ಪುತ್ತೂರು : ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ರಾಸಾ ಪಬ್ಲಿಕೇಷನ್ಸ್ ಆಯೋಜಿಸಿದ ಕನ್ನಡ ಸಾಹಿತ್ಯ ಕವಿಗೋಷ್ಠಿ, ‘ಕರ್ನಾಟಕ ಸೇವಾರತ್ನ ಪ್ರಶಸ್ತಿ’ 2024 ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 07-04-2024ರಂದು ಪುತ್ತೂರಿನ ನೆಹರು ನಗರದಲ್ಲಿರುವ ಸುದಾನ ವಸತಿ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಘುನಾಥ ಉಪಾಧ್ಯಾಯ ಹಾಗೂ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ರಾಸಾ ಆರ್. ಈಶ್ವರ, ಅಭಯ್ ಇವರು ಗಿಡಕ್ಕೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿತ್ರದುರ್ಗದ ಶ್ರೀ ಅನಿತಾ ಲಕ್ಷ್ಮೀ ಆಚಾರ್ಯ, ಬಾಲ ಯೋಗಪಟು ಸುಬ್ರಹ್ಮಣ್ಯದ ಕುಮಾರಿ ಗೌರಿತಾ ಕೆ. ಜಿ. ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚೆನ್ನರಾಯಪಟ್ಟಣದ ದಿನೇಶ್ ಡಿ. ಎಸ್. ಇವರಿಗೆ 2024ನೇ ಸಾಲಿನ ‘ಕರ್ನಾಟಕ ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುದಾನ ಶಾಲೆ ಪುತ್ತೂರು ಇದರ ಸಂಚಾಲಕರು ಹಾಗೂ ಧರ್ಮಗುರುಗಳಾದ ರೆವರೆಂಡ್. ವಿಜಯ ಹಾರ್ವಿನ್, ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿ ಮತ್ತು ಸಾಮಾಜಿಕ ಸೇವಾಕರ್ತೆಯಾದ ಬೆಂಗಳೂರಿನ ಶ್ರೀಮತಿ ಹೇಮ ಹಾಗೂ ಪುತ್ತೂರಿನ ಶ್ರೀಮತಿ ಶೋಭಾರಾಣಿ ಉಪಸ್ಥಿತರಿದ್ದರು.
ಸಭಾಕರ್ಯಕ್ರಮದ ಬಳಿಕ ಪುತ್ತೂರಿನ ಗುಂಡ್ಯಡ್ಕದ ಶ್ರೀಮತಿ ಮಲ್ಲಿಕಾ ಜೆ. ಆರ್. ರೈ ಇವರ ಅಧ್ಯಕ್ಷತೆಯಲ್ಲಿ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕವಿಗೋಷ್ಠಿ ಹಾಗೂ ವಿವಿಧ ಜಿಲ್ಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡಿತು.