ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಕರ್ನಾಟಕ 50ರ ಸಂಭ್ರಮ ಪ್ರಯುಕ್ತ ಮಹಿಳಾ ಸಾಹಿತ್ಯ ಸಮಾವೇಶ ಹಾಗೂ 2022ರ ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ’ ಪ್ರದಾನ ಸಮಾರಂಭವನ್ನು ನಗರದ ಕ.ವಿ.ವ. ಸಂಘದ ಶ್ರೀ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ದಿನಾಂಕ 07-04-2024ರ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ ಮಾತನಾಡಿ, “ಸಾಮಾಜಿಕ ವಾಸ್ತವ ಸತ್ಯ ಅರಿಯುವುದಿಲ್ಲವೋ ಅಲ್ಲಿಯವರೆಗೆ ಸಾಹಿತ್ಯದ ಮೂಲಕ ಸಾಮಾಜಿಕ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಮಹಿಳಾ ಸಾಹಿತ್ಯ ನೋಡುವ ದೃಷ್ಟಿಕೋನ ಬದಲಾಗಬೇಕು. ಇಲ್ಲವಾದಲ್ಲಿ ಮಹಿಳಾ ಸಾಹಿತ್ಯಕ್ಕೆ ಸಿಗಬೇಕಾದ ನ್ಯಾಯ ದೊರಕುವುದಿಲ್ಲ. ಮಹಿಳೆಯರು ಇಲ್ಲದ ಸಮಾಜ ಸಾಧ್ಯವಿಲ್ಲ ಎಂಬುದನ್ನು 12ನೇ ಶತಮಾನದಲ್ಲಿ ಶರಣರು ಸಾರಿದ್ದಾರೆ. ಸಾಹಿತ್ಯದ ಮೂಲಕ ಸಮಾಜಕ್ಕೆ ಎಂಥ ಸಂದೇಶ ನೀಡಬೇಕು ಎಂಬುದನ್ನು ಅರಿತುಕೊಳ್ಳಬೇಕಿದೆ. ಇಂದು ಯಾವುದೇ ಚಳವಳಿಗಳಿಲ್ಲ. ಇಂಥ ಸಂದರ್ಭದಲ್ಲಿ ಮುಂದಿನ ಪೀಳಿಗೆಯನ್ನು ಯಾವ ರೀತಿ ಸಾಮಾಜಿಕ ಮುಖ್ಯವಾಹಿನಿಗೆ ತರಬೇಕೆಂಬ ಸಂಕಷ್ಟಗಳು ಕಾಡುತ್ತಿವೆ. ಅದಕ್ಕಾಗಿ ಸಾಹಿತ್ಯ ಕ್ಷೇತ್ರದಲ್ಲಿ ಜಾಗೃತಿಗಳು ನಡೆಯಬೇಕು. ಗ್ರಂಥಗಳನ್ನು ಓದುವ ತಾಳ್ಮೆ ನಮ್ಮ ಮಕ್ಕಳಲ್ಲಿ ಇಲ್ಲವಾಗಿದೆ. ಸಾಹಿತಿಗಳು ಇದನ್ನಿರಿತು ಬರವಣಿಗೆ ಮುಂದುವರಿಸಬೇಕಿದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಪುರಸ್ಕೃತ ಲೇಖಕಿಯರಾದ ಶ್ರೀಮತಿ ದೀಪ್ತಿ ಭದ್ರಾವತಿ, ತುಮಕೂರಿನ ಡಾ. ಕಮಲಾ ನರಸಿಂಹ, ಮೈಸೂರಿನ ಶ್ರೀಮತಿ ಉಷಾ ನರಸಿಂಹನ್ ಹಾಗೂ ತುಮಕೂರಿನ ಡಾ. ಗೀತಾ ವಸಂತ ಅವರಿಗೆ ಬಹುಮಾನ ಪ್ರದಾನ ಮಾಡಲಾಯಿತು. ಈ ನಾಲ್ವರು ಲೇಖಕಿಯರಿಗೆ ತಲಾ ರೂ.15 ಸಾವಿರ ನಗದು ಒಳಗೊಂಡ ಫಲಕಗಳನ್ನು ನೀಡಿ ಸನ್ಮಾನಿಸಲಾಯಿತು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೀವಂಧರ ಕುಮಾರ, ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವೀಣಾ ಬಿರಾದಾರ, ಡಾ. ಬಸು ಬೇವಿನಗಿಡದ, ಕ.ವಿ.ಸಂ. ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಡಾ. ಶಾಂತಾ ಇಮ್ರಾಪುರ, ಡಾ. ಶರಣಮ್ಮ ಗೊರೇಬಾಳ, ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ ಸೇರಿದಂತೆ ಹಲವರು ಇದ್ದರು.
ಇದಕ್ಕೂ ಮುನ್ನ ಹುಬ್ಬಳ್ಳಿಯ ವಂದನಾ ಸತೀಶ ನೂಲ್ವಿ ಅವರಿಂದ ಸುಗುಮ ಸಂಗೀತ ಕಾರ್ಯಕ್ರಮ ಜರುಗಿತು. ಮಹಿಳಾ ಸಾಹಿತ್ಯ ಸಮಾವೇಶದಲ್ಲಿ ಹಿರಿಯ ಸಂಶೋಧಕಿ ಶ್ರೀಮತಿ ಹನುಮಾಕ್ಷಿ ಗೋಗಿ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ಮಹಿಳಾ ಸೃಜನ-ಸೃಜನೇತರ ಸಾಹಿತ್ಯ ಕುರಿತು ಚಿಂತನ-ಮಂಥನ ಜರುಗಿತು. ಡಾ. ದೇವೇಂದ್ರ ಕುಮಾರ ಹಕಾರಿ ದತ್ತಿ ಅಂಗವಾಗಿ ಕುಮಾರೇಶ್ವರ ನಗರ ಮಹಿಳಾ ಮಂಡಳದಿಂದ ಜಾನಪದ ಹಾಡುಗಳ ಕಾರ್ಯಕ್ರಮ ಮತ್ತು ಕವಿಗೋಷ್ಠಿಯೂ ಜರುಗಿತು.
ದತ್ತಿ ಪರಿಚಯ :
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಒಂದು ನೂರಾ ಮೂವತ್ತೊಂಭತ್ತು ದತ್ತಿಗಳನ್ನು ಇಡಲಾಗಿದೆ. ಇವುಗಳಲ್ಲಿ ಒಂದಾಗಿರುವ ಮತ್ತು ಅತ್ಯಂತ ಶ್ರೇಷ್ಠ ದತ್ತಿ ಆಗಿರುವುದು ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ’. ಇದು 1977ರಲ್ಲಿ ಪ್ರಾರಂಭಗೊಂಡ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಯೋಜನೆ ಇಂದಿನವರೆಗೆ 147 ಮಹಿಳಾ ಕೃತಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದೆ.
ಪ್ರಾರಂಭದಲ್ಲಿ ಕೇವಲ ಒಂದು ಸಾವಿರ ರೂ. ಪ್ರೋತ್ಸಾಹ ಧನದೊಂದಿಗೆ ಆರಂಭಗೊಂಡ ಈ ಯೋಜನೆ ಈಗ ರೂ.60 ಸಾವಿರಗಳಿಗೆ ಏರಿದೆ. ಆಯಾ ವರ್ಷದ ಮಹಿಳಾ ಸಾಹಿತ್ಯದ ಉತ್ತಮ ಕೃತಿಗಳಿಗೆ ನಗದು ರೂಪದಲ್ಲಿ ಬಹುಮಾನ ನೀಡುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಬಹುಮಾನ ಬಂದ ಕೃತಿಗಳಿಗೆ ವಿಶೇಷ ಗೌರವ ಮತ್ತು ಮನ್ನಣೆ.
ಯಾವುದೇ ನಾಡಿನ ಸಾಂಸ್ಕೃತಿಕ ಸಮೃದ್ಧತೆಯಲ್ಲಿ ಮಹಿಳೆಯರ ಪಾಲು ಗಮನಾರ್ಹವಾಗಿರುತ್ತದೆ. ವೈಚಾರಿಕ ಸಾಹಿತ್ಯದ ದೃಷ್ಟಿಯಿಂದಲೂ ಈಗ ಮಹಿಳೆಯರ ಕೊಡುಗೆಯನ್ನು ಕಡೆಗಣಿಸುವಂತಿಲ್ಲ. ಕಾವ್ಯ, ಕಥೆ, ಕಾದಂಬರಿ, ವೈಚಾರಿಕತೆಗಳ ವಿಷಯದಲ್ಲಿ ಮಹಿಳೆಯರ ಮಹತ್ವದ ಕೃತಿಗಳು ಬೆಳಕಿಗೆ ಬರುವುದಕ್ಕೆ ಸ್ತ್ರೀವಾದವಷ್ಟೇ ಅಲ್ಲದೇ ಮನುಕುಲದ ಚಿಂತನೆಗಳೂ ಗಟ್ಟಿಗೊಳ್ಳುವುದಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ವೇದಿಕೆ ಸೃಷ್ಟಿಸಿತು. ಇಂಥ ವೇದಿಕೆಗೆ ಗಟ್ಟಿತನ ತಂದುಕೊಟ್ಟ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಗೌರವಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಮುಂದಿನ ದಿನಗಳಲ್ಲಿ ಈ ಮಹಿಳಾ ಗ್ರಂಥ ಬಹುಮಾನ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರತಿಷ್ಠಿತ ಬಹುಮಾನವಾಗುವಂತೆ ಮಾಡುವುದು ಸಂಘದ ಸದಾಶಯವಾಗಿದೆ.