ವಲಸೆ ಎಂಬುದು ಅನಾದಿ ಕಾಲದಿಂದ ಬಂದ ಪ್ರಕ್ರಿಯೆ. ಕಂಸ ಸಂಹಾರಕ್ಕಾಗಿ ಗೋಕುಲದಿಂದ ಮಥುರೆಗೆ ಬಂದ ಶ್ರೀಕೃಷ್ಣ, ಗೋಕುಲಕ್ಕೆ ಮತ್ತೆ ಮರಳಲೇ ಇಲ್ಲ. ಈಗಿನ ವಲಸೆ ವಿಧಾನಗಳೇ ಬೇರೆ. ಹಳ್ಳಿಗಳೆಲ್ಲ ನಗರಕ್ಕೆ ವಲಸೆ ಬಂದು, ಅವು ವೃದ್ಧಾಶ್ರಮಗಳಾದರೆ, ಅತಿ ಜನಸಾಂದ್ರತೆಯಿಂದ ನಗರಗಳು ಉಸಿರು ಕಟ್ಟಿಸುವ ನರಕಗಳಾಗುತ್ತಿವೆ.
ಇಂತಹದೇ ವಲಸೆಯ ಅಪಾಯದ ಕುರಿತು ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಾಟಕಕಾರ ಅಥೋಲ್ ಫಗಾರ್ಡ್ ಬರೆದ ನಾಟಕ “ದಿ ವ್ಯಾಲಿ ಸಾಂಗ್” ಡಾ. ಮೀರಾ ಮೂರ್ತಿಯವರು ಅದನ್ನು ‘ಕಣಿವೆಯ ಹಾಡು’ ಎನ್ನುವ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ.
ಮೈಸೂರಿನಲ್ಲಿ ನಟನ ರೆಪರ್ಟರಿ ತಂಡದವರು ಕಣಿವೆಯ ಹಾಡನ್ನು ಶ್ರೀಪಾದ ಭಟ್ ನಿರ್ದೇಶನದಲ್ಲಿ ರಂಗಕ್ಕೆ ತಂದಿದ್ದಾರೆ. ಅಜ್ಜ ಮತ್ತು ಮೊಮ್ಮಗಳ ಸಂವಾದದಲ್ಲಿ ಇಡೀ ನಾಟಕ ನಡೆಯುತ್ತಾ ಹೋಗುತ್ತದೆ. ಕಣಿವೆಯ ಸುಂದರ ಗದ್ದೆಗಳಲ್ಲಿ ಕೃಷಿ ಮಾಡಿಕೊಂಡು, ಎಲ್ಲಕ್ಕೂ ಹರಿ ಚಿತ್ತ ಎಂದು ನಂಬಿ ಬದುಕುವ ವೃದ್ಧ ಅಬ್ರಾಂ ಜೋಂಕರ್ಸ್ ತುಂಡು ಭೂಮಿಯಲ್ಲಿಯೇ ಗೇಣಿ ಮಾಡಿಕೊಂಡು ಜೀವನ ಸಾಗಿಸುವವ. ಅವನ ಮಗಳು ಪ್ರಿಯತಮನೊಂದಿಗೆ ಪಟ್ಟಣಕ್ಕೆ ಓಡಿ ಹೋಗಿ, ಹೆಣ್ಣುಮಗುವೊಂದನ್ನು ಹೆತ್ತು ಅಸುನೀಗುತ್ತಾಳೆ. ಅಬ್ರಾಂನ ಮಡದಿ ಆ ಮಗುವನ್ನು ಕಣಿವೆಗೆ ತಂದು, ಅಬ್ರಾಂನ ಕೈಗಿಟ್ಟು, ಸ್ವಲ್ಪ ಕಾಲದಲ್ಲೇ ಕಾಲವಶಳಾಗುತ್ತಾಳೆ. ಅಜ್ಜ ಮತ್ತು ಮೊಮ್ಮಗಳು ಕಣಿವೆಯಲ್ಲಿಯೇ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ.
ಚೈತನ್ಯದ ಚಿಲುಮೆಯಂತಿರುವ ಈ ವೆರೊನಿಕಾ ಅಜ್ಜನ ಕಣ್ಮಣಿಯಂತಿರುತ್ತಾಳೆ. ಅಜ್ಜ ಮತ್ತು ಮೊಮ್ಮಗಳ ಸಂವಾದ ಕಾಲದ ತೆರೆಯನ್ನು ಒಂದೊಂದಾಗಿ ಸರಿಸುತ್ತಾ ಸುಂದರ ಲೋಕವನ್ನು ಕಟ್ಟಿಕೊಡುತ್ತದೆ. ಅದ್ಭುತ ಕಂಠಸಿರಿಯನ್ನು ಹೊಂದಿದ ವೆರೊನಿಕಾ ಕಣಿವೆಯ ಕೊರಳಾಗಿ ಹಾಡುತ್ತಾ ಬೆಳೆಯುತ್ತಾಳೆ. ಹೀಗಿರುವಾಗ ಅವರ ಬದುಕಿನಲ್ಲೊಂದು ಸಂಚಲನವುಂಟಾಗುತ್ತದೆ. ಅಜ್ಜ ಗೇಣಿ ಮಾಡುತ್ತಿದ್ದ ಹೊಲದ ಮಾಲೀಕ ಅದನ್ನು ಬೇರೆಯವರಿಗೆ ಮಾರಲು ಇಚ್ಛಿಸುತ್ತಾನೆ. ಬದಲಾದ ವ್ಯವಸ್ಥೆಯಲ್ಲಿ ಅಜ್ಜನ ಉದ್ಯೋಗ ಅತಂತ್ರವಾಗುತ್ತದೆ.
ಬೆಳೆಯುತ್ತಿರುವ ವೆರೊನಿಕಾಗೆ ಅನಂತ ಅವಕಾಶಗಳಿರುವ ನಗರ ಕೈ ಬೀಸಿ ಕರೆಯುತ್ತದೆ. ಹೀಗಾಗಿ ಮತ್ತೊಂದು ವಲಸೆಗೆ ನಾಂದಿಯಾಗುತ್ತದೆ. ಕಥೆಯ ಸಾರಾಂಶವನ್ನು ಚಿಕ್ಕದಾಗಿ ಹೇಳಿ ಮುಗಿಸಬಹುದು. ಆದರೆ ಮೊಮ್ಮಗಳು ವೆರೊನಿಕಾ ಪಾತ್ರದಲ್ಲಿ ಅತ್ಯುದ್ಭುತವಾಗಿ ನಟಿಸಿರುವ ದಿಶಾ ರಮೇಶ್ ರಂಗಸ್ಥಳವನ್ನು ಜೀವಂತವಾಗಿಡುತ್ತಾಳೆ. ಪಾದರಸದಂತಹ ಅವಳ ಚಲನೆ, ಸುಂದರವಾದ ನಾಟ್ಯ, ಅಮೋಘ ಕಂಠ ಸಿರಿಯ ಹಾಡುಗಳು ಒಂದು ದೃಶ್ಯ ಕಾವ್ಯವನ್ನೇ ಕಟ್ಟಿಕೊಡುತ್ತದೆ. ಪ್ರೇಕ್ಷಕರ ಹೃನ್ಮನಗಳನ್ನು ತನ್ನ ಹಾಡುಗಳಿಂದ ತಣಿಸುತ್ತಾರೆ ದಿಶಾ ರಮೇಶ್.
ಪಾಶ್ಚಾತ್ಯ ಹಾಗೂ ಕನ್ನಡದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ, ಸುಂದರವಾಗಿ ಅಭಿನಯಿಸುವ, ಜಿಂಕೆ ಚಲನೆಯ ಈ ಅಭಿನೇತ್ರಿ ವೆರೊನಿಕಾಳ ಅಜ್ಜನ ಪಾತ್ರದಲ್ಲಿ ನಟಿಸಿರುವ ಮೇಘ ಸಮೀರ ಅವರ ನಟನೆಯು ತುಂಬಾ ಪ್ರಬುದ್ಧವಾಗಿದೆ. ಮೇಘ ಸಮೀರರ ಅಸ್ಖಲಿತ ಹಾಗೂ ಚುರುಕಾದ ಸಂಭಾಷಣೆ ಈ ನಾಟಕಕ್ಕೆ ಮೆರುಗು ನೀಡುತ್ತದೆ.
ಕು. ದಿಶಾ ರಮೇಶ್ ಪ್ರೇಕ್ಷಕರನ್ನು ತನ್ನ ಅದ್ಭುತ ಪ್ರತಿಭೆಯಿಂದ ಮಂತ್ರ ಮುಗ್ಧರನ್ನಾಗಿಸುತ್ತಾರೆ. ಈ ಯುವಕರಿಬ್ಬರೂ ಎಲ್ಲಾ ಶ್ಲಾಘನೆಗೂ ಭಾಜನರು. ದಿಶಾ ರಮೇಶ್ ನಮ್ಮ ಮಂಡ್ಯ ರಮೇಶರ ಮಗಳು. ತಂದೆಯನ್ನು ಮೀರಿ ಬೆಳೆದ ಈ ಕುವರಿ ಕನ್ನಡ ನಾಟಕ ರಂಗಕ್ಕೆ ಒಂದು ಅಮೂಲ್ಯ ಕೊಡುಗೆ.
ಶ್ರೀನಿವಾಸ ದೇಶಪಾಂಡೆ, ಮಂಗಳೂರು
- ರಾಯಚೂರು ಜಿಲ್ಲೆಯ ಮುದಗಲ್ಲಿನಲ್ಲಿ ಜನಿಸಿದ ಶ್ರೀನಿವಾಸ ದೇಶಪಾಂಡೆ ಅವರು ಸಿವಿಲ್‌ನಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಸ್ಥಿರಾಸ್ತಿ ಮೌಲ್ಯಮಾಪನದಲ್ಲಿ ಎಂ.ಎಸ್ಸಿ ಪದವಿ ಗಳಿಸಿ ಕರ್ಣಾಟಕ ಬ್ಯಾಂಕಿನ ಉದ್ಯೋಗಕ್ಕೆ ಅಂಟಿಕೊಂಡು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ದೇಶಪಾಂಡೆಯವರಿಗೆ ಸಾಹಿತ್ಯದ ಮೇಲಿನ ಒಲವು, ಕೈಂಕರ್ಯ ಹವ್ಯಾಸವೆಂಬಂತೆ ಪ್ರಾರಂಭವಾಗಿ ಓದು, ವಿಶ್ಲೇಷಣೆ, ಬರಹಗಳಿಗೆ ಬಂದು ನಿಂತಿರುವುದು ಅವರ ವ್ಯಕ್ತಿತ್ವದ ಸೋಜಿಗಗಳಲ್ಲೊಂದು. ಅವರ ಭಾಷಾ ಪ್ರೌಢಿಮೆ ಮತ್ತು ಔಚಿತ್ಯಪ್ರಜ್ಞೆ ಉನ್ನತ ಮಟ್ಟದ್ದು ಎನ್ನುವುದನ್ನು ಅವರು ‘ನಾಡಿಗೆ ನಮಸ್ಕಾರ’ ಮಾಲೆಗಾಗಿ ರಚಿಸಿಕೊಟ್ಟಿರುವ ಮೂರು ಕೃತಿಗಳು ತೋರಿಸಿಕೊಟ್ಟಿವೆ. ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸೂರ್ಯನಾರಾಯಣ ಅಡಿಗರನ್ನು ಕುರಿತು, ಮಂಗಳೂರು ರಾಮಕೃಷ್ಣ ಮಠದ ಕುರಿತು, ಮತ್ತೀಗ ಜಯರಾಮ ಭಟ್ಟರನ್ನು ಕುರಿತು ಅವರು ಬರೆದ ಕೃತಿಗಳು ಅಮೂಲ್ಯ ದಾಖಲೆಗಳು ಮಾತ್ರವಲ್ಲ, ಓದಿನ ಆನಂದವನ್ನೂ ಕೊಡುವ ಕೃತಿಗಳು.