ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಅಫ್ ಹೈಯರ್ ಎಜುಕೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗೋವಿಂದ ಪೈ ಅವರ 141ನೇ ಜನ್ಮದಿನೋತ್ಸವದಂದು ‘ಕನಕ ಚಿಂತನ ವಿಸ್ತರಣೆ’ ಉಪನ್ಯಾಸ ಕೃತಿಯು ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ‘ಧ್ವನ್ಯಾಲೋಕ’ದಲ್ಲಿ ದಿನಾಂಕ 23-03-2024ರಂದು ಲೋಕಾರ್ಪಣೆಗೊಂಡಿತು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ “ಈ ಕೃತಿಯು ಧರ್ಮವನ್ನು ತುಂಡು ತುಂಡಾಗಿ ನೋಡದೇ ಸಂಸ್ಕೃತಿಯೊಂದಿಗೆ ಧರ್ಮವನ್ನು ಬೆಸೆದ ವಿಶ್ವಾತ್ಮಕತೆಯ ಚಿಂತನೆ. ಆದರೆ ಇಂದು ಇಂತಹ ವಿಶಾಲ ಮನೋಧರ್ಮ ಇಲ್ಲವಾಗಿದ್ದು ಸಂಕುಚಿತತೆ ಮರೆದಾಡುತ್ತಿದೆ, ಕ್ಷಮಾಗುಣ ಎಲ್ಲೂ ಕಾಣುತ್ತಿಲ್ಲ. ಗೋವಿಂದ ಪೈ ಅವರು ಇಡೀ ಜಗತ್ತನ್ನು ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಸ್ಥಳೀಯವಾಗಿ ಸಮಗ್ರತೆಯೊಂದಿಗೆ ಜಗತ್ತಿನೆಡೆಗೆ ಸಾಗುವ ದೃಷ್ಟಿಕೋನ ಬರಬೇಕು. ಇದಕ್ಕೆ ಗೋವಿಂದ ಪೈ ಅವರ ಸಾಹಿತ್ಯಗಳೇ ನಿದರ್ಶನ ಎಂದು ಬಣ್ಣಿಸಿದರು. 1883ರಲ್ಲಿ ಜನಿಸಿದ ಅವರು 1963ರಲ್ಲಿ ಕಾಲವಾದರು. ಈಗ ಇದ್ದಿದ್ದರೆ 141 ವರ್ಷ ಆಗುತ್ತಿತ್ತು. ಕನ್ನಡಕ್ಕೆ ಮೊದಲ ರಾಷ್ಟ್ರಕವಿ ಪಟ್ಟ ತಂದುಕೊಟ್ಟ ಗೋವಿಂದ ಪೈ ವರ್ಷಕ್ಕೊಮ್ಮೆ ನೆನಪಾಗುವ ವ್ಯಕ್ತಿತ್ವವಲ್ಲ. ಅವರು ಪ್ರಾತ: ಸ್ಮರಣೀಯರು. ಅವರ ವಿಶ್ವಬಂಧುತ್ವದ ಆಶಯ ನಮ್ಮೆಲ್ಲರ ಬದುಕಿನ ಭಾಗವಾಗಬೇಕು. ಅನಾಥವಾಗಿದ್ದ ಅವರ ಸಾಹಿತ್ಯಕ್ಕೆ ಹೊಸ ರೂಪ ನೀಡಿದ್ದು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಕು.ಶಿ. ಹರಿದಾಸ ಭಟ್ಟರು. ಗೋವಿಂದ ಪೈ ಅವರ ಕುಟುಂಬದವರೊಂದಿಗೆ ಮಾತನಾಡಿ ಅವರ ಐದು ಸಾವಿರ ಕೃತಿಗಳನ್ನು ಉಡುಪಿಗೆ ತಂದು ಎಂ.ಜಿ.ಎಂ.ನಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಿಸಿ ಆ ಮೂಲಕ ಅಧ್ಯಯನಕ್ಕೆ ಭಾಷ್ಯ ಬರೆದರು. ಹೀಗಾಗಿ ಗೋವಿಂದ ಪೈ ಮತ್ತು ಕು.ಶಿ. ಹರಿದಾಸ ಭಟ್ ಇಬ್ಬರೂ ಸ್ಮರಣೀಯರು. ಇದೀಗ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಗೋವಿಂದ ಪೈ ಸಂಶೋಧನ ಸಂಪುಟದ ಪರಿಷ್ಕರಣೆ, ಮರುಮುದ್ರಣಕ್ಕೆ ಸಿದ್ಧವಾಗುತ್ತಿದೆ. ಗೋವಿಂದ ಪೈ ಅವರ ಮೂಲಕ ಗಾಂಧಿ ನೆನಪು ಮಾಡಬೇಕು. ಶ್ರೀಕೃಷ್ಣ, ಬುದ್ಧ, ಯೇಸು, ಗಾಂಧೀಜಿ ಹೀಗೆ ಎಲ್ಲರನ್ನು ತಮ್ಮ ಸಾಹಿತ್ಯದಲ್ಲಿ ತಂದಿದ್ದರು” ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ವಿ. ನಾವಡ ಅವರು ಗೋವಿಂದ ಪೈ ಅವರ ಸಾಹಿತ್ಯಾತ್ಮಕ ಬದುಕಿನ ಬಗ್ಗೆ ಬೆಳಕು ಚೆಲ್ಲಿದರು. ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರು ‘ತುಳುವ ಇತಿಹಾಸ ಗೋವಿಂದ ಪೈ ಅವರ ದೃಷ್ಟಿಸೃಷ್ಟಿ’ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಶಿವಾಜಿ ಜೋಯಿಸ್ ಅವರು ‘ಗೋವಿಂದ ಪೈ ಸಾಹಿತ್ಯಿಕ ಕೊಡುಗೆ : ಅಲಭ್ಯ ಬರಹಗಳು – ಕೆಲವು ಟಿಪ್ಪಣಿಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಉಪಸ್ಥಿತರಿದ್ದರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ಯಕ್ಷಗಾನ ಕೇಂದ್ರ ಇಂದ್ರಾಳಿಯ ಗುರು ಉಮೇಶ್ ಸುವರ್ಣ ಯಕ್ಷಗಾನ ಶೈಲಿಯಲ್ಲಿ ಗಣಪತಿ ಸ್ತುತಿ ಹಾಡಿದರು. ಎಂ.ಜಿ.ಎಂ. ಕಾಲೇಜು ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿ ವಂದಿಸಿದರು.