ಬೆಂಗಳೂರು : ‘ಸಂಕಲ್ಪ ಮೈಸೂರು’ ಹುಲುಗಪ್ಪ ಕಟ್ಟಿಮನಿ ಅವರು ಕಾರಾಗೃಹ ಕೈದಿಗಳ ನಡುವೆ ರಂಗ ಚಟುವಟಿಕೆ ನಡೆಸಲು ಪ್ರಾರಂಭಿಸಿದ ರಂಗಸಂಸ್ಥೆ. ಕಾರಾಗೃಹ ವಾಸಿಗಳಿಗೆ ( ಗಮನಿಸಿ: ಖೈದಿಗಳು ಅಲ್ಲ) ಕಾರಾಗೃಹದಲ್ಲೇ ರಂಗತರಬೇತಿ ನೀಡಿ, ಸಾರ್ವಜನಿಕವಾಗಿ ರಂಗಮಂದಿರದಲ್ಲಿ ಪ್ರದರ್ಶನ ನೀಡುವ ಪ್ರಕ್ರಿಯೆ ಒಂದು ಇಪ್ಪತ್ತೈದು ವರುಷಗಳ ಹಿಂದೆ ರಂಗಭೂಮಿಯಲ್ಲೇ ವಿನೂತನ, ಆಶ್ಚರ್ಯ ಮತ್ತು ಕುತೂಹಲಗಳಿಗೆ ಕಾರಣವಾಗಿದ್ದ ರಂಗಪ್ರಕ್ರಿಯೆ; ಈ ಪ್ರಕ್ರಿಯೆ ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸಿತ್ತು.
ನಮ್ಮ ತಲೆಮಾರಿಗೆ ಇರುವ ಮಾಹಿತಿ ಆಧಾರದಲ್ಲಿ ಹೇಳುವುದಾದರೆ, ಹಿಂದಿ ಚಿತ್ರರಂಗದ ಎಂದಿಗೂ ಅಮರ ಎನ್ನಿಸಿಕೊಳ್ಳುವ, ಕಾರಾಗೃಹ ವಾಸಿಗಳನ್ನು ವಿವಿಧ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಅವರುಗಳ ಮನಪರಿವರ್ತನೆ ಮಾಡಿ, ಮತ್ತೆ ನಾಗರಿಕ ಸಮಾಜದಲ್ಲಿ ಮನುಷ್ಯರಾಗಿ ಬಾಳಲು ಸಹಾಯಕನಾಗುವ ಸಾಂಸ್ಕೃತಿಕ ಹಿನ್ನಲೆಯ ಜೇಲ್ ಸೂಪರಿಂಟೆಂಡೆಂಟ್ ನ ಕಥೆ ದೋ ಆಂಖೆ, ಬಾರಾ ಹಾತ್ ಚಿತ್ರ. ಅದರ ನಿರ್ದೇಶಕ ವಿ. ಶಾಂತರಾಮ್ ಅವರು ಈ ಮಾನವೀಯ ಜೇಲ್ ಸೂಪರಿಂಟೆಂಡೆಂಟ್ ಪಾತ್ರದಲ್ಲಿ ಅಭಿನಯಿಸಿದ್ದರೂ ಸಹ…… ನಂತರದಲ್ಲಿ ನಮಗೆ ಸಿಗುವ ಮತ್ತೊಂದು ಉದಾಹರಣೆ ಎಂದರೆ, ಕನ್ನಡ ರಂಗಭೂಮಿಯ ಪ್ರಯೋಗಶೀಲ ಚಟುವಟಿಕೆಗಳ ಪ್ರವರ್ತಕ ಬಿ.ವಿ. ಕಾರಂತರು ಒಂದು ಕೆಟ್ಟ ಗಳಿಗೆಯಲ್ಲಿ ಭೋಪಾಲ್‌ನಲ್ಲಿ ಸ್ವತಃ ಜೈಲು ವಾಸಿಯಾಗಿದ್ದಾಗ ಅವರು ತಮ್ಮ ಸಹ ಜೈಲು ವಾಸಿಗಳಿಗೆ ರಂಗಸಂಗೀತವನ್ನು ಕಲಿಸಿದ್ದು, ಅವರನ್ನು ಒಳಗೊಂಡು ಒಂದು ಸಣ್ಣ ಪ್ರಯೋಗವನ್ನು ಮಾಡಿದ್ದು. ಕಾರಂತರು ಜೈಲಿನಿಂದ ಬಿಡುಗಡೆಯಾದಾಗ, ಕಾರಂತರ ಆದಿಯಾಗಿ ಅವರ ಎಲ್ಲ ಜೈಲು ಸಹೋದ್ಯೋಗಿಗಳು ಭಾವುಕರಾಗಿ ಅತ್ತು ಬೀಳ್ಕೊಡುಗೆ ನೀಡಿದ್ದರಂತೆ. ಇದು ಹೆಚ್ಚು ಪ್ರಚಾರಕ್ಕೆ ಬಾರದಿದ್ದರೂ ಸಹ, ಕಾರಂತರ ಆಪ್ತ ವಲಯಕ್ಕೆ ಮಾಹಿತಿ ಇರುವ, ಕಾರಂತರ ಬದುಕಿನ ಮಹತ್ತರ ಸಂಗತಿ. ರಂಗಾಯಣ ಮೈಸೂರಿಗೆ ಕಾರಂತರು ರಂಗ ನಿರ್ದೇಶಕರಾಗಿ ಬಂದಾಗ, ಹುಲುಗಪ್ಪ ಕಟ್ಟೀಮನಿ, ಅವರ ಶಿಷ್ಯರು. ರಂಗಾಯಣ ಮೈಸೂರಿನ ಪ್ರಥಮ ಕಲಾವಿದರ ತಂಡದಲ್ಲಿ ಕಟ್ಟೀಮನಿ ಮತ್ತು ಮಂಗಳಾ ಎನ್. ಅವರುಗಳೂ ಇದ್ದರು.
ಕಾರಂತರ ಈ ಭೋಪಾಲ್‌ನ ಸ್ಪೂರ್ತಿ ಕಟ್ಟೀಮನಿ ಅವರಿಗೆ ಪ್ರಭಾವ ಬೀರಿ, ಅವರು ಕಳೆದ 25 ವರುಷಗಳಿಂದ ರಾಜ್ಯದ ಹಲವು ಪ್ರಮುಖ ಕಾರಾಗೃಹಗಳಲ್ಲಿ ಶಿಕ್ಷಾರ್ಹ ಕಾರಾಗೃಹವಾಸಿಗಳನ್ನು ಒಳಗೊಂಡು ಸುಮಾರು ರಂಗಚಟುವಟಿಕೆಗಳನ್ನು ನಡೆಸಿದ್ದಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿ, ಬುದ್ಧಿಯನ್ನು ಕೋಪ, ದ್ವೇಶಗಳ ಹಿಡಿತಕ್ಕೆ ಕೊಟ್ಟು, ತಾನು ಮಾಡಿದ ಕೃತ್ಯವು ತನ್ನ ಖಾಯಂ ಮಾನಸಿಕ ಲಕ್ಷಣವಲ್ಲ ಎಂದು ಅಲವತ್ತುಕೊಂಡರೂ ಸಹ, ಕಾನೂನಿನ ರೀತ್ಯ ಅವನು ಅಪರಾಧಿಯೇ; ಶಿಕ್ಷೆ ಅನಿವಾರ್ಯ. ಆದರೆ ಅವನ ಸುಪ್ತ ಮನಸ್ಸಿನ ಒಬ್ಬ ಹಾಡುಗಾರ, ನಟ, ತಾಂತ್ರಿಕ ಪರಿಣಿತ ಎಂದಿಗೂ ಸತ್ತಿರುವುದಿಲ್ಲ. ಬಹುಶಃ ಆ ‘ಖೈದಿ’ ಮಾಡಿದ ಅಚಾನಕ್ ತಪ್ಪಿಗೆ, ಕಾನೂನು ಪಾಲಕರು ಕೊಡುವ ಶಿಕ್ಷೆಗಿಂತ ಹೆಚ್ಚಿಗೆ, ಆ ವ್ಯಕ್ತಿ, ಏಕಾಂತದಲ್ಲಿ, ಅಂತರಂಗದಲ್ಲಿ ಒಂದು ಹಾಡನ್ನು ಗುನುಗುನಿಸುತ್ತಾ, ಮನಸ್ಸಿನ ಕನ್ನಡಿಯ ಮುಂದೆ ನಿಂತು ತನ್ನ ಇಷ್ಟದ ಪಾತ್ರವನ್ನು ಅಭಿನಯಿಸುತ್ತಾ, ಇಲ್ಲಾ ತನಗೆ ಬರುವ ಹಸ್ತಕೌಶಲ್ಯದ ವಸ್ತುವನ್ನು ನಿರ್ಮಾಣ ಮಾಡುತ್ತಾ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುವುದು, ಕಾನೂನಿನ ಶಿಕ್ಷೆಗಿಂತ ಘೋರವಾದದ್ದು; ಮನಪರಿವರ್ತನೆಯ ಹಾದಿಯಲ್ಲಿ, ಹೊಸ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುವ ದಿಟ್ಟ ಪ್ರಯತ್ನ…
