ಸುಳ್ಯ : ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡದ ಸಾಹಿತಿ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರ ಜನ್ಮ ಶತಮಾನೋತ್ಸವ ಆಚರಣೆ ಹಾಗೂ ಅವರ ಹೆಸರಿನಲ್ಲಿ ಎಲ್.ಎಸ್.ಎಸ್. ವಿದ್ಯಾನಿಧಿಯ ಸ್ಥಾಪನೆಯ ಕಾರ್ಯಕ್ರಮವು ದಿನಾಂಕ 06-04-2024ರಂದು ನಡೆಯಲಿದೆ.
ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರ ಜನ್ಮ ಶತಮಾನೋತ್ಸವದ ಸಂದರ್ಭ ಕನ್ನಡ ಮಾಧ್ಯಮದ ಸ್ನೇಹ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕಾಗಿ ಎಲ್.ಎಸ್.ಎಸ್. ವಿದ್ಯಾನಿಧಿಯ ಸ್ಥಾಪಿಸಲು ಅವರ ಕುಟುಂಬದವರು ಮುಂದೆ ಬಂದಿದ್ದು, ಭಾರತಿ ಶೇಷಗಿರಿ ರಾವ್ ಅವರು ವಿದ್ಯಾನಿಧಿ ಸಮರ್ಪಣೆ ಮಾಡಲಿದ್ದಾರೆ. ಶೇಷಗಿರಿ ರಾವ್ ಅವರ ಸಾಂಸ್ಕೃತಿಕ ಕೊಡುಗೆಗಳ ಕುರಿತು ಸಾಹಿತಿ ಹಾಗೂ ಶಿಕ್ಷಣ ತಜ್ಞ ಶ್ರೀ ಅರವಿಂದ ಚೊಕ್ಕಾಡಿ ಉಪನ್ಯಾಸ ನೀಡಲಿರುವರು. ಬೆಂಗಳೂರಿನ ಚಿಂತಕ ಹಾಗೂ ಕನ್ನಡಪರ ಹೋರಾಟಗಾರ ಶ್ರೀ ರಾ.ನಂ. ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಕಾರ್ಯಕ್ರಮವಾಗಿ ಜರ್ಮನಿಯ ಹೋಮ ತಜ್ಞ ಡಾ. ಉಲ್ರಿಕ್ ಬರ್ಕ್ ಅವರು ‘ಅಗ್ನಿಹೋತ್ರದ ಮಹತ್ವ’ದ ಬಗ್ಗೆ ಉಪನ್ಯಾಸ ನೀಡಲಿದ್ದು, ಅದೇ ದಿನ ಸ್ನೇಹ ಶಾಲೆಯ ಸೂರ್ಯಾಲಯದಲ್ಲಿ ಅಗ್ನಿಹೋತ್ರ ನಡೆಸಲಿದ್ದಾರೆ. ಡಾ. ಉಲ್ರಿಕ್ ಬರ್ಕ್ ಯುರೋಪ್ ಮತ್ತು ಏಶಿಯಾದ ವಿಶ್ವವಿದ್ಯಾಲಯಗಳಲ್ಲಿ ವೇದ ಜ್ಞಾನ ಪ್ರಸಾರ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಪರಿಸರ ತಜ್ಞ ದೆಹಲಿಯ ಅರುಣ್ ಕಶ್ಯಪ್ ಅವರೊಂದಿಗೆ ಸ್ನೇಹ ಸಂಸ್ಥೆಗೆ ಭೇಟಿ ನೀಡಲಿದ್ದಾರೆ.
ಪ್ರೊ. ಎಲ್.ಎಸ್. ಶೇಷಗಿರಿರಾವ್ :
ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಕನ್ನಡ ಸಾಹಿತ್ಯಲೋಕದಲ್ಲಿ ಎಲ್.ಎಸ್.ಎಸ್. ಎಂದೇ ಪ್ರಸಿದ್ದರು. ಬಹುಮುಖ ನೆಲೆಯಲ್ಲಿ ಕನ್ನಡ ಸೇವೆ ಸಲ್ಲಿಸಿದ ಅವರು, ಕನ್ನಡ ಸಾಹಿತ್ಯ ವಿಮರ್ಶೆಗೆ ಭದ್ರ ಬುನಾದಿ ಹಾಕಿದವರು. ಎಲ್.ಎಸ್.ಎಸ್. ಕಥೆ, ವ್ಯಕ್ತಿ ಚಿತ್ರ, ಮಕ್ಕಳ ಸಾಹಿತ್ಯಗಳನ್ನೂ ರಚಿಸಿದ್ದಾರೆ. ಶ್ರೇಷ್ಟ ಅನುವಾದಕರು. ಕನ್ನಡದಿಂದ ಇಂಗ್ಲೀಷ್‌ಗೆ, ಇಂಗ್ಲೀಷ್ ನಿಂದ ಕನ್ನಡಕ್ಕೆ ಉತ್ತಮ ಕೃತಿಗಳನ್ನು ಅನುವಾದಿಸಿದ್ದಾರೆ. ಅವರು ರಚಿಸಿದ ‘ ಇಂಗ್ಲೀಷ್ ಸಾಹಿತ್ಯ ಚರಿತ್ರೆ, ‘ಹೊಸಗನ್ನಡ ಸಾಹಿತ್ಯ ಚರಿತ್ರೆ,’ ‘ಗ್ರೀಕ್ ರಂಗಭೂಮಿ ಮತ್ತು ನಾಟಕ’ ಇವು ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ರಾಯರು ಕನ್ನಡ ಸಾಹಿತ್ಯದ ಹಿರಿಮೆಯನ್ನು ಇಂಗ್ಲೀಷ್‌ನಲ್ಲಿ ಬರೆದು ಹೊರ ಜಗತ್ತಿಗೆ ಪರಿಚಯಿಸಿದವರು. ನಿಘಂಟುಗಳನ್ನು ರಚಿಸಿದ್ದಾರೆ. 1947ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಕನ್ನಡ ಕೆಲಸಕ್ಕೆ ಅಡಿಯಿಟ್ಟ ಅವರು ತಮ್ಮ ಜೀವಿತದ ಅಂತಿಮ ಕ್ಷಣದವರೆಗೂ ‘ಕನ್ನಡ-ಕನ್ನಡಿಗ-ಕರ್ನಾಟಕ’ಗಳ ಬಗ್ಗೆ ಚಿಂತಿಸಿದವರು.
1981ರಲ್ಲಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿಯಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ, ‘ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ’ ಹಾಗೂ ಹಲವು ಪ್ರತಿಷ್ಠಿತ ಸಾಹಿತ್ಯ ಯೋಜನೆಗಳ ಸಂಪಾದಕರಾಗಿ ಸಲ್ಲಿಸಿದ ಸೇವೆ ಅಪಾರ – ಅಪೂರ್ವ. ಗೋಕಾಕ್ ಚಳವಳಿಯ ಕಾಲದಿಂದ ಕನ್ನಡನಾಡು-ನುಡಿಗಳ ರಕ್ಷಣೆಗೆ ಹೋರಾಟಗಳಲ್ಲೂ ಪಾಲ್ಗೊಂಡವರು.
ಎಲ್.ಎಸ್.ಎಸ್. ಅವರ ಸಿದ್ದಿ ಸಾಧನೆಗಳಿಗೆ ಮೈಸೂರು ಸರ್ಕಾರದ ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, ಶ್ರೀ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ತೀ.ನಂ.ಶ್ರೀ ವಿಮರ್ಶೆ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.