ತೀರ್ಥಹಳ್ಳಿ : ಆರಗ ಸಮೀಪದ ಹೀರೆಸರ ಸರ್ಜಾ ವಸಂತರಾವ್ ಅವರ ಮನೆಯಂಗಳದಲ್ಲಿ ದಿನಾಂಕ 06-04-2024ರಂದು ಸಂಜೆ ‘ಮನೆ ಅಂಗಳದಲ್ಲಿ ಮಾತುಕತೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ. ಡಿ.ಎಸ್. ಸೋಮಶೇಖರ್ “ವಾಸ್ತು ಶಿಲ್ಪ, ವಿಜ್ಞಾನ, ಚಿಂತನ ಮಂಥನಗಳ ಪರಿಣಾಮ ಬಹುಬಗೆಯ ಚಟುವಟಿಕೆಗಳು ಸಂಸ್ಕೃತಿಯ ಚೌಕಟ್ಟಿಗೆ ಸೇರಿಸಿಕೊಳ್ಳುತ್ತದೆ. ಇದು ನಮ್ಮ ಅಂತರಂಗದ ಸೌಖ್ಯವನ್ನು ಹೆಚ್ಚಿಸುವ ಕೆಲಸ. ನಾಗರಿಕತೆ ನಮ್ಮ ಭೌತಿಕವಾದ ಅನುಕೂಲತೆಗಳನ್ನು ಹೆಚ್ಚಿಸಿಕೊಳ್ಳವ ಮುಖೇನ ಈ ಬದುಕನ್ನು ಹೆಚ್ಚು ಸುಖಕರವಾಗಿ ನಡೆಸುವುದು ಹೇಗೆ ಎಂದು ಯೋಚನೆ ಮಾಡಿಕೊಳ್ಳುವುದು ಆಗಿದೆ. ಸಾಮಾಜಿಕ ಕಳಕಳಿಯ ಚಿಂತಕರಾದ ಟಾಯಂಬಿ ಮತ್ತು ಸ್ಪೆನ್‌ಲರ್ ಅವರ ಕೃತಿಗಳು ನಮ್ಮ ಕಣ್ಣು ತೆರೆಸುವಂತಾಗಬೇಕು. ಹುಟ್ಟಿದ ಎಲ್ಲ ನಾಗರೀಕತೆಗಳು ವಿಕಸನವಾಗಲಿಲ್ಲ. ಅವರು ಗುರುತಿಸಿರುವ 28ರಲ್ಲಿ ಕೇವಲ 8 ಸಂಸ್ಕೃತಿಗಳು ಮಾತ್ರ ಉಳಿದಿವೆ. ಅದರಲ್ಲಿ ನಮ್ಮ ಭಾರತೀಯ ಸಂಸ್ಕೃತಿಯೂ ಒಂದು. ಜನಾಂಗೀಯವಾದ ವಿಚಾರಗಳು ನಾಗರೀಕತೆಯ ಹುಟ್ಟಿಗೆ ಕಾರಣವಲ್ಲ. ಕಗ್ಗತ್ತಲ ಖಂಡ ಆಫ್ರಿಕ ಅತ್ಯಂತ ಫಲವತ್ತಾದ ಖಂಡ. ಆದರೂ ನಾಗರಿಕತೆ ಅಲ್ಲಿ ಹುಟ್ಟಲಿಲ್ಲ. ಮಾನವ ಸಮಾಜದಲ್ಲಿ ಇರುವ ಜನರ ಆಲೋಚನ ರೀತಿ, ಮನಸ್ಥಿತಿ ಎಲ್ಲ ಬೇರೆ ಬೇರೆ ಆಗಿರುತ್ತದೆ. ಸಮಾಜವನ್ನು ಇಡಿಯಾಗಿ ನೋಡಿದಾಗ ಇದು ಸರಿ ಎನ್ನಿಸುತ್ತದೆ. ಸೃಜನಶೀಲ ಅಲ್ಪಸಂಖ್ಯಾತರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಂದ ಸಮಾಜದ ಹಿತವನ್ನು ನಿರಂತರವಾಗಿ ಕಾಯ್ದುಕೊಂಡಿರುವವರಿಂದ ಮಾತ್ರ ಸಮಾಜ ಮುಂದುವರಿಯಲಿಕ್ಕೆ ಸಾಧ್ಯವಾಗುತ್ತದೆ. ಭೌಗೋಳಿಕ ಪರಿಸರ ಅದರದ್ದೇ ಆದ ರೀತಿಯಲ್ಲಿ ಸಮಸ್ಯೆಗಳನ್ನು ಒಡ್ಡುತ್ತದೆ. ಸವಾಲನ್ನು ಎದುರಿಸುವ ಸಮಯದಲ್ಲಿ ಪೂರಕವಾದ ರೀತಿಯಲ್ಲಿ ಇದು ನಡೆದಾಗ ನಾಗರಿಕತೆ, ಸಂಸ್ಕೃತಿ ಹುಟ್ಟುತ್ತದೆ. ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬೆಳವಣಿಗೆ ಸಂಸ್ಕೃತಿಯ ಬೆಳವಣಿಗೆಯ ಲಕ್ಷಣವಲ್ಲ. ಹಿಂಸೆಯಿಂದ ರಾಜ್ಯ ನಿರ್ಮಾಣ ಮಾಡಿದರೆ ಸಂಸ್ಕೃತಿ ಬೆಳೆಯುವುದಿಲ್ಲ ಇದು ನಾಗರಿಕತೆ, ಸಂಸ್ಕೃತಿಯ ಲಕ್ಷಣವೂ ಅಲ್ಲ. ಸಮಾಜದ ಜನರು ಸಜ್ಜನರು, ಸಾತ್ವಿಕರು ಇದ್ದಾಗ ಸಮಾಜ ವಿಕಾಸವಾಗುತ್ತದೆ. ಗಾಂಧೀಜಿ ಹೇಳುತ್ತಾರೆ ನಮ್ಮ ದೇಶದಲ್ಲಿ ಬ್ರಿಟಿಷರು ಯಂತ್ರೋಪಕರಣಗಳನ್ನು ಪ್ರಕೃತಿಯನ್ನು ನಾಶ ಮಾಡುವ ದೃಷ್ಟಿಯಿಂದ ತಂದರು. ನಮ್ಮ ಕೈಮಗ್ಗ ನಾಶಮಾಡುವ ಸಂಸ್ಕೃತಿ ಅಲ್ಲ. ಇಲ್ಲಿ ಸಂಘರ್ಷ ಇಲ್ಲ. ಪ್ರಕೃತಿಯನ್ನು ನಾಶ ಮಾಡುವುದಿಲ್ಲ” ಎಂದು ಅಭಿಪ್ರಾಯಪಟ್ಟರು.
