ಬೈಂದೂರು : ಲಾವಣ್ಯ ಬೈಂದೂರಿನ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಸಹಯೋಗದಲ್ಲಿ ಜಗದೀಶ ಮಯ್ಯ ಇವರ ಪ್ರಾಯೋಜಕತ್ವದಲ್ಲಿ ‘ಯಕ್ಷ ಲಾವಣ್ಯ-24’ ಸರಣಿ ಕಾರ್ಯಕ್ರಮವು ದಿನಾಂಕ 30-03-2024ರ ಶನಿವಾರದಂದು ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ ಮಾತನಾಡಿ “ತಾಳಮದ್ದಲೆ ಬಹಳ ಕಡಿಮೆಯಾಗುತ್ತಿದ್ದು ಹಿಂದೆಲ್ಲಾ ಮನೆಯ ಜಗುಲಿಯಲ್ಲಿ, ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಪೂರ್ತಿ ರಾತ್ರಿಯಿಂದ ಬೆಳಿಗ್ಗಿನ ತನಕ ನಡೆಯುತ್ತಿತ್ತು. ಆದರೆ ಈಗ ಬದಲಾದ ಕಾಲಘಟ್ಟಕ್ಕೆ ಹೊಂದಿಕೊಂಡು ಕಾಲ ಮಿತಿಯಲ್ಲಿ ನಡೆಸುವಂತಾಗಿದೆ. ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ತಾಳಮದ್ದಲೆ ಹಾಗೂ ಯಕ್ಷಗಾನ ಜನರಿಂದ ದೂರವಾಗುತ್ತಿದೆ. ಹಿಮ್ಮೇಳ ಮತ್ತು ಅರ್ಥದಾರಿಗಳು ಮಾತ್ರ ಸಾಕಾಗುವ ಅತ್ಯಂತ ಸರಳ ರಂಗಭೂಮಿಯಾದ ತಾಳಮದ್ದಲೆಗೆ ಅದರದ್ದೇ ಆದ ಶ್ರೋತೃವರ್ಗ ಇರುವುದರಿಂದ ಜೀವಂತ ಕಲೆ ನಶಿಸದು ಎಂಬ ಭರವಸೆ ನೀಡುತ್ತದೆ.” ಎಂದರು.
ಲಾವಣ್ಯದ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅರ್ಥಧಾರಿ ಉಜಿರೆ ಅಶೋಕ ಭಟ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ದೇವಾಡಿಗ ಯಡ್ತರೆ, ಕಾರ್ಯದರ್ಶಿ ಚಂದ್ರ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು. ಮಂಜುನಾಥ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಭೃಗುಶಾಪ’ ಯಕ್ಷಗಾನ ತಾಳಮದ್ದಳೆ ನಡೆಯಿತು.