ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 08-04-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಚಿನ್ಮಯೀ ಸುರತ್ಕಲ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ನೃತ್ಯ ವಿದುಷಿ ಭಾರತಿ ಸುರೇಶ್ ಹಾಗೂ ಸುರೇಶ್ ರಾವ್ ಪಿ. ಇವರ ಸುಪುತ್ರಿಯಾಗಿರುವ ಈಕೆ ಓರ್ವ ಪ್ರತಿಭಾವಂತ ಕಲಾವಿದೆ. ಪುಟ್ಟ ಮಗುವಾಗಿದ್ದಾಗ ಇಡುತ್ತಿದ್ದ ಬಾಲ ಹೆಜ್ಜೆಗಳನ್ನು ಭರತನಾಟ್ಯದ ಪ್ರೌಢ ಹೆಜ್ಜೆಗಳಾಗಿ ರೂಪುಗೊಳ್ಳಲು ಕಾರಣರಾಗಿರುವವರು ಇವಳ ಅಮ್ಮ ‘ಶ್ರೀ ಶಾರದಾ ನಾಟ್ಯಾಲಯ’ದ ನೃತ್ಯ ಗುರು ವಿದುಷಿ ಭಾರತಿ ಸುರೇಶ್. ತನ್ನ ಐದೂವರೆ ವ್ಯಯಸ್ಸಿನಿಂದಲೂ ಇಂದಿನವರೆಗೆ ನಿರಂತರ ಅಭ್ಯಾಸದಿಂದ ನೃತ್ಯದ ಸೂಕ್ಷ್ಮಗಳನ್ನು ಅರಿತು ನರ್ತಿಸುವ ಜಾಣೆ. ಭರತನಾಟ್ಯದ ಸೀನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಇದೀಗ ವಿದ್ವತ್ ಪರೀಕ್ಷೆಯ ತಯಾರಿಯಲ್ಲಿದ್ದಾಳೆ. ಈಕೆ ಕರ್ನಾಟಕದಾದ್ಯಂತ ಹಲವಾರು ಏಕವ್ಯಕ್ತಿ ಹಾಗೂ ಸಮೂಹ ನೃತ್ಯ ಪ್ರದರ್ಶನ ನೀಡಿರುತ್ತಾಳೆ.
ಚಿತ್ರಕಲೆ, ಕೀಬೋರ್ಡ್, ಯಕ್ಷಗಾನ, ಕುಣಿತ ಭಜನೆ, ವೀರಗಾಸೆ, ಕಂಗೀಲು ಕಲೆಯನ್ನೂ ಕರಗತ ಮಾಡಿಕೊಂಡಿರುವ ಇವರು ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಪಡೆದಿರುತ್ತಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ಶ್ರೀಮತಿ ಶೀಲಾ ದಿವಾಕರ್ ಇವರಲ್ಲಿ ಅಭ್ಯಾಸಿಸಿ ಇದೀಗ ಅವರ ಶಿಷ್ಯರಿಂದ ಸೀನಿಯರ್ ಪಾಠವನ್ನು ಕಲಿಯುತ್ತಿದ್ದಾರೆ. ಪ್ರಸ್ತುತ ಗೋವಿಂದ ದಾಸ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದು, ಕಾಲೇಜಿನ ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿರುವ ಈಕೆ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳಿಸಿರುತ್ತಾರೆ.