“ಮಲೆನಾಡು ಜೀವ ವೈವಿಧ್ಯದ ತಾಣ. ಪರಿಸರ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರವನ್ನು ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ತಜ್ಞರು ಶೇ. 33 ಭೂಮಿ ಹಸಿರು ಇರಬೇಕು. ಆದರೆ ಈಗ ಕೇವಲ ಶೇ.16 ಮಾತ್ರ ಇದೆ. ಅಭಿವೃದ್ದಿ, ಪ್ರಗತಿ ಎಲ್ಲವೂ ಬೇಕು. ಆದರೆ ಇದು ಸುಸ್ಥಿರವಾಗಿರಬೇಕು. ಪರಿಸರ ನಾಶವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ದಿ ಚಟುವಟಿಕೆಗಳು ಅಗಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಅರಣ್ಯ ನಾಶವಾಗಿದೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ಅತಿ ಹೆಚ್ಚು ಆಣೆಕಟ್ಟುಗಳನ್ನು ಕಟ್ಟಿರುವುದರಿಂದ ಇದು ನಾಶವಾಗಿದೆ. ನಾವು ಸಂಸ್ಕೃತಿ ಮತ್ತು ಪರಿಸರ ಎಲ್ಲವನ್ನೂ ಉಳಿಸಿಕೊಳ್ಳುವ ಹೋರಾಟ ಮಾಡಬೇಕಾದ ಸೂಕ್ಷ್ಮ ದಿನಗಳು ನಮ್ಮ ಮುಂದಿವೆ” ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕೋಣಂದೂರು ಜೆಸಿಐ, ಇನ್ನರ್‌ವೀಲ್, ಸೀನಿಯರ್ ಚೇಂಬರ್ ಆಯೋಜಕರಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತೀರ್ಥಹಳ್ಳಿ ತಾಲೂಕು ಕ.ಸಾ.ಪ. ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಹಿರಿಯರಾದ ಗುರುರಾಜಾಚಾರ್, ಡಾ. ಮುರಳೀಧರ್, ಪತ್ರಕರ್ತ ಜಿ.ಆರ್. ಸತ್ಯನಾರಾಯಣ, ವಿಶ್ವನಾಥ್ ದೇಮ್ಲಾಪುರ, ಚಂದ್ರಕಾಂತ್ ಸರ್ಜಾ ಮುಂತಾದವರು ಸಂದರ್ಭೋಚಿತವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ತೀರ್ಥಹಳ್ಳಿ ಜೆ.ಸಿ.ಐ. ಅಧ್ಯಕ್ಷ ಸರ್ಜಾ ಹರೀಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಣಂದೂರು ಇನ್ನರ್ ವೀಲ್ ಅಧ್ಯಕ್ಷೆ ಪುಷ್ಪಾ ಸರ್ಜಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸರ್ಜಾ ವಸಂತರಾವ್ ಕುಟುಂಬ, ಜೆ.ಸಿ.ಐ. ಅಧ್ಯಕ್ಷ ಸರ್ಜಾ ಹರೀಶ್ ಮತ್ತು ಬಳಗ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
– ಜಿ.ಆರ್. ಸತ್ಯನಾರಾಯಣ