ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವತಿಯಿಂದ ಕಾಂತಾವರ ಕನ್ನಡ ಭವನದಲ್ಲಿ ಮುದ್ದಣ ಸಾಹಿತ್ಯೋತ್ಸವ ಮತ್ತು ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 24-03-2024ರಂದು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರ್ ರಾಜ್ ಮಾತನಾಡಿ, “ಕಾಂತಾವರ ಕನ್ನಡ ಸಂಘ ಹಾಗೂ ಶಿವಮೊಗ್ಗ ಕರ್ನಾಟಕ ಸಂಘಗಳ ಧ್ಯೇಯೋದ್ದೇಶ ಕನ್ನಡಪರ ಚಟುವಟಿಕೆ ಹಮ್ಮಿಕೊಳ್ಳುವುದೇ ಆಗಿದೆ. ಕಾಂತಾವರ ಕನ್ನಡ ಸಂಘವು ಜನ್ಮತಾಳಿ 50ರ ಅಂಚಿಗೆ ತಲುಪುತ್ತಿದ್ದರೆ, ಶಿವಮೊಗ್ಗ ಕರ್ನಾಟಕ ಸಂಘವು ಶತಮಾನದಂಚಿಗೆ ಕಾಲಿಡುತ್ತಿದೆ” ಎಂದರು.
ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2023ರ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ಯನ್ನು ಬೆಂಗಳೂರಿನ ಕವಿ ಡಾ. ಲಕ್ಷ್ಮಣ ವಿ.ಎ. ಅವರಿಗೆ ಪ್ರದಾನ ಮಾಡಲಾಯಿತು. ಅವರ ಪ್ರಶಸ್ತಿ ಪುರಸ್ಕೃತ ಕೃತಿ ‘ಕಾಯಿನ್ ಬೂತ್’ ಅನ್ನು ಬಿಡುಗಡೆ ಮಾಡಲಾಯಿತು. 2024ರ ಸಾಲಿನ ದತ್ತಿನಿಧಿ ಪುರಸ್ಕಾರದಲ್ಲಿ ಮುನಿರಾಜ ರೆಂಜಾಳ ಅವರಿಗೆ ‘ಗಮಕ ಕಲಾ ಪ್ರವಚನ ಪ್ರಶಸ್ತಿ’, ಗಮಕಿ ಸುರೇಶ್ ರಾವ್ ಅತ್ತೂರು ಅವರಿಗೆ ‘ಗಮಕ ಕಲಾ ವಾಚನ ಪ್ರಶಸ್ತಿ’ ಮತ್ತು ಕಾರ್ಕಳದ ಲೋಹ ಶಿಲ್ಪಿ ಪ್ರಕಾಶ್ ಆಚಾರ್ಯ ಅವರಿಗೆ ‘ಶಿಲ್ಪಕಲಾ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ 7 ಹೊತ್ತಗೆಗಳನ್ನು ಉಪನ್ಯಾಸಕ ಟಿ.ಎ.ಎನ್. ಖಂಡಿಗೆ ಬಿಡುಗಡೆ ಮಾಡಿದರು. ಹರೀಶ್ ಆದೂರು ರಚಿಸಿದ ಸಾಕ್ಷ್ಯಚಿತ್ರ ‘ನುಡಿತೇರು’ ಅನ್ನು ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಬಿಡುಗಡೆ ಮಾಡಿದರು.
ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಸಾಧಕರಾದ ಸಾಹಿತ್ಯ ಭಂಡಾರದ ಪರವಾಗಿ (ಎಂ.ಎ. ಸುಬ್ರಹ್ಮಣ್ಯ ಮತ್ತು ಅರುಣ), ವಾರಿಜಾ ನೀರಬೈಲು, ಕೆ.ಎ. ರೋಹಿಣಿ, ಕೆ.ಎಚ್. ವಿಜಯಕುಮಾರ್, ಮುದ್ರಣ ವಿನ್ಯಾಸಕಾರ ಕಲ್ಲೂರು ನಾಗೇಶ್ ಅವರನ್ನು ಗೌರವಿಸಲಾಯಿತು. ಕೃತಿಕಾರರಾದ ಸುಮತಿ ನಿರಂಜನ, ವಿಜಯ ಬಿ. ಶೆಟ್ಟಿ, ಶ್ರೀಪತಿ ಮಂಜನಬೈಲು, ಮೀನಾಕ್ಷಿ ರಾಮಚಂದ್ರ, ಅಂಶುಮಾಲಿ, ಡಾ. ಸರ್ವಮಂಗಳ ಪಿ.ಆರ್. ಹಾಗೂ ಡಾ. ಸುಲತಾ ವಿದ್ಯಾಧರ್ ಅವರನ್ನು ಸನ್ಮಾನಿಸಲಾಯಿತು. ಕಾಂತಾವರ ಕನ್ನಡ ಸಂಘದ ಸ್ಥಾಪಕ ಅಧ್ಯಕ್ಷ ಡಾ. ನಾ. ಮೊಗಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಠಲ ಬೇಲಾಡಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ, ಕಾರ್ಯದರ್ಶಿ ಸದಾನಂದ ನಾರಾವಿ, ಸತೀಶ್ ಕುಮಾರ್ ಕೆಮ್ಮಣ್ಣು ನಿರೂಪಿಸಿದರು. ಬಳಿಕ ‘ರನ್ನನ ಗದಾಯುದ್ಧದ ದುರ್ಯೋಧನ ವಿಲಾಪ’ ಗಮಕ ವಾಚನ ವ್ಯಾಖ್ಯಾನ ನಡೆಯಿತು.