ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 01-04-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಪ್ರಕೃತಿ ಮರೂರು ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್‌ನಲ್ಲಿ 1ನೇ ವರ್ಷದ ಬಿ.ಇ ವಿದ್ಯಾರ್ಥಿನಿಯಾದ ಪ್ರಕೃತಿ ಮರೂರು ಇವರು ಪ್ರಶಾಂತ್ ಜಿ.ಎನ್. ಮತ್ತು ಶ್ರೀಮತಿ ಕೀರ್ತಿ ಪಿ. ದಂಪತಿಗಳ ಸುಪುತ್ರಿ. ಕಳೆದ 12 ವರ್ಷಗಳಿಂದ ಮೂಡುಬಿದಿರೆಯ ಆರಾಧನಾ ನೃತ್ಯ ಕೇಂದ್ರದ ನಿರ್ದೇಶಕಿಯಾದ ವಿದುಷಿ ಶ್ರೀಮತಿ ಸುಖದಾ ಬರ್ವೆಯವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿ ಇದೀಗ ವಿದ್ವತ್ ಪೂರ್ವ ಪರೀಕ್ಷೆಯ ತಯಾರಿಯಲ್ಲಿದ್ದಾರೆ. ಗುರು ಶ್ರೀ ಶಿವಕುಮಾರ್ ಮೂಡುಬಿದಿರೆ ಅವರ ಬಳಿ ಯಕ್ಷಗಾನವನ್ನು ಅಭ್ಯಾಸಿಸುತ್ತಿದ್ದು, ಕಾಸರಗೋಡು ಸೇರಿದಂತೆ 300ಕ್ಕೂ ಅಧಿಕ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಇವರದು.
‘ಬಾಲ ಪ್ರತಿಭಾ ಗೌರವ-2018’, ‘ಯುವ ಸಾಂಸ್ಕೃತಿಕ ಸಾಧಕ ಪ್ರಶಸ್ತಿ’, ‘ಕಲಾಸಿರಿ ಪ್ರಶಸ್ತಿ-2018’, ‘ತೌಳವ ಕುಮಾರಿ ಪ್ರಶಸ್ತಿ’, ‘ಪ್ರೇರಣಾ ಪ್ರಶಸ್ತಿ- 2019’, 2019ರಲ್ಲಿ ರಾಜ್ಯ ಮಟ್ಟದ ‘ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ’, ‘ಕಾಸರಗೋಡು ಮಕ್ಕಳ ದಸರಾ ಗೌರವ ಪ್ರಶಸ್ತಿ’, ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಶಾಸ್ತ್ರೀಯ ನೃತ್ಯೋತ್ಸವ – ‘ನೃತ್ಯ ಮಾಣಿಕ್ಯ ಸಮ್ಮಾನ್ 2019’, ಬೆಂಗಳೂರಿನ ಕಲ್ಪತರು ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಯಕ್ಷಗಾನದಲ್ಲಿ ಪ್ರಥಮ ಸ್ಥಾನ, ಭರತನಾಟ್ಯದಲ್ಲಿ 3ನೇ ಸ್ಥಾನ, ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಬಂಟಕಲ್ ಉಡುಪಿಯಲ್ಲಿ ನಡೆದ ಅಂತರ ಕಾಲೇಜು ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಜ್ಯಮಟ್ಟದ ‘ಕಲಾಶ್ರೀ’ ಸ್ಪರ್ಧೆಗೆ ಆಯ್ಕೆ, ಧಾರವಾಡದಲ್ಲಿ ‘ಕರುನಾಡ ರಾಜ್ಯೋತ್ಸವ ಪ್ರಶಸ್ತಿ – 2019’, ವಿಶ್ವ ಕನ್ನಡ ಬಳಗ (ರಿ.) ಹುಬ್ಬಳ್ಳಿಯಿಂದ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ – 2020’, ‘ಕರ್ನಾಟಕ ಕಲಾ ರತ್ನ’, ಗದಗದಲ್ಲಿ ‘ರಾಷ್ಟ್ರೀಯ ಕಲಾ ಮಾಣಿಕ್ಯ’, ಬೆಂಗಳೂರಿನಲ್ಲಿ ‘ಸಿರಿಗನ್ನಡ ರಾಷ್ಟ್ರೀಯ ನಾಟ್ಯಭೂಷಣ’ ಪ್ರಶಸ್ತಿಗಳನ್ನು ಪಡೆದ ಇವರು ‘ಎನ್‌ಸಿಸಿ ಬಿ ಪ್ರಮಾಣಪತ್ರ’ ಹೊಂದಿರುತ್ತಾರೆ.