ಕಾರ್ಕಳ : ರಂಗಸಂಸ್ಕೃತಿ ಕಾರ್ಕಳ ಇದರ ದಶಮಾನೋತ್ಸವದ ಅಂಗವಾಗಿ ಡಾ ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಕಾರ್ಕಳ ಇದರ ಸಹಕಾರದೊಂದಿಗೆ ಸರಸ್ವತಿ ಮಂಜುನಾಥ ಪೈ ರಂಗ ಮಂಟಪದಲ್ಲಿ ಆಯೋಜಿಸಿರುವ ನಾಟಕೋತ್ಸವ ‘ದಶರಂಗ ಸಂಭ್ರಮ’ವು ದಿನಾಂಕ 21-03-2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗ ಮಾಂತ್ರಿಕ ಡಾ. ಜೀವನ್ ರಾಮ್ ಸುಳ್ಯ ಇವರು ಮಾತನಾಡಿ “ನಾಟಕದ ಸ್ವಾದ ಮನಸ್ಸಿನ ಒತ್ತಡ ಹಾಗೂ ಬದುಕಿನ ಜಂಜಾಟವನ್ನು ಮರೆಸುವಲ್ಲಿ ನೆರೆವಾಗುತ್ತದೆ. ಕಲಾಭಿರುಚಿಯನ್ನು ಹೊಂದಿರುವ ಕಾರ್ಕಳದ ಜನತೆ ಸಂಗೀತ ನಾಟಕ ಇತ್ಯಾದಿ ಲಲಿತ ಕಲೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ” ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ರಂಗಸಂಸ್ಕೃತಿಯ ಅಧ್ಯಕ್ಷರಾದ ಉದ್ಯಮಿ ಎಸ್. ನಿತ್ಯಾನಂದ ಪೈ ವಹಿಸಿದ್ದರು. ಈ ಸಂದರ್ಭದಲ್ಲಿ ನಾಟಕೋತ್ಸವದ ಪ್ರೋತ್ಸಾಹಕರಾದ ರೊಟೇರಿಯನ್ ವೈ. ಮೋಹನ್ ಶೆಣೈ, ಉದ್ಯಮಿ ನಿಟ್ಟೆ ಅರುಣ್ ಕುಮಾರ್ ಹಾಗೂ ನಾಟಕ ನಿರ್ದೇಶಕರಾದ ಡಾ. ಜೀವನ್ ರಾಮ್ ಸುಳ್ಯ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ರಂಗಸಂಸ್ಕೃತಿಯ ಉಪಾಧ್ಯಕ್ಷರಾದ ರಾಮಚಂದ್ರ ಟಿ. ನಾಯಕ್, ರಮಿತಾ ಶೈಲೇಂದ್ರ ರಾವ್ ಸಹ ಸಂಚಾಲಕರಾದ ನಾಗೇಶ್ ನಲ್ಲೂರು ಉಪಸ್ಥಿತರಿದ್ದರು. ಸಂಚಾಲಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪ್ರಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಜಾಲ್ಸೂರು ನಿರೂಪಿಸಿ, ಶಿವ ಸುಬ್ರಹ್ಮಣ್ಯ ಭಟ್ ಮತ್ತು ದೇವದಾಸ್ ನಾಯಕ್ ಸಹಕರಿಸಿದರು.
ಆರಂಭದಲ್ಲಿ ‘ವಿಹಾನಾ’ ಮೆಲೋಡೀಸ್ ತಂಡದ ನಿರ್ದೇಶಕಿ ಗಾಯಕಿ ರಮ್ಯಾ ಸುಧೀಂದ್ರ ಮತ್ತು ಗಾಯಕ ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಹಳೆಯ ಹಾಡುಗಳನ್ನು ಹಾಡಿ ರಂಜಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಇವರು ಅಭಿನಯಿಸಿರುವ ವೈದೇಹಿ ರಚಿತ ಡಾ. ಜೀವನ್ ರಾಮ್ ಸುಳ್ಯ ನಿರ್ದೇಶನದ ‘ನಾಯಿಮರಿ’ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.