“ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ”
– ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ
ಕನ್ನಡವನ್ನು ಬೌಧಿಕವಾಗಿ ಮತ್ತೊಂದು ಶಿಖರಕ್ಕೆ ಏರಿಸಿ ನವೋದಯ ಸಾಹಿತ್ಯಕ್ಕೆ ಸಾಮಗಾನ ಹಾಡಿದ, ದೇಶ ಕಂಡ ಅಪರೂಪದ ಸಾಹಿತಿ ಡಾ. ಜಿ. ಎಸ್. ಶಿವರುದ್ರಪ್ಪನವರು. ಶಿವರುದ್ರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಫೆಬ್ರವರಿ 7, 1926ರಂದು ಗುಗ್ಗುರಿ ಶಾಂತ ವೀರಪ್ಪ ಮತ್ತು ವೀರಮ್ಮನವರ ಪುತ್ರನಾಗಿ ಜನಿಸಿದರು. ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ತಂದೆ ಶಾಂತ ವೀರಪ್ಪನವರಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಇವರು ಬಾಲ್ಯದಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಅಧ್ಯಯನ ಮತ್ತು ಸಾಹಿತ್ಯದಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಶಾಲಾ ಉಪಾಧ್ಯಾಯರ ಮಗನಾದ ಜಿ. ಎಸ್. ಎಸ್. (ಗುಗ್ಗರಿ ಶಾಂತ ವೀರಪ್ಪ ಶಿವರುದ್ರಪ್ಪ) ಅವರು ಎಸ್.ಎಸ್.ಎಲ್.ಸಿ. ಮುಗಿಯುತ್ತಿದ್ದಂತೆ ಬಡತನದಿಂದಾಗಿ ಸರಕಾರಿ ನೌಕರಿ ಹಿಡಿದು ದುಡಿಯಲಾರಂಭಿಸಿದರು. ಗುಬ್ಬಿ ತಾಲೂಕು ಕಛೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇ ಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಓದನ್ನು ಮುಂದುವರಿಸಿ 1949ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನು ಹಾಗೂ 1953ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದು, ವಿದ್ಯಾಭ್ಯಾಸದ ಹಂತದಲ್ಲಿ ಮೂರು ಚಿನ್ನದ ಪದಕಗಳನ್ನು ತನ್ನ ಬಗಲಿಗೇರಿಸಿಕೊಂಡರು.
ಶಿವರುದ್ರಪ್ಪನವರು ಕುವೆಂಪುರವರ ವಿದ್ಯಾರ್ಥಿ ಮತ್ತು ಅನುಯಾಯಿಯಾಗಿದ್ದು ಅವರ ಸಾಹಿತ್ಯ ಕೃತಿಗಳು ಮತ್ತು ಜೀವನದಿಂದ ಪ್ರೇರೇಪಿತರಾಗಿದ್ದರು. 1965ರಲ್ಲಿ ಶಿವರುದ್ರಪ್ಪನವರು ಕುವೆಂಪುರವರ ಮಾರ್ಗದರ್ಶನದಲ್ಲಿ ಬರೆದ ಸೌಂದರ್ಯ ಸಮೀಕ್ಷೆಗಾಗಿ ಗೌರವ ಡಾಕ್ಟರೇಟ್ ಪಡೆದರು. ಇದು ಸಾಹಿತ್ಯಿಕ ಸೌಂದರ್ಯ ಶಾಸ್ತ್ರದ ಕ್ಷೇತ್ರದಲ್ಲಿ ಪ್ರವರ್ತಕ ಕೃತಿಯಾಗಿದೆ.
ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ದುಡಿದರು. ಮುಂದೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ನವೋದಯ ಕವಿಯಾಗಿರುವ ಇವರು ಕನ್ನಡ ಸಾಹಿತ್ಯಕ್ಕೆ ಹಲವಾರು ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ. ಸಾಮಗಾನ, ತೆರೆದ ದಾರಿ, ಕಾಡಿನ ಕತ್ತಲಲ್ಲಿ, ದೀಪದ ಹೆಜ್ಜೆ ಎಂಬ ಸುಮಾರು 13 ಕವನ ಸಂಕಲನಗಳನ್ನು… ಗತಿಬಿಂಬ, ಕುವೆಂಪು ಪುನರವಲೋಕನ, ಕನ್ನಡ ಸಾಹಿತ್ಯ ಸಮೀಕ್ಷೆ, ನವೋದಯಗಳಂತ ಸುಮಾರು 16 ವಿಮರ್ಶೆ ಗ್ರಂಥಗಳನ್ನು… ಗಂಗೆಯ ಶಿಖರಗಳಲ್ಲಿ, ಅಮೇರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ, ಮಾಸ್ಕೋದಲ್ಲಿ 22 ದಿನ ಎಂಬ 4 ಪ್ರವಾಸ ಕಥನಗಳನ್ನು… ಒಂದು ವ್ಯಕ್ತಿ ಚಿತ್ರವನ್ನು ಹಾಗೂ ಹಲವಾರು ಸಂಪಾದಿತ ಗ್ರಂಥಗಳ ಅನುವಾದವನ್ನು ಪ್ರಕಟಿಸಿದ್ದಾರೆ. ಹಸ್ತ ಪ್ರತಿಗಳ ಸಂಗ್ರಹಣೆ ಮತ್ತು ಅವುಗಳ ರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ಇವರಿಗಿತ್ತು. 1971ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಹಸ್ತ ಪ್ರತಿ ವಿಭಾಗ ಪ್ರಾರಂಭಿಸಿದರು. ಕೇವಲ 4 ವರ್ಷಗಳಲ್ಲಿ 3000ಕ್ಕೂ ಹೆಚ್ಚಿನ ಓಲೆ ಗರಿಯ ಮತ್ತು 1000ಕ್ಕೂ ಹೆಚ್ಚಿನ ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆ ಇವರ ಸಾಹಿತ್ಯ ಕೃಷಿಯ ಬಗೆಗಿನ ಆಸಕ್ತಿಯನ್ನು ತೋರಿಸುತ್ತದೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಇವರ ಸಾಹಿತ್ಯ ಸೇವೆಗೆ ನೂರಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. 2006ರ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ದಿನವಾದ ಕರ್ನಾಟಕದ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಕರ್ನಾಟಕ ಸರಕಾರದಿಂದ ಜಿ.ಎಸ್. ಶಿವರುದ್ರಪ್ಪನವರಿಗೆ ರಾಷ್ಟ್ರ ಕವಿ ಬಿರುದು ನೀಡಿ ಗೌರವಿಸಲಾಯಿತು. ಶಿವರುದ್ರಪ್ಪನವರು ಗೋವಿಂದ ಪೈ, ಕುವೆಂಪು ನಂತರ ಮೂರನೇ ರಾಷ್ಟ್ರ ಕವಿಯಾಗಿ ಕನ್ನಡಿಗರ ಹೆಮ್ಮೆಯಾಗಿದ್ದಾರೆ.
“ನಾನು ಸತ್ತ ಮೇಲೆ ಧಾರ್ಮಿಕ ಆಚರಣೆಯ ನೆಪದಲ್ಲಿ ಒಂದು ಜಾತಿಗೆ ಸೀಮಿತ ಮಾಡಬೇಡಿ, ನಾನು ಈ ನಾಡಿನ ಅಷ್ಟೂ ಸಮುದಾಯಕ್ಕೆ ಸೇರಲು ಬಯಸುತ್ತೇನೆ. ಇನ್ನು ನನ್ನನ್ನು ಮಣ್ಣುಮಾಡಿ ಭೂಮಿಯನ್ನು ಬಂಜೆ ಮಾಡಬೇಡಿ. ಆದರೆ ನನ್ನ ಅಸ್ತಿಯನ್ನು ಕಾವೇರಿ ನದಿಯಲ್ಲಿ ವಿಸರ್ಜಿಸುವುದನ್ನು ಮರೆಯಬೇಡಿ” ಎಂದು ಪುತ್ರ ಜಯದೇವ್ ಅವರಲ್ಲಿ ಹೇಳಿಕೊಂಡು ಅವರಲ್ಲಿದ್ದ ಸರಳತೆ, ಬದುಕನ್ನು ನೋಡುವ ನೆಲೆ ಮತ್ತು ವ್ಯಕ್ತಿಗಳ ನಡುವಿನ ಸಂಬಂಧ ಬೆಳೆಸುವ ವ್ಯಕ್ತತ್ವವನ್ನು ನಾವಿಲ್ಲಿ ಕಾಣಬಹುದು.
“ಹಣತೆ ಹಚ್ಚುತ್ತೇನೆ ನಾನು ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಭ್ರಮೆಯಿಂದಲ್ಲ, ನಾನು ಹಚ್ಚುವ ಹಣತೆ ಶಾಶ್ವತ ಎನ್ನುವ ಭ್ರಾಂತಿ ನನಗಿಲ್ಲ. ಆದರೂ ಹಣತೆ ಹಚ್ಚುತ್ತೇನೆ. ಇರುವಷ್ಟು ಹೊತ್ತು ನನ್ನ ಮುಖ ನೀನು, ನಿನ್ನ ಸುಖ ನಾನು ನೋಡುತ್ತೇನೆಂಬ ಒಂದು ಆಸೆಯಿಂದ” ಎನ್ನುವ ಜಿ.ಎಸ್. ಶಿವರುದ್ರಪ್ಪನವರ ಕವಿವಾಣಿ ನಮಗೆ ಸದಾ ಸ್ಪೂರ್ತಿ.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ರಾಯಭಾರಿಯಾಗಿ, ಒಬ್ಬ ಉತ್ತಮ ವಿಮರ್ಶಕ, ಸಂಶೋಧಕ, ನಾಟಕಕಾರ, ಪ್ರಬುದ್ಧ ಪ್ರಾಧ್ಯಾಪಕರಾಗಿ ಅಸಂಖ್ಯಾತ ಶಿಷ್ಯರನ್ನು ಬೆಳೆಸಿದ್ದ ಶಿವರುದ್ರಪ್ಪನವರು ಡಿಸೆಂಬರ್ 23, 2013ರಂದು ಸ್ವರ್ಗಸ್ಥರಾದರು.
ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ನೀಡಿದ ಇಂತಹ ಓರ್ವ ಮಹಾನ್ ವ್ಯಕ್ತಿತ್ವವನ್ನು ಅವರ ಜನ್ಮದಿನವಾದ ಇಂದು ಹೃದಯಪೂರ್ವಕ ಸ್ಮರಿಸಿಕೊಳ್ಳೋಣ. ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪನವರ ಕೃತಿಗಳು ಸಾಹಿತ್ಯಾಸಕ್ತರಿಗೆ ಸ್ಪೂರ್ತಿ ನೀಡಲಿ ಎಂಬುದು ನಮ್ಮೆಲ್ಲರ ಆಶಯ.