ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾ ಕೇಂದ್ರ ಹಾಗೂ ಲಲಿತ ಕಲಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ರಂಗಗೀತೆ ಗಾಯನ ಕಾರ್ಯಕ್ರಮವು ದಿನಾಂಕ 02-04-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಎಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಂಗಭೂಮಿಯ ವಿಕಾಸ, ರಂಗ ಭೂಮಿಯ ಪ್ರಕಾರಗಳು ಮತ್ತು ರೂಪಗಳು, ರಂಗ ಭೂಮಿಯ ಯಶಸ್ಸಿನಲ್ಲಿ ನಾಟಕಕಾರರು, ನಿರ್ದೇಶಕರು, ನಟರು ಮತ್ತು ವಿನ್ಯಾಸಕರ ಪಾತ್ರ, ರಂಗಭೂಮಿ ಸಂಸ್ಕೃತಿಯು ತೋರಿಸುವ ಜೀವನ ಮೌಲ್ಯಗಳು ಮತ್ತು ಸಾಮಾಜಿಕ ಸಮಸ್ಯೆಗಳು, ಜನಸಾಮಾನ್ಯರ ಮೇಲೆ ರಂಗಭೂಮಿಯ ಪ್ರಭಾವ, ಹಾಗೂ ರಂಗಭೂಮಿಯು ಶಕ್ತಿಯುತ ಶೈಕ್ಷಣಿಕ ಸಾಧನವಾಗಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ವಿಷಯಗಳ ಕುರಿತು ತಿಳಿಯಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ವಂದನೀಯ . ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ “ಡಿಜಿಟಲ್ ಮಾಧ್ಯಮಗಳ ಪ್ರಭಾವಕ್ಕೊಳಗಾದ ಜನತೆಯು ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ಬಗ್ಗೆ ಹೆಚ್ಚಿನ ಒಲವು ತೋರಿಸಬೇಕಾದ ಅಗತ್ಯ ಇದೆ. ನಮ್ಮ ಬಾಲ್ಯದಲ್ಲಿ ನಾವು ನೋಡಿದ ನಾಟಕದ ಒಂದು ಪುಟ್ಟ ಪಾತ್ರ ಅಥವಾ ನಾವು ಎಂದೂ ಮರೆಯದೆ ಗುನುಗುತ್ತಿರುವ ಹಾಡಿನ ಸಾಲುಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರಬಲ್ಲವು. ರಂಗಭೂಮಿ ಕಲೆಯನ್ನು ಬೆಂಬಲಿಸುವುದು ಎಂದರೆ ನಮ್ಮ ಗ್ಯಾಜೆಟ್‌ಗಳನ್ನು ತ್ಯಜಿಸುವುದು ಎಂದಲ್ಲ; ಬದಲಿಗೆ, ತಂತ್ರಜ್ಞಾನದ ಬಳಕೆಯಿಂದ ರಂಗಭೂಮಿಯನ್ನು ಬಲಪಡಿಸಬಹುದಾಗಿದೆ. ರಂಗಭೂಮಿ ಮೂಲಕ ವಿಜಯಗಳು, ದುರಂತಗಳು, ನಮ್ಮ ಆಕಾಂಕ್ಷೆಗಳು ಮತ್ತು ಸಾಮಾಜಿಕ ಪಿಡುಗುಗಳು ಮುಂತಾದ ವಿಷಯಗಳನ್ನು ಅಧ್ಬುತವಾಗಿ ವಿವರಿಸಬಹುದಾಗಿದೆ. ರಂಗ ಕಲೆಯು ಭಾಷೆ, ಭೌಗೋಳಿಕತೆ ಅಥವಾ ಸಿದ್ಧಾಂತದ ಅಡೆತಡೆಗಳನ್ನು ಮೀರುವ ಅಪ್ರತಿಮ ಶಕ್ತಿಯನ್ನು ಹೊಂದಿದೆ. ಇಲ್ಲಿ ಕಲಾವಿದನು ಪ್ರೇಕ್ಷಕರ ಹೃದಯಗಳೊಡನೆ ಮಾತನಾಡುತ್ತಾನೆ” ಎಂದು ಹೇಳಿದರು. ನಂತರ ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮವು ನಡೆಯಿತು.
ಹೃಷಿತಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಯಕ್ಷಕಲಾ ಕೇಂದ್ರದ ಸಂಯೋಜಕರಾದ ಪ್ರಶಾಂತ್ ರೈ ಸ್ವಾಗತಿಸಿ ಪ್ರಾಸ್ತಾವಿಕನುಡಿಗಳನ್ನಾಡಿದರು. ಕಾಲೇಜಿನ ಯಕ್ಷಾಮೃತ ಕಾರ್ಯಕ್ರಮದ ಸಂಯೋಜಕರಾದ ಪುನೀತ್ ರಾಜ್ ವಂದಿಸಿದರು.