ಉದಯೋನ್ಮುಖ ಲೇಖಕಿ ವಿನಿಶಾ ಅವರ ‘ಎತ್ತಿನ ಗಾಡಿ ಎಕ್ಸ್ ಪ್ರೆಸ್ ಭಾಗ 2’ ಎಂಬ ಮಂದಾನಿಲ ಪ್ರಕಾಶನದಿಂದ ಪ್ರಕಟವಾದ ಕೃತಿಯ ವೈಶಿಷ್ಟ್ಯವೆಂದರೆ ಅದು ಒಳಗೂ ಹೊರಗೂ ಮೈತುಂಬಾ ಮುದ್ದಾಗಿ ಹೊದ್ದುಕೊಂಡ ತೀರ್ಥಹಳ್ಳಿಯ ಸುಂದರ ಆಡುಭಾಷೆ. ಬೆನ್ನುಡಿ, ರಕ್ಷಾ ಪುಟದ ಒಳಪುಟ ಎಲ್ಲವನ್ನೂ ಹಳ್ಳಿಗರ ಮಾತುಗಳಿಂದಲೇ ತುಂಬಿಸಲಾಗಿದೆ. ಒಳಪುಟಗಳ 51 ಲಲಿತ ಬರಹಗಳಿಗೆ ‘ಲಘು ಬರಹಗಳ ಕಂತೆ’ ಎಂಬ, ಒಳಗಿನ ಬರಹಗಳದ್ದೇ ಶೈಲಿಯ ಉಪಶೀರ್ಷಿಕೆ ನೀಡಲಾಗಿದೆ.
ಈ 51 ಲೇಖನಗಳನ್ನು ಲೇಖಕಿ ಆತ್ಮಕಥನದ ಶೈಲಿಯಲ್ಲಿ ಬರೆದಿದ್ದಾರೆ. ತಮ್ಮ ದೈನಂದಿನ ಬದುಕಿನಲ್ಲಿ ತಾವು ಕಣ್ಣಾರೆ ಕಂಡ ಹಾಗೂ ಸ್ವತಃ ಅನುಭವಿಸಿದ ವಿಚಾರಗಳನ್ನೇ ಎತ್ತಿಕೊಂಡಿದ್ದಾರೆ. ಸೂಕ್ಷ್ಮ ಕಣ್ಣುಗಳ ಅವರ ತಂಗಿ ಮುದ್ದು ತೀರ್ಥಹಳ್ಳಿ ಅವರ ಎಲ್ಲಾ ಅನುಭವಗಳಲ್ಲಿ ಸದಾ ಅವರ ಜೊತೆಗೆ ಇರುತ್ತಾರೆ. ಪತಿ ಪ್ರಮೋದ್ ಕೂಡಾ ಇರುತ್ತಾರೆ. ಎದ್ರು ಮನೆಯವರೂ, ಪಕ್ಕದ ಮನೆಯವರೂ, ಹಿಂದಿನ ಮನೆಯವರೂ ಊರೂರು ಸುತ್ತುತ್ತಾ ಇದ್ದ ಕುಟುಂಬವಾಗಿದ್ದರಿಂದ ಅವರು ಹಿಂದೆ ಇದ್ದ ಹಳ್ಳಿಯವರೂ – ಹೀಗೆ ಎಲ್ಲರೂ ಇಲ್ಲಿ ನುಸುಳುತ್ತಾರೆ. ಹೀಗೆ ಹಲವು ಹಳ್ಳಿಗಳ ಸಹಜೀವನದ ಚಿತ್ರಣ ಈ ಲೇಖನಗಳಲ್ಲಿ ಸಿಗುತ್ತದೆ. ಯಾರು ಮುಗ್ಧರು, ಯಾರು ವಂಚಕರು,ಯಾರು ಸ್ವಾರ್ಥಿಗಳು, ಯಾರು ಅವಕಾಶವಾದಿಗಳು ಎಂಬುದನ್ನೂ ಸೂಚ್ಯವಾಗಿ ಅವರು ಸೇರಿಸಿಕೊಳ್ಳುತ್ತಾರೆ. ನವಿರು ಹಾಸ್ಯದ ಜತೆಗೆ ಜನರ ಸ್ವಭಾವ ವೈಚಿತ್ರ್ಯಗಳನ್ನೂ ಲೇಖಕಿ ಬಣ್ಣಿಸುವ ಪರಿಯಲ್ಲಿ ಪ್ರೌಢಿಮೆ ಎದ್ದು ಕಾಣುತ್ತದೆ.
ಉದಾಹರಣೆಗೆ ‘ತಿಕ್ಕಲು ತಿಮ್ಮಪ್ಪ ಮೇಷ್ಟ್ರಕಲಾ ಪ್ರೇಮ..!’ ಪ್ರಾಥಮಿಕ ಶಾಲೆಯ ಎಳೆಯ ಹೆಣ್ಣು ಮಕ್ಕಳನ್ನು ತನ್ನ ತೆವಲಿಗೆ ಬಳಸಿಕೊಳ್ಳುವ ಮೇಷ್ಟ್ರ ಮಾನಸಿಕ ಅಸ್ವಸ್ಥ ಸ್ಥಿತಿಯ ಬಗ್ಗೆ ಲೇಖಕಿ ನೇರವಾಗಿ ಏನೂ ಹೇಳುವುದಿಲ್ಲ. ಅವರ ನಿರೂಪಣೆಯಲ್ಲಿ ಕೇವಲ ಮುಗ್ಧತೆಯಷ್ಪೇ ಇದೆ. ಅವರು ಹೇಳುವ ಹಾಸ್ಯಭರಿತ ಶೈಲಿ ಹೆಜ್ಜೆ ಹೆಜ್ಜೆಗೂ ನಗಿಸುತ್ತದೆ. ಆದರೆ ಅದರ ಹಿಂದೆ ಅಡಗಿದ ಸತ್ಯ ಮಾತ್ರ ಓದುಗರ ಗಮನದಿಂದ ತಪ್ಪಿಸಿಕೊಳ್ಳುವುದಿಲ್ಲ.
ಬೆಂಗಳೂರು ನಗರದ ಬದುಕಿನ ಕುರಿತು ಇರುವ ಎರಡು ಲೇಖನಗಳೂ ಅಷ್ಟೇ. ನಗರದ ಮಂದಿಯ ನಯ ವಂಚಕತನ, ಗ್ರಾಮೀಣರ ಬಗ್ಗೆ ಅವರಿಗಿರುವ ತಾತ್ಸಾರ, ನಗರದ ಯಾಂತ್ರಿಕ ಜೀವನ ಶೈಲಿ, ಅವರು ಸಂವೇದನಾ ಶೂನ್ಯತೆ- ಹೀಗೆ ಹಲವು ಮುಖಗಳ ಬಗ್ಗೆ ಲೇಖಕಿಯ ಅಸಮಾಧಾನವನ್ನು ವ್ಯಕ್ತಪಡಿಸುತ್ತವೆ. ಹಾಗೆಯೇ ಅಲ್ಲೊಂದು-ಇಲ್ಲೊಂದು ಮಿಂಚಿನಂತೆ ಹೊಳೆಯುವ ಸದ್ಗುಣಿಗಳೂ ಇಲ್ಲದಿಲ್ಲ. ಯಾಕೆಂದರೆ ಸಹಾಯ ಮಾಡುವೆನೆಂದು ಭರವಸೆಯಿತ್ತವರು ಗುರುತೇ ಇಲ್ಲದವರಂತೆ ಮುಖ ತಿರುಗಿಸಿದರೆ ದೂರದ ಪರಿಚಯದ ಮಂದಿ ಸಾಕು ಅನ್ನಿಸುವಷ್ಟು ಸಹಾಯ ಮಾಡಿದವರೂ ಇದ್ದಾರೆ. ಎಲ್ಲವನ್ನೂ ಲೇಖಕಿ ಹೇಳುವ ರೀತಿಯಲ್ಲಿ ಓದುಗನ ಮನಮುಟ್ಟುವ ಶಕ್ತಿ ಇದೆ.
‘ಮಾನವನಾಗಿ ಹುಟ್ಟಿದ್ಮೇಲೆ ಏನೇನ್ಕಂಡಿ’ ಎಂಬ ಲೇಖನದಲ್ಲೂ ಹೊಸದಾಗಿ ಮದುವೆಯಾದ ಗಂಡ-ಹೆಂಡಿರ ನಡುವೆ ‘ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ’ ಎಂಬ ಕೋಳಿ ಜಗಳದ ನವಿರು ಹಾಸ್ಯದ ಜೊತೆಗೆ ಆಧುನಿಕತೆಯ ಹೆಸರಿನಲ್ಲಿ ನಡೆಯುವ ಪ್ರಕೃತಿ ನಾಶದ ಬಗ್ಗೆ ಮಾಡುವ ಗಂಭೀರ ಆಕ್ಷೇಪವೂ ಇದೆ.
ಬಹಳ ಒಳ್ಳೆಯ ಬರವಣಿಗೆಯ ಶೈಲಿ ವಿನಿಶಾ ಅವರಿಗೆ ಸಿದ್ಧಿಸಿದೆ. ಒಂದು ಒಳ್ಳೆಯ ಹಾಸ್ಯ ಹೇಗಿರಬೇಕೆಂಬ ಅರಿವೂ ಅವರಿಗೆ ಚೆನ್ನಾಗಿ ಇದೆ. ಯಾವುದೇ ರೀತಿಯ ವ್ಯಂಗ್ಯ -ಟೀಕೆಗಳನ್ನೂ ನೇರವಾಗಿ ಬಳಸದೆ ತಿಳಿಹಾಸ್ಯದ ಮೂಲಕ ತಮ್ಮ ಗುರಿಯನ್ನು ಅವರು ಮುಟ್ಟುತ್ತಾರೆ. ಎಷ್ಟೋ ಬಾರಿ ತಮ್ಮನ್ನು ತಾವೇ ಹಾಸ್ಯಕ್ಕೆ ಗುರಿ ಮಾಡುವುದೂ ಉಂಟು. ಸಂಕಲನದಲ್ಲಿ ಎರಡು extremeಗಳಿಗೆ ಸಂಬಂಧಿಸಿದ ಲೇಖನಗಳಿವೆ – ಎತ್ತಿನ ಗಾಡಿ (ಗ್ರಾಮೀಣ ಶಾಂತ ಬದುಕು) ಮತ್ತು ಎಕ್ಸ್ ಪ್ರೆಸ್ (ನಗರದ ವೇಗದ ಬದುಕು). ಹಾಗೆ ಒಂದು ಅರ್ಥಪೂರ್ಣ ಶೀರ್ಷಿಕೆಯನ್ನು ಲೇಖಕಿ ಕೃತಿಗೆ ಕೊಟ್ಟಿದ್ದಾರೆ.
ಆರಂಭದ ನುಡಿಗಳಲ್ಲಿ ‘ತಾನು ಲೇಖಕಿಯಾಗುತ್ತೇನೆಂದು ಎಣಿಸಿಯೇ ಇರಲಿಲ್ಲ, ತಂಗಿಯ ಒತ್ತಾಯಕ್ಕೆ ಬರೆಯತೊಡಗಿದೆ’ ಎಂದು ಹೇಳಿದರೂ ಬರೆಯದೇ ಕುಳಿತಿದ್ದರೆ ಸಾಹಿತ್ಯ ಲೋಕಕ್ಕೆ ನಷ್ಟವಾಗುತ್ತಿತ್ತು ಎಂದು ಹೇಳಬಹುದಾದ ರೀತಿಯಲ್ಲಿ ಅವರು ಬರೆದಿದ್ದಾರೆ. ಆಡುಭಾಷೆಯನ್ನು ಉಳಿಸಿಕೊಳ್ಳಬೇಕು ಎಂಬುದು ಅವರ ಕಾಳಜಿ. ಆಡುಭಾಷೆಯನ್ನು ಬರೆಯುವುದೂ ಓದುವುದೂ ಕಡು ಕಷ್ಟವೆಂದು ತಿಳಿದಿದ್ದರೂ ಅವರು ಆ ಕೆಲಸವನ್ನೂ ಸಮರ್ಥವಾಗಿ ಮಾಡಿದ್ದಾರೆ. ಒಂದು ಒಳ್ಳೆಯ ಕೃತಿಗಾಗಿ ವಿನಿಶಾಗೆ ಅಭಿನಂದನೆಗಳು.
ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕಿ ವಿನಿಶಾ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇವರು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಮಾಡಿರುತ್ತಾರೆ. 2015ರಲ್ಲಿ ‘ಎತ್ತಿನಗಾಡಿ ಎಕ್ಸ್ ಪ್ರೆಸ್’ ಎಂಬ ಕೃತಿ ಪ್ರಕಟಗೊಂಡಿದ್ದು, ಫೋಟೋಗ್ರಾಫಿ, ಅಭಿನಯ, ಚಿತ್ರಕಲೆ, ಯಕ್ಷಗಾನ ಇವುಗಳಲ್ಲಿ ಆಸಕ್ತಿ ಹಾಗೂ ಹವ್ಯಾಸಿ ಯೂಟ್ಯೂಬರ್. ಝೀ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ‘ ಜಿಮ್ ಜಿಮ್ ಜಿಂಬಾ’ ಎಂಬ ಮಕ್ಕಳ ಧಾರವಾಹಿಯಲ್ಲಿ ‘ತೇಜಸ್’ ಎಂಬ ಮುಖ್ಯ ಪಾತ್ರದಲ್ಲಿ ಅಭಿನಯ. ದೂರದರ್ಶನ ಚಂದನದಲ್ಲಿ ಪ್ರಸರವಾದ ಯಕ್ಷಗಾನ ಹಾಗೂ ನಾಟಕ ಕಾರ್ಯಕ್ರಮಗಳಲ್ಲಿ ಅಭಿನಯ. ‘ಮಂದಾನಿಲ’ ಎಂಬ ಕೈ ಬರಹದ ಪತ್ರಿಕೆಯಲ್ಲಿ ವ್ಯವಸ್ಥಾಪಕ ಸಂಪಾದಕತ್ವ ಹಾಗೂ ‘ವಿನಿಶಾ ಕಾಲಂ’ ಅಂಕಣ ಬರಹ. ‘ಕರಾವಳಿ ಕರ್ನಾಟಕ’ ಪತ್ರಿಕೆಯಲ್ಲಿ ‘ಹೊಡಿಲಾ ಮಗ ಬಂಡಿ’ ಎಂಬ ವಾರದ ಅಂಕಣ ಬರಹ ಪ್ರಕಟವಾಗಿದೆ. ‘ಎತ್ತಿನಗಾಡಿ ಎಕ್ಸ್ ಪ್ರೆಸ್’ ಭಾಗ ಎರಡು 2023ರಲ್ಲಿ ಪ್ರಕಟವಾದ ಎರಡನೆಯ ಕೃತಿ. ಪ್ರಸ್ತುತ ಬೆಂಗಳೂರಿನಲ್ಲಿ ಇಂಗ್ಲೀಷ್ ಉಪನ್ಯಾಸಕಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.