿಶ್ವನಾಥ್, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ. ಮಹೇಶ್ ಉಪಸ್ಥಿತರಿರುವರು. ಬೀದರದ ಶರಣ ಸಾಹಿತಿಗಳಾದ ಅಕ್ಕ ಡಾ. ಅನ್ನಪೂರ್ಣತಾಯಿ, ಬೆಳಗಾವಿ ಶರಣ ಸಾಹಿತಿಗಳಾದ ಶ್ರೀ ವಿನೋದ ಸುರೇಂದ್ರ ದೊಡ್ಡಣ್ಣವರ, ಬೆಂಗಳೂರಿನ ವಿಶೇಷ ದೃಷ್ಟಿ ಚೇತನ ಬರಹಗಾರರಾದ ರಮಾ ಫಣಿ ಭಟ್ ಗೋಪಿ ಮತ್ತು ಮಾಹಿತಿ ಹಕ್ಕು ತಜ್ಞರಾದ ಡಾ. ವೈ.ಜಿ. ಮುರಳೀಧರನ್ ಈ ಸಮಾರಂಭದಲ್ಲಿ ದತ್ತಿ ಪುರಸ್ಕಾರಗಳನ್ನು ಸ್ವೀಕರಿಸಲಿದ್ದಾರೆ.
ಅಂದು ಪ್ರದಾನವಾಗುವ ದತ್ತಿ ಪುರಸ್ಕಾರಗಳಲ್ಲಿ ಶ್ರೀ ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿಯನ್ನು ಹೂವಿನ ವ್ಯಾಪಾರಿ ಲಕ್ಷ್ಮಣ ಹೂಗಾರರ ಪುತ್ರ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಪಾಂಡಪ್ಪ ಹೂಗಾರರು ಸ್ಥಾಪಿಸಿದ್ದಾರೆ. ವ್ಯಾಪಕ ಸಮಾಜಸೇವೆಯನ್ನು ಕೈಗೊಂಡ ಇವರು ಶರಣ ಸಾಹಿತ್ಯ ಪ್ರಚಾರದಲ್ಲಿ ಆಸಕ್ತರು. ವಚನ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲು ಇವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು 2024ನೆಯ ಸಾಲಿನಲ್ಲಿ ಈ ಪುರಸ್ಕಾರಕ್ಕೆ ಪಾತ್ರರಾದ ಪೂಜ್ಯಶ್ರೀ ಅಕ್ಕ ಡಾ.ಅನ್ನಪೂರ್ಣತಾಯಿಯವರು ಬೀದರ್ ನವರಾಗಿದ್ದು ಬಸವ ತತ್ವ ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾನತೆಯ ಸಮಾಜವನ್ನು ಕಟ್ಟಲು ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಪುರಸ್ಕಾರಕ್ಕೆ ಪಾತ್ರರಾದ ಇನ್ನೊಬ್ಬರು ಶ್ರೀ ವಿನೋದ ಸುರೇಂದ್ರ ದೊಡ್ಡಣ್ಣವರ ಬೆಳಗಾವಿಯ ಭರತೇಶ್ ಟ್ರಸ್ಟ್ ನ ಕಾರ್ಯದರ್ಶಿಗಳಾಗಿದ್ದು ಸಂಘಟನೆಯಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ.
ಡಾ. ಹೆಚ್. ವಿಶ್ವನಾಥ್ ಮತ್ತು ಶ್ರೀಮತಿ ಎಂ.ಎಸ್. ಇಂದಿರಾ ದತ್ತಿ ಪ್ರಶಸ್ತಿಯು ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ವಿಶೇಷ ದೃಷ್ಟಿ ಚೇತನ ಬರಹಗಾರನ್ನು ಪ್ರೋತ್ಸಾಹಿಸಲು ಸ್ಥಾಪಿತ ದತ್ತಿಯಾಗಿದ್ದು ಈ ವರ್ಷದ ಪುರಸ್ಕಾರಕ್ಕೆ ಸಂವೇದನಾಶೀಲ ಕವಯತ್ರಿ ರಮಾ ಫಣಿ ಭಟ್ ಗೋಪಿ ಆಯ್ಕೆಯಾಗಿದ್ದಾರೆ. ಮಾಹಿತಿ ಹಕ್ಕು ಹೋರಾಟಗಾರರು ಮತ್ತು ತಜ್ಞರ ಮೇಲಿನ ಅಭಿಮಾನದಿಂದ ಸ್ವತಃ ಮಾಹಿತಿ ಹಕ್ಕು ಹೋರಾಟಗಾರ ಜೆ.ಎಂ. ರಾಜಶೇಖರ ಸ್ಥಾಪಿಸಿರುವ ದತ್ತಿಯನ್ನು ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೇಂದ್ರ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿರುವ ಡಾ. ವೈ.ಜಿ. ಮುರಳೀಧರನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.