ತೆಕ್ಕಟ್ಟೆ : ತೆಕ್ಕಟ್ಟೆ ಶಿಶುಮಂದಿರದ ಬಳಿಯ ಪ್ರಕೃತಿ ವಾತಾವರಣದಲ್ಲಿ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ, ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ, ದಿಮ್ಸಾಲ್ ಕ್ರಿಯೇಷನ್ಸ್ ಸಂಸ್ಥೆಗಳ ಆಶ್ರಯದಲ್ಲಿ ‘ರಜಾರಂಗು-24’, ಮೊಬೈಲ್ ಮುಕ್ತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 11-04-2024ರಂದು ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಖ್ಯಾತ ರಂಗ ನಿರ್ದೇಶಕ ಶ್ರೀಪಾದ ಭಟ್ ಮಾತನಾಡಿ “ದೀಪ ಹಚ್ಚುವುದು ಬಹಳ ಕಷ್ಟ. ತಿಂಗಳುಗಟ್ಟಲೆ ಎಲ್ಲವರೂ ಸೇರಿಕೊಂಡು ಯೋಚಿಸಬೇಕು, ಮಕ್ಕಳನ್ನು ಕ್ರೋಡೀಕರಿಸುವುದಕ್ಕೆ ಪಾಲಕರನ್ನು ಒಪ್ಪಿಸಬೇಕು, ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿಸಿಕೊಳ್ಳಬೇಕು, ಕಾರ್ಯಕ್ರಮದ ಬಗೆಗಿನ ಆತಂಕಗಳನ್ನು ಎದುರಿಸಬೇಕು, 25ದಿನಗಳು ತೊಂದರೆ ಆಗದ ರೀತಿಯಲ್ಲಿ ಪ್ರತೀ ದಿನವೂ ಕಷ್ಟ ಪಡಬೇಕು, ದೀಪ ಆರದಂತಿರಲು ಭಯ ಪಡಬೇಕು. ಆದರೆ ಬೆಂಕಿ ಹಚ್ಚುವುದು ಬಹಳ ಸುಲಭ. ಯಾವುದೋ ಮೂಲೆಯಲ್ಲಿ ನಿಂತು ಒಂದು ಕಡ್ಡಿ ಕೀರಿದರೆ ಸಾಕಾಗುತ್ತದೆ. ಅದಕ್ಕಾಗಿ ಬೆಂಕಿ ಹಚ್ಚುವುದು ಬಹಳ ಸುಲಭ, ದೀಪ ಹಚ್ಚುವುದು ಬಹಳ ಕಷ್ಟ. ಈ ದೀಪ ಹಚ್ಚುವ ಕಷ್ಟದ ಕಾಯಕವನ್ನು ಅನೇಕ ವರ್ಷಗಳಿಂದ ಸಂಸ್ಥೆ ನಡೆಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ. ಮಾತಿನ ಮಾಂತ್ರಿಕ ಶಕ್ತಿಯ ಬಗೆಗೆ ರಂಗಭೂಮಿ ಅರಿವು ಮೂಡಿಸುತ್ತದೆ. ಶಾಲೆಗಳಲ್ಲಿ ಸಿಗದ ಬದುಕಿನ ಪಾಠವನ್ನು ಶಿಬಿರಗಳು ನೀಡುತ್ತದೆ.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಕ್ಷತ್ರ ಜುವೆಲ್ಸ್ ಮಾಲಕ ನವೀನ್ ಹೆಗ್ಡೆ ಮಾತನಾಡಿ “ಪಠ್ಯೇತರ ಚಟುವಟಿಕೆಗಳಿಗಾಗಿ ತೆರದುಕೊಂಡ ಶಿಬಿರ ಸುಂದರ ಪ್ರಕೃತಿ ವಾತಾವರಣದಲ್ಲಿ ಸಂಯೋಜಿಸಿಕೊಂಡಿದೆ. ಇಂತಹ ಗುಣಮಟ್ಟದ ಶಿಬಿರಗಳು ಇರುವುದು ಬೆರಳೆಣಿಕೆಯಷ್ಟು ಮಾತ್ರ. ಗುಣಮಟ್ಟದಿಂದಲೇ ಹೆಸರಾದ ಸಂಸ್ಥೆಯ ಕಾರ್ಯಕ್ರಮಗಳನ್ನು ಸಮಾಜ ಯಶಸ್ವೀಗೊಳಿಸಬೇಕು. ಪೋಷಕರು ಇದನ್ನು ಮನಗಂಡು ಮಕ್ಕಳಿಗೆ ಇಂತಹ ಶಿಬಿರದ ಸಂಪರ್ಕ ಹೊಂದಿಸಿಕೊಡಬೇಕು.” ಎಂದರು.
ಪ್ರಸಿದ್ಧ ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಯಕ್ಷಗುರು ಸೀತಾರಾಮ ಶೆಟ್ಟಿ ಕೊಯಿಕೂರು, ಶ್ವೇತಯಾನ ಕಾರ್ಯಾಧ್ಯಕ್ಷ ಸುಜಯ್ ಶೆಟ್ಟಿ, ಗೋಪಾಲ ಪೂಜಾರಿ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಶಿಬಿರದ ನಿರ್ದೇಶಕರಾದ ಅಶೋಕ್ ಮೈಸೂರು, ರಂಜಿತ್ ಶೆಟ್ಟಿ ಬ್ರಹ್ಮಾವರ, ನಾಗೇಶ್ ಕೆದೂರು, ಶ್ರೀಶ ತೆಕ್ಕಟ್ಟೆ ಉಪಸ್ಥಿತರಿದ್ದರು. ಕುಮಾರಿಯರಾದ ಹರ್ಷಿತ ಅಮೀನ್, ಹಾಗೂ ಪರಿಣಿತ ವೈದ್ಯ ಶಿಬಿರಗೀತೆಯನ್ನು ಹೇಳಿದರು. ಮಾಸ್ಟರ್ ಮನೀಷ್ ಕುಂದಾಪುರ ಕಾರ್ಯಕ್ರಮ ನಿರೂಪಣೆಗೈದರು.