ಉಡುಪಿ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಹರಿಕಥಾ ಪ್ರವೀಣರಾದ ಹರಿದಾಸ ಬಿ.ಸಿ. ರಾವ್ ಅವರೊಂದಿಗೆ ‘ದಾಸ ಸಾಹಿತ್ಯ’ ವಿಷಯದಲ್ಲಿ ಸಂವಾದ ಕಾರ್ಯಕ್ರಮವು ದಿನಾಂಕ 27-03-2024ರಂದು ಸಂಜೆ ಶಿವಪುರ ಪಾಂಡುಕಲ್ಲಿನ ಶ್ರೀಯುತರ ಸ್ವಗೃಹ ‘ಗುರುಪದ’ದಲ್ಲಿ ನಡೆಯಿತು.
ದಾಸ ಸಾಹಿತ್ಯ ವಿಷಯದಲ್ಲಿ ಮಾತನಾಡಿದ ಶ್ರೀ ಬಿ.ಸಿ. ರಾವ್ ಶಿವಪುರ ಅವರು “ದಾಸ ಸಾಹಿತ್ಯವೆಂದರೆ ಈಶ ಸಾಹಿತ್ಯವಾಗಿದೆ ಮತ್ತು ಅದು ದೇಶ ಹಿತ ಸಾಹಿತ್ಯವಾಗಿದೆ. ಆಧ್ಯಾತ್ಮಿಕ ಚಿಂತನೆಗಳ ಮೂಲಕ ವಿಶ್ವ ಜೀವನ ಸಂದೇಶವನ್ನು ನೀಡಿದ ದೇಶ ನಮ್ಮದು. ಹದಿನೈದು ಹದಿನಾರನೆಯ ಶತಮಾನದಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ ದಾಸ ಶ್ರೇಷ್ಠರು ಹಾಡಿದರು. ಸಾಹಿತ್ಯ ಸೃಜಿಸಿದರು. ಸಮಾಜದ ಅಂಕು ಡೊಂಕುಗಳನ್ನು ತಿದ್ದಿದರು. ಭಗವಂತನಿಗೆ ಸಂಪೂರ್ಣ ಶರಣಾಗುತ್ತ ಬದುಕಿನ ಸತ್ಯಗಳನ್ನು ತಿಳಿಸಿದರು. ‘ಈಸ ಬೇಕು ಇದ್ದು ಜಯಿಸಬೇಕು..’, ‘ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳ ಬೇಡಿರೋ..’, ‘ತಲ್ಲಣಿಸದಿರು ಕಂಡ್ಯ ತಾಳು ಮನವೇ..’, ‘ಕುಲ ಕುಲ ಕುಲವೆಂದು ಹೊಡೆದಾಡಬೇಡಿ..’ ಮುಂತಾದ ಸಾವಿರಾರು ಕೀರ್ತನೆಗಳ ಮೂಲಕ ಇಹಲೋಕದ ಜೀವನ ಪ್ರೀತಿಯನ್ನು ಬಿತ್ತಿದರು. ವೇದ ಉಪನಿಷತ್ತು, ಭಕ್ತಿ ಪಂಥಗಳ ಸಾರವು ದಾಸ ಸಾಹಿತ್ಯದಲ್ಲಿ ಅಡಗಿದೆ. ಭಕ್ತಿ, ಜ್ಞಾನ ಮತ್ತು ಕರ್ಮ ಮಾರ್ಗದ ಮೂಲಕ ಪರಮಾತ್ಮನನ್ನು ಒಲಿಸಿಕೊಳ್ಳಬಹುದು ಎಂದು ಸಾರಿದರು. ಹರಿಕಥೆಯು ದಾಸ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಮಾಧ್ಯಮವಾಯಿತು. ಹರಿಕಥೆಯು ಮನೋರಂಜನೆ ಮತ್ತು ಮನೋಬೋಧನೆಯನ್ನು ನೀಡುವುದು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಗೌರವ ಕಾರ್ಯದರ್ಶಿ ಡಾ. ಪ್ರವೀಣ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ ಧನ್ಯವಾದವಿತ್ತರು. ಪದಾಧಿಕಾರಿಗಳಾದ ಬಾಲಚಂದ್ರ ಹೆಬ್ಬಾರ್, ಪುಷ್ಪಾವತಿ ಶೆಟ್ಟಿ, ಶೋಭಾ ಆರ್. ಕಲ್ಕೂರ್ ಹಾಗೂ ಪೂರ್ಣೇಶ ಹೆಬ್ರಿ, ಅನಿಕೇತನ ಉಡುಪ, ಅಹಲ್ಯಾ ಬಿ.ಸಿ ರಾವ್ ಮತ್ತಿತರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀಯುತರನ್ನು ಸಾಹಿತ್ಯ ಸಂಬಂಧಿ ಚಟುವಟಿಕೆಗಳ ಸಕಾಲಿಕ ಮಾರ್ಗದರ್ಶನಕ್ಕಾಗಿ ಸನ್ಮಾನಿಸಲಾಯಿತು. ಮುಸ್ಸಂಜೆಯ ಹೊತ್ತಿನಲ್ಲಿ ಪ್ರಕೃತಿಯ ಮಡಿಲಲ್ಲಿ ಪ್ರಶಾಂತ ವಾತಾವರಣದಲ್ಲಿ ನಡೆದ ದಾಸ ಸಾಹಿತ್ಯ ಕುರಿತ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ಸಹೃದಯರ ಹೃನ್ಮನಗಳನ್ನು ಮುದಗೊಳಿಸಿತು.