ಬೆಂಗಳೂರು : ಕರ್ನಾಟಕ ಪತ್ರಕರ್ತೆಯರ ಸಂಘ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಮಹಿಳಾ ದಿನಾಚರಣೆ ಸಮಾರಂಭ’ ಕಾರ್ಯಕ್ರಮವು ದಿನಾಂಕ 03-04-2024ರ ಬುಧವಾರದಂದು ಜ್ಞಾನಜ್ಯೋತಿ ಸಭಾಂಗಣದ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಐ.ಎ.ಎಸ್. ಅಧಿಕಾರಿ ನಾಗಾಂಬಿಕಾ ದೇವಿ ಮಾತನಾಡಿ “ಅನಕ್ಷರಸ್ಥ ಹೆಣ್ಣು ಮಕ್ಕಳಿಗೆ ಇರುವ ಧೈರ್ಯ ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಕಾಣುತ್ತಿಲ್ಲ. ವಿದ್ಯೆಯ ಜೊತೆಗೆ ಸಶಕ್ತರಾಗುವುದನ್ನು ಮಹಿಳೆಯರು ಕಲಿಯಬೇಕು. ಹೆಣ್ಮಕ್ಕಳನ್ನು ಓದಿಸುವುದು, ಅವರನ್ನು ಕೆಲಸಕ್ಕೆ ಕಳುಹಿಸುವುದೇ ಬಹಳ ದೊಡ್ಡ ಉಪಕಾರ ಎಂದು ಹೆಚ್ಚಿನ ಮನೆಗಳಲ್ಲಿ ಹಿರಿಯರು ತಿಳಿದುಕೊಂಡಿದ್ದಾರೆ. ಇಂಥ ಮನಃಸ್ಥಿತಿಯಿಂದ ಹೊರಬರಬೇಕು. ಐ.ಎ.ಎಸ್. ಅಧಿಕಾರಿಯಾಗಲಿ, ಪತ್ರಕರ್ತರಾಗಲಿ ಕೆಲಸದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಎಂಬುದಿಲ್ಲ. ಕೆಲಸ ಮಾಡುವ ಸ್ಥಳಗಳಲ್ಲಿ ಈ ತಾರತಮ್ಯ ಮತ್ಯಾಕೆ ಇರಬೇಕು. ದಾಸ್ಯ ಮನೋಭಾವದಿಂದ ಮಹಿಳೆಯರು ಹೊರಬರಬೇಕು. ಅವಕಾಶವನ್ನು ಬೇರೆಯವರು ನೀಡುವುದಲ್ಲ. ಅವಕಾಶ ಪಡೆಯುವುದು ನಿಮ್ಮ ಹಕ್ಕು” ಎಂದು ಪ್ರತಿಪಾದಿಸಿದರು.
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಬೃಂದಾ ಅಡಿಗ ಮಾತನಾಡಿ “ಎಲ್ಲಾ ಧರ್ಮಗಳ ಅಡಿಪಾಯ, ಮನೋಧರ್ಮ, ಚಿಂತನೆ ಪುರುಷ ಪ್ರಧಾನವಾಗಿದೆ. ಇದುವೇ ಜನರ ಯೋಚನೆ, ವರ್ತನೆ ಮತ್ತು ಭಾಷೆಯಲ್ಲಿ ವ್ಯಕ್ತವಾಗುತ್ತಿದೆ. ಬೈಗುಳದ ಭಾಷೆ ನೋಡಿದರೂ ಸ್ತ್ರೀ ನಿಂದನೆಯ ಭಾಷೆಯನ್ನೇ ಬಳಸಲಾಗುತ್ತದೆ. ಭಾಷೆಯ ಬಳಕೆಯ ರೀತಿ ಬದಲಾಗಬೇಕು. ಜಾತಿ ತಾರತಮ್ಯ ಮತ್ತು ತಿನ್ನುವ ಆಹಾರ, ಉಡುವ ಬಟ್ಟೆಯ ಕಾರಣಕ್ಕೆ ಮಾಡುವ ತಾರತಮ್ಯ ನಿಲ್ಲಬೇಕು. ಕೆಲಸ ಮಾಡುವ ಮಹಿಳೆಯರು ಮಧ್ಯೆ ವಿಶ್ರಾಂತಿ ಪಡೆಯುವುದನ್ನು ಕಲಿಯಬೇಕು. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಮಾನಸಿಕ ಆರೋಗ್ಯ ಕೂಡಾ ಬಹಳ ಮುಖ್ಯ” ಎಂದು ಹೇಳಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಮಾತನಾಡಿ, “ಮಾನಸಿಕ ಸಂಕೋಲೆಯಲ್ಲಿ ಎಲ್ಲರೂ ಸಿಲುಕಿದ್ದೇವೆ. ಈ ಸಂಕೋಲೆಯಿಂದ ಬಿಡುಗಡೆಯಾಗದೇ ಸಶಕ್ತರಾಗಲು ಸಾಧ್ಯವಿಲ್ಲ. ಇದು ಪುರುಷ ಮತ್ತು ಮಹಿಳೆ ಎರಡೂ ಕಡೆಯಿಂದಲೂ ಆಗಬೇಕು. ವೈಚಾರಿಕತೆ ಮತ್ತು ಪ್ರಜಾಸತ್ತಾತ್ಮಕ ಚಿಂತನೆಯಿಂದ ಸಮಾನತೆ ಸಾಧ್ಯ” ಎಂದು ತಿಳಿಸಿದರು.
ದೂರದರ್ಶನದ ಹಿರಿಯ ಪತ್ರಕರ್ತೆ ಗಾಯತ್ರಿ ಚಂದ್ರಶೇಖರ್, ಪ್ರಜಾವಾಣಿ ಉಪಸಂಪಾದಕಿ ಅನಿತಾ ಎಚ್., ಇಸ್ರೊ ಚಂದ್ರಯಾನ–3ರ ಉಪ ಯೋಜನಾ ನಿರ್ದೇಶಕಿ ರೂಪಾ ಎಂ.ವಿ., ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಕಾತ್ಯಾಯಿನಿ ಚಾಮರಾಜ್ ಅವರನ್ನು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ಟಿ. ಜವರೇಗೌಡ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಎನ್. ನರಸಿಂಹಮೂರ್ತಿ, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ಪದಾಧಿಕಾರಿಗಳಾದ ವಾಣಿಶ್ರೀ, ಚೇತನಾ ಬೆಳಗೆರೆ, ಶೀಲಾ ಶೆಟ್ಟಿ, ಶಾಂತಾ ತಮ್ಮಯ್ಯ, ಸಾದಿಯಾ ಹಲೀಮತ್ ಉಪಸ್ಥಿತರಿದ್ದರು.