ಕಾಸರಗೋಡು : ವಿದುಷಿ ಮಂಜುಳ ಸುಬ್ರಹ್ಮಣ್ಯ ಇವರ ಗುರುತ್ವದಲ್ಲಿ ಪುತ್ತೂರಿನ ನಾಟ್ಯರಂಗದ ಎಡನೀರು ಶಾಖೆಯ ವಿದ್ಯಾರ್ಥಿನಿಯರಾದ ಮಧುಶ್ರೀ, ದೇವಾನಂದ, ಶ್ರೀನಂದ ಹಾಗೂ ನೃತ್ಯ ಗುರುಗಳ ಸಮನ್ವಯದಲ್ಲಿ ಎಡನೀರು ಮಠದ ಭಾರತೀ ಕಲಾಸದನದಲ್ಲಿ ‘ನೃತ್ಯಾವತರಣಂ’ ಪ್ರಸ್ತುತಿಯು ದಿನಾಂಕ 14-04-2024ರಂದು ಸಂಪನ್ನಗೊಂಡಿತು.
ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಶುಭಾಶೀರ್ವಚನ ನೀಡಿ ಮಾತನಾಡುತ್ತಾ “ಕಲಾವಿದರಿಂದ ಕಲಾಪ್ರೇಕ್ಷಕರೆಡೆಗೆ ಕಲಾಪ್ರಜ್ಞೆ ಹರಿದು ಬರಬೇಕು. ಕಲೆ ವ್ಯಕ್ತಿಯನ್ನು ಅರಳಿಸುವ ಕಾರ್ಯದೊಂದಿಗೆ ಸೂಕ್ಷ್ಮಪ್ರಜ್ಞೆಯನ್ನು ಬೆಳೆಸುತ್ತದೆ. ಮಠದ ಸಾನಿಧ್ಯವು ಕಲಾವಿದರಿಗೂ, ಕಲಾಪ್ರೇಕ್ಷಕರಿಗೂ, ಕಲಾ ಪೋಷಕರಿಗೂ, ಭಗವದ್ಭಕ್ತರಿಗೂ ಸದಾ ಆಶ್ರಯ ತಾಣವಾಗಬೇಕು ಎಂಬುದೇ ನಮ್ಮ ಸದಾಶಯ” ಎಂದು ಹೇಳಿದರು.
ಮುಖ್ಯ ಅಭ್ಯಾಗತರ ನೆಲೆಯಲ್ಲಿ ಕೇರಳ ರಾಜ್ಯ ಬಯೋಡೈವರ್ಸಿಟಿ ಬೋರ್ಡ್ ಮೆಂಬರ್ ಸೆಕ್ರೆಟರಿ, ಡಿವೈಎಸ್ಪಿ ಡಾ. ಬಿ. ಬಾಲಕೃಷ್ಣನ್ ಮಾತನಾಡಿ “ಮಠದ ಆಶ್ರಯವು ತಮ್ಮ ಬದುಕಿನಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದು ಪ್ರಸಕ್ತ ಸನ್ನಿವೇಶಗಳಲ್ಲಿ ಕಲಾವಿದರನ್ನು ಸೃಷ್ಟಿಸುವಷ್ಟೇ ಆದ್ಯತೆ ಹಾಗೂ ಪ್ರಾಮುಖ್ಯತೆ ಕಲಾ ಆಸ್ವಾಧಕರನ್ನು ಸೃಷ್ಟಿಸುವಲ್ಲಿ ನೀಡುತ್ತಿರುವುದು ಶ್ಲಾಘನೀಯ” ಎಂದರು.
ಇನ್ನೋರ್ವ ಅಭ್ಯಾಗತರ ನೆಲೆಯಲ್ಲಿ ವಿದುಷಿ ಅನುಪಮಾ ರಾಘವೇಂದ್ರ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಲಾ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನೃತ್ಯ ಗುರುಗಳು ಪ್ರಾಸ್ತಾವಿಕ ಮಾತುಗಳೊಂದಿಗೆ ಆಗಮಿಸಿದವರನ್ನು ಸ್ವಾಗತಿಸಿದರು. ಸ್ವಾಮೀಜಿಯವರು ಕಲಾವಿದರಿಗೆ ಅಭಿನಂದನ ಪತ್ರ ನೀಡಿ ಹರಸಿದರು.
ಸಭಾ ಕಾರ್ಯಕ್ರಮದ ಅನಂತರದಲ್ಲಿ ಗಣೇಶ ಸ್ತುತಿ, ಪುಷ್ಪಾಂಜಲಿ, ಕವಿ ಜಯದೇವ ವಿರಚಿತ ಗೀತ ಗೋವಿಂದ, ಜತಿಸ್ವರ ,ಶಿವಸ್ತುತಿ, ದೇವರ ನಾಮ, ಸೂರದಾಸ ಭಜನ್ ಪ್ರಸ್ತುತಗೊಂಡವು. ನಾಟ್ಯ ರಂಗದ ಪೋಷಕರಾದ ಆಶಾ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿ ಮೇಘಶ್ರೀ ಧನ್ಯವಾದ ಸಮರ್ಪಿಸಿದರು.