ಹಿಂದೆ ಕಾರಾಗೃಹವಾಸಿಗಳಿಗೆ ತಾವು ಮಾಡಿದ ಇಂತಹ ಒಂದು ಪ್ರಯತ್ನವನ್ನು ಸೃಜನಶೀಲ ರಂಗಚಟುವಟಿಕೆಯಾಗಿ ಕಟ್ಟೀಮನಿ ಅವರು ಇಂದು ನಮ್ಮ ಮುಂದೆ ಪ್ರಸ್ತುತ ಪಡಿಸುತಿದ್ದಾರೆ. ಆ ಪ್ರಯತ್ನವೇ ‘ಜೊತೆಗಿರುವನು ಚಂದಿರ’ ಎಂಬ ಈ ನಾಟಕವನ್ನು ಕಟ್ಟೀಮನಿ ಅವರು ಕಾರಾಗೃಹವಾಸಿಗಳಿಗೂ ಮಾಡಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಾಕಷ್ಟು ಜನ ನಿರ್ದೇಶಕರುಗಳು, ಸಂಘಟನೆಗಳು ಈ ನಾಟಕವನ್ನು ಪ್ರಯೋಗ ಮಾಡಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಬಹಳ ವರುಷಗಳಿಂದ, ಆಗಾಗ್ಗೆ, ಅಲ್ಲಲ್ಲಿ ಮರುಹುಟ್ಟು ಪಡೆಯುತ್ತಿರುವ ಈ ಜನಪ್ರಿಯ ನಾಟಕ, ಹಲವು ಪ್ರಯೋಗಗಳಲ್ಲಿ ವಿವಾದಕ್ಕೂ ಕಾರಣವಾಗಿದೆ; ಮಲೆನಾಡಿನ ಮಳೆಯ ಮೋಡಗಳ ಕವಿ ಜಯಂತ ಕಾಯ್ಕಿಣಿ ಅವರು ಈ ನಾಟಕದ ಕರ್ತೃ.
ಬಡ ಕೆಳ ಮಧ್ಯಮ ವರ್ಗದ ಒಂದು ಕುಟುಂಬದ ಕಥೆ ಇದು. ಈ ಕುಟುಂಬದಲ್ಲಿ ಬಡತನದ ಜೊತೆಗೆ ಪ್ರೀತಿ ಇದೆ, ಎಲ್ಲ ಜಾತಿ ವರ್ಗಗಳ ಜನರನ್ನೂ ತಮ್ಮವರೇ ಎಂದು ಕಾಣುವ, ಮನುಷ್ಯ ಪ್ರೀತಿಯ ಹೃದಯಗಳಿವೆ. ಕೋಮು ಸೌಹಾರ್ದತೆಯ ಘಟನೆಗಳಿವೆ… ಹಲವು ಭಾವನಾತ್ಮಕ ಸನ್ನಿವೇಶಗಳು ಬಹಳ ಸಹಜವಾಗಿ ಆಂತರಿಕವಾಗಿ ಹೊಕ್ಕಿದೆ.
ಕಟ್ಟೀಮನಿ ಅವರು ತಮ್ಮದೇ ಸಂಸ್ಥೆ, ಮೈಸೂರಿನ ಸಂಕಲ್ಪ ಸಂಸ್ಥೆಯಿಂದ ಈಗ ಈ ನಾಟಕವನ್ನು ಪ್ರಯೋಗಕ್ಕೆ ಒಳಪಡಿಸಿದ್ದು, ಕನ್ನಡ ರಂಗಭೂಮಿಯಲ್ಲಿ ಅಭಿನಯ ಮತ್ತು ನಿರ್ದೇಶನಕ್ಕೆ ಹೆಸರಾಗಿರುವ ಹುಲುಗಪ್ಪ ಕಟ್ಟೀಮನಿ ಮತ್ತು ಮಂಗಳಾ ಎನ್. ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಇಬ್ಬರು ಕಲಾವಿದರ ಅಭಿನಯವನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ಇವರೊಟ್ಟಿಗೆ ಮೈಸೂರು ರಂಗಭೂಮಿಯ ಕೆಲವು ಹೆಸರುವಾಸಿ ಕಲಾವಿದರೂ ಅಭಿನಯಿಸುತಿದ್ದಾರೆ.
ಬೆಂಗಳೂರಿನಲ್ಲಿ ನಡೆಸಿದ ರಂಗಶಿಬಿರಗಳಲ್ಲಿ ನಾಟ್ಯ ಶಾಸ್ತ್ರವನ್ನು ಕಲಿತ ಕೆಲವು ರಂಗಾಸಕ್ತರು, ಕಲಾವಿದರೂ ಸಹ ಈ ಪ್ರಯೋಗದಲ್ಲಿ ನಟರಾಗಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ, ಕನ್ನಡ ರಂಗಭೂಮಿಯ ಹಿರಿಯ ಸಂಗೀತ ನಿರ್ದೇಶಕ, ಕಟ್ಟೀಮನಿ ಅವರು ಈ ಹಿಂದೆ ನಿರ್ದೇಶಿಸಿದ ಈ ನಾಟಕದ ಪ್ರಯೋಗಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಮೈಸೂರು ರಂಗಾಯಣದ ಶ್ರೀನಿವಾಸ್ ಭಟ್ಟ- ಚೀನಿ ಅವರ ಸಂಗೀತ ಸಂಯೋಜನೆಯನ್ನೇ ಈಗಿನ ಪ್ರಯೋಗಕ್ಕೂ ಉಳಿಸಿಕೊಂಡು, ಅದರ ನಿರ್ವಹಣೆಯನ್ನು ಮಕ್ಕಳ ಮತ್ತು ಹವ್ಯಾಸಿ ರಂಗಭೂಮಿಯ ಜನಪ್ರಿಯ ಸಂಗೀತ ನಿರ್ದೇಶಕ ಗಜಾನನ ಟಿ. ನಾಯ್ಕ ಅವರು ನಿರ್ವಹಿಸುತ್ತಿದ್ದಾರೆ. ರಂಗಭೂಮಿಯ ಬಹು ಜನಪರಿಚಿತ ನಿರ್ದೇಶಕರು ಮತ್ತು ಯಶಸ್ವೀ ರಂಗಸಂಘಟಕರಾಗಿರುವ ಶಶಿಧರ ಭಾರೀಘಾಟ್ ಅವರು ಈ ನಾಟಕ ಪ್ರಯೋಗದ ವ್ಯವಸ್ಥಾಪಕರಾಗಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ಚಳುವಳಿ ಎಂದರೆ, ಎಲ್ಲ ರೀತಿಯ ಚಟುವಟಿಕೆಗಳಿಗೂ ಮುಂದೆ ನಿಲ್ಲುವ ರಂಗಭೂಮಿಯ ಕರ್ಣ ಕೆ.ವಿ.ಎಸ್. ಆಪ್ತ ರಂಗಮಂದಿರದ ಗೋಪಿ ಒಟ್ಟಾರೆ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ.
‘ಜೊತೆಗಿರುವನು ಚಂದಿರ’ ನಾಟಕ ದಿನಾಂಕ 13-04-2024ಕ್ಕೆ ರಂಗಶಂಕರದಲ್ಲಿ ಎರಡು ಪ್ರದರ್ಶನಕ್ಕೆ
ಸಜ್ಜಾಗಿದೆ. ಮಧ್ಯಾನ್ಹ 3.30ಕ್ಕೆ ಮತ್ತು ಸಂಜೆ 7.30ಕ್ಕೆ….
ಈ ನಾಟಕ ಸಾಕಷ್ಟು ಪ್ರದರ್ಶನ ಕಾಣುವುದರಲ್ಲಿ ಸಂದೇಹವೇ ಇಲ್ಲ…. ಆದರೆ ಪ್ರಥಮ ಪ್ರದರ್ಶನ ನೀಡುವ ರೋಮಾಂಚನ ಮತ್ಯಾವ ಪ್ರದರ್ಶನವೂ ನೀಡದು.
ಬನ್ನಿ ದಿನಾಂಕ 13-04-2024ರ ಪ್ರಥಮ ಪ್ರದರ್ಶನಗಳಿಗೆ ನಾವೂ ಚಂದಿರನ ಜೊತೆಗಿರೋಣ…..
ಗುಂಡಣ್ಣ ಚಿಕ್ಕಮಗಳೂರು, ಹಿರಿಯ ರಂಗ ವಿಮರ್ಶಕರು
10-04-